‘ಆರೋಗ್ಯ ಸೇತು’ ಆ್ಯಪ್ ಪ್ರತಿಯೊಬ್ಬ ನಾಗರಿಕನ ಸುರಕ್ಷಾ ಕವಚ: ಸಚಿವ ಡಾ.ಕೆ.ಸುಧಾಕರ್

Update: 2020-05-21 17:26 GMT

ಬೆಂಗಳೂರು, ಮೇ 21: ನೋವೆಲ್ ಕೊರೋನ ವೈರಸ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ’ಆರೋಗ್ಯ ಸೇತು’ ಆ್ಯಪ್ ಸಹಕಾರಿಯಾಗಿದೆ, ಇನ್ನೂ ಹೆಚ್ಚು ವ್ಯಾಪಕವಾಗಿ ಇದನ್ನು ಜನರು ಬಳಸುವಂತಾಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಸೇತು ಆ್ಯಪ್ ಪ್ರತಿಯೊಬ್ಬ ನಾಗರಿಕನ ಸುರಕ್ಷಾ ಕವಚವಾಗಿದೆ, ಪ್ರತಿಯೊಬ್ಬ ಸರಕಾರಿ ಸಿಬ್ಬಂದಿಗಳೂ ಇದನ್ನು ಡೌನ್‍ಲೋಡ್ ಮಾಡಿಕೊಳ್ಳುವದು ಕಡ್ಡಾಯವಾಗಿದ್ದು, ಇದನ್ನು ಬಳಸದೆ ಕಚೇರಿಗೆ ಬರುವ ಹಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಆರೋಗ್ಯ ಸೇತು ಒಂದು ಪ್ರಬಲ ಅಸ್ತ್ರವಾಗಿ ಬಳಕೆಯಾಗುತ್ತಿದ್ದು, 10 ಕೋಟಿಗೂ ಅಧಿಕ ಜನರು ಇದನ್ನು ಬಳಸುತ್ತಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಬಳಸಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಮಾಹಿತಿ ನೀಡುತ್ತದೆ. ಬಳಕೆದಾರರ ಸುರಕ್ಷತಾ ದೃಷ್ಟಿಯಿಂದ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎನ್ನುವ ಮಾಹಿತಿಯನ್ನೂ ಕೂಡ ಈ ಆ್ಯಪ್ ನೀಡುತ್ತದೆ ಎಂದು ಅವರು ಹೇಳಿದರು.

ಸೋಂಕಿತರು ನಿಕಟದಲ್ಲಿದ್ದರೆ ಬಳಕೆದಾರರನ್ನು ಈ ಆ್ಯಪ್ ಎಚ್ಚರಿಸುತ್ತದೆ. ಕೊರೋನ ವೈರಸ್ ಕುರಿತಾದ ಎಲ್ಲ, ಸಂದೇಹ, ಗೊಂದಲಗಳಿಗೆ ಉತ್ತರವನ್ನೂ ನೀಡುವ ಈ ಆ್ಯಪ್ ಕೊರೋನ ವಿರುದ್ಧದ ಈ ಹೋರಾಟದಲ್ಲಿ ಒಂದು ಪರಿಣಾಮಕಾರಿ ಸಾಧನವಾಗಿದೆ ಎಂದು ಸುಧಾಕರ್ ತಿಳಿಸಿದರು.

ರಾಜ್ಯದಲ್ಲಿ ಈ ವರೆಗೆ 63 ಲಕ್ಷ ಜನ ಆರೋಗ್ಯ ಸೇತು ಆ್ಯಪ್ ಅನ್ನು ಬಳಸುತ್ತಿದ್ದು ಇದರಲ್ಲಿನ ಸ್ವಯಂ ನಿಗಾ ಪ್ರಕ್ರಿಯೆ ಮೂಲಕ 2,255 ಜನರಿಗೆ ರೆಡ್ ಫ್ಲಾಗ್ ಅಲರ್ಟ್ ನೀಡಲಾಗಿದ್ದು ಅವರೆಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಂದೇಶ ಹೋಗಿದೆ. ಇವರಲ್ಲಿ 233 ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದು 17 ಮಂದಿಗೆ ಪಾಸಿಟೀವ್ ಬಂದಿದೆ ಎಂದು ಅವರು ಹೇಳಿದರು.

ಆ್ಯಪ್ ಮೂಲಕ ಪರೀಕ್ಷೆಗೆ ಒಳಪಟ್ಟವರಲ್ಲಿ ರಾಜ್ಯದ ಶೇ.7.5% ಪಾಸಿಟಿವ್ ಪ್ರಕರಣಗಳು ಬಂದಿದ್ದು ರಾಷ್ಟ್ರೀಯ ಸರಾಸರಿ ಶೇ.30 ರಷ್ಟಿದೆ. ರಾಜ್ಯದ ಜನತೆಯ ಜೀವ ಉಳಿಸುವುದು ಸರಕಾರದ ಆದ್ಯತೆಯಾಗಿದ್ದು ಈ ನಿಟ್ಟಿನಲ್ಲಿ ಈ ಆ್ಯಪ್ ಬಹಳಷ್ಟು ಸಹಕಾರಿಯಾಗಿದೆ ಎಂದು ಸುಧಾಕರ್ ತಿಳಿಸಿದರು.

ಆರೋಗ್ಯ ಸೇತು ಆ್ಯಪ್‍ನ ಸುರಕ್ಷತೆಯ ಬಗ್ಗೆ ಇರುವ ಗೊಂದಲಗಳಿಗೆ ಉತ್ತರಿಸಿದ ಅವರು, ಈ ಆ್ಯಪ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಭಾರತ ಸರಕಾರದ ನೇರ ಸುಪರ್ದಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಡಾಟ ರಿಟೆನ್ಷನ್ ಮತ್ತು ಸುರಕ್ಷತೆಯ ದೃಷ್ಟಿಯಲ್ಲಿ ಸುಸ್ಥಾಪಿತ ಗೌಪ್ಯತೆ ತತ್ವಗಳನ್ನು ಅಳವಡಿಸಿಕೊಂಡಿದೆ, ಅದರ ಬಗ್ಗೆ ಯಾವುದೇ ಆತಂಕ ಬೇಡ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News