ಬೆಂಗಳೂರಿನಾದ್ಯಂತ ಶನಿವಾರ ಸಂಜೆಯಿಂದ ಸೋಮವಾರ ಮುಂಜಾನೆವರೆಗೆ ಕರ್ಫ್ಯೂ: ಭಾಸ್ಕರ್ ರಾವ್

Update: 2020-05-22 15:07 GMT

ಬೆಂಗಳೂರು, ಮೇ 22: ಕೊರೋನ ಸೋಂಕು ಸಂಬಂಧ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆ ಶನಿವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ರವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು.

ಶುಕ್ರವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲಾಕ್‍ಡೌನ್ ಸರಳಗೊಳಿಸಿರುವ ರಾಜ್ಯ ಸರಕಾರ, ರವಿವಾರ ಪೂರ್ಣ ಪ್ರಮಾಣದಲ್ಲಿ ಲಾಕ್‍ಡೌನ್ ಮಾಡಲು ಸೂಚನೆ ಹೊರಡಿಸಿದೆ. ಹೀಗಾಗಿ, ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದರು.

ಇದುವರೆಗಿನ ಲಾಕ್‍ಡೌನ್‍ಗೆ ಸಹಕರಿಸಿದ ರೀತಿಯಲ್ಲೇ ಜನರು ಕರ್ಫ್ಯೂಗೂ ಸಹಕರಿಸಬೇಕು ಎಂದ ಅವರು, ಕರ್ಫ್ಯೂ ಅವಧಿಯಲ್ಲಿ ನಗರದಾದ್ಯಂತ ಬಿಗಿ ಭದ್ರತೆ ಇರಲಿದೆ. ಸಭೆ, ಸಮಾರಂಭಗಳಿಗೆ ಅವಕಾಶ ಇಲ್ಲ. ಅಲ್ಲದೆ, ವೈರಾಣು ಹರಡುವಿಕೆ ತಡೆಯಲು ಸರಕಾರದ ಆದೇಶವನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಅವರು ಹೇಳಿದರು.

ವೈದ್ಯಕೀಯ ಸೇವೆ, ದಿನಸಿ ಸಾಮಾಗ್ರಿ ಹೀಗೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ಇರಲಿದೆ. ಬೇಕಾಬಿಟ್ಟಿಯಾಗಿ ಹಾಗೂ ಅನಗತ್ಯವಾಗಿ ಓಡಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭಾಸ್ಕರ್ ರಾವ್ ಎಚ್ಚರಿಸಿದರು.

ರೈಲು ಸೇವೆ: ಬೆಂಗಳೂರಿನಿಂದ ರವಿವಾರವೂ ಶ್ರಮಿಕ ರೈಲು ಹೊರಡಲಿದ್ದು, ಇದಕ್ಕೆ ಯಾವುದೇ ತೊಂದರೆ ಎದುರಾಗದಂತೆ ನೋಡಿಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮುರುಗನ್, ಸೌಮೇಂದು ಮುಖರ್ಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News