ರಾಜ್ಯಕ್ಕೆ ಎನ್‌ಡಿಆರ್‌ಎಫ್ ಮೂಲಕ 1,054 ಕೋಟಿ ರೂ.ಮಂಜೂರು: ಸಚಿವ ಆರ್.ಅಶೋಕ್

Update: 2020-05-22 15:29 GMT

ಬೆಂಗಳೂರು, ಮೇ 22: ರಾಜ್ಯದಲ್ಲಿ ಈ ವರ್ಷ ಮಳೆಯಿಂದಾಗಿ ಯಾವುದೇ ರೀತಿಯ ಅನಾಹುತಗಳು ಆಗದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರಕಾರವು ಎನ್‌ಡಿಆರ್‌ಎಫ್ ಮೂಲಕ 1054 ಕೋಟಿ ರೂ. ಮಂಜೂರು ಮಾಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಮೊತ್ತದಲ್ಲಿ ಈಗಾಗಲೆ 395 ಕೋಟಿ ರೂ.ಬಿಡುಗಡೆ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿ 201.8 ಕೋಟಿ ರೂ.ಗಳನ್ನು ಸ್ಟೇಟ್ ಡಿಸಾಸ್ಟರ್ ಲಿಟಿಗೇಷನ್ ಫಂಡ್ ಅಂತ ಹೊಸದಾಗಿ ಬಿಡುಗಡೆ ಮಾಡಿದ್ದಾರೆ ಎಂದರು.

ಕಳೆದ ವರ್ಷ ಪ್ರವಾಹದಿಂದಾಗಿ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು. ಕೇಂದ್ರ ಸರಕಾರವು 336 ಕೋಟಿ ರೂ.ಗಳನ್ನು ಒದಗಿಸಿತ್ತು. ಈ ಬಾರಿ 15ನೆ ಹಣಕಾಸು ಆಯೋಗ ಸಭೆಯಲ್ಲಿ ಚರ್ಚಿಸಿರುವಂತೆ ರಾಜ್ಯಕ್ಕೆ ಎನ್‌ಡಿಆರ್‌ಎಫ್ ಅಡಿಯಲ್ಲಿ 1,054 ಕೋಟಿ ರೂ.ಗಳು ಸಿಗಲಿದೆ ಎಂದು ಅಶೋಕ್ ಹೇಳಿದರು.

ಪ್ರವಾಹ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕುವವರ ಪುನರ್ ವಸತಿಗಾಗಿ ಆಸ್ಪತ್ರೆ, ಆಶ್ರಯ ತಾಣ ಸೇರಿದಂತೆ ಇನ್ನಿತರ ಸೌಲಭ್ಯಗಳಿಗಾಗಿ 210 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, 843 ಕೋಟಿ ರೂ.ಗಳನ್ನು ಪ್ರಕೃತಿ ವಿಕೋಪದ ನಿರ್ವಹಣೆಗಾಗಿ ಬಳಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

ಕಳೆದ ವರ್ಷದ ಪ್ರವಾಹದಿಂದಾಗಿ 6.5 ಹೆಕ್ಟೇರ್ ಬೆಳೆ ನಷ್ಟ ಆಗಿತ್ತು. ಅದಕ್ಕಾಗಿ ರೈತರಿಗೆ 1,185 ಕೋಟಿ ರೂ. ಪರಿಹಾರ ಹಣವನ್ನು ಅವರ ಖಾತೆಗಳಿಗೆ ಜಮೆ ಮಾಡಲಾಗಿದೆ. ರಾಜ್ಯದ ನಾಲ್ಕೈದು ಜಿಲ್ಲೆಗಳನ್ನು ಹೊರತುಪಡಿಸಿ ಈ ಬಾರಿ ಸಾಮಾನ್ಯ ಮುಂಗಾರು ಮಳೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅಶೋಕ್ ಹೇಳಿದರು.

ಪ್ರವಾಹದಿಂದ ಹಾನಿಗೊಳಗಾಗಿರುವ ಮನೆಗಳ ನಿರ್ಮಾಣಕ್ಕಾಗಿ 557.67 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮಳೆಯಿಂದಾಗಿ ಶೇ.75ಕ್ಕಿಂತ ಹೆಚ್ಚಿನ ಹಾನಿಗೆ ಒಳಗಾಗಿದ್ದ 32,482 ಮನೆಗಳ ಪುನರ್ ನಿರ್ಮಾಣಕ್ಕಾಗಿ 5 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲು ಸರಕಾರ ನಿರ್ಧರಿಸಿತ್ತು. ಈ ಪೈಕಿ ಮೊದಲ ಕಂತಿನಲ್ಲಿ ತಲಾ 1 ಲಕ್ಷ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

11,037 ಮನೆಗಳಿಗೆ ತಲಾ 2 ಲಕ್ಷ ರೂ., 4,582 ಮನೆಗಳಿಗೆ 3 ಲಕ್ಷ ರೂ., 656 ಮನೆಗಳಿಗೆ ತಲಾ 4 ಲಕ್ಷ ರೂ., ಒಟ್ಟು 47 ಮನೆಗಳಿಗೆ ಸಂಪೂರ್ಣ 5 ಲಕ್ಷ ರೂ. ಪರಿಹಾರ ಹಣ ನೀಡಲಾಗಿದೆ ಎಂದು ಅಶೋಕ್ ಹೇಳಿದರು.

ಪ್ರವಾಹ ಪೀಡಿತ ಪ್ರದೇಶದಲ್ಲಿ ಇನ್ನು ಸುಮಾರು 12,662 ಮನೆಗಳ ಕಾಮಗಾರಿಯೆ ಪ್ರಾರಂಭವಾಗಿಲ್ಲ. ಆ ಮನೆಗಳ ನಿರ್ಮಾಣ ಕಾರ್ಯ ಆದಷ್ಟು ಬೇಗ ಪ್ರಾರಂಭಿಸುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಎಲ್ಲಾ ಡಿಸಿಗಳಿಗೆ ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದರು.

ಕಾಂಗ್ರೆಸ್ ನಾಯಕರದು ಅನಗತ್ಯ ಗೊಂದಲ

ಗ್ರಾಮ ಪಂಚಾಯತ್ ಚುನಾವಣೆಗಳ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರಕಾರವಿದ್ದಾಗ ಗ್ರಾಮ ಪಂಚಾಯತ್ ಚುನಾವಣೆ ಮಾಡಿದ್ರಾ? ಬಿಬಿಎಂಪಿ ಚುನಾವಣೆಯನ್ನು ಎಷ್ಟು ದಿನ ಮುಂದೂಡಿದರು ಎಂಬುದು ಜನತೆಗೆ ಗೊತ್ತಿದೆ. ಸಂವಿಧಾನ ಹಾಗೂ ಕಾನೂನನ್ನು ಆಧರಿಸಿ ಪಂಚಾಯತ್ ಚುನಾವಣೆಗಳ ಕುರಿತು ಸರಕಾರ ತೀರ್ಮಾನ ಕೈಗೊಳ್ಳುತ್ತದೆ. ಈ ಬಗ್ಗೆ ಯಾರಿಗೂ ಸಂಶಯಬೇಡ.

-ಆರ್.ಅಶೋಕ್, ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News