ಬೆಂಗಳೂರು: ಬೀದಿಬದಿ ಅಂಗಡಿಗಳ ಮೇಲೆ ಕೇಸರಿ ಧ್ವಜ; ವಿವಾದಿತ ಘೋಷಣೆ ಕೂಗಿದ ಸಂಘಪರಿವಾರದ ಕಾರ್ಯಕರ್ತರು

Update: 2020-05-22 16:59 GMT

ಬೆಂಗಳೂರು, ಮೇ.22: ಇಲ್ಲಿನ ವಿಜಯನಗರ ವ್ಯಾಪ್ತಿಯ ಅಂಗಡಿಗಳ ಮೇಲೆ ಉದ್ದೇಶಪೂರ್ವಕವಾಗಿ ಕೇಸರಿ ಧ್ವಜ ಹಾರಿಸಿದ ಸಂಘಪರಿವಾರ ಕಾರ್ಯಕರ್ತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಕೀಲರೊಬ್ಬರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಶುಕ್ರವಾರ ಇಲ್ಲಿನ ವಿಜಯನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವ ವಕೀಲೆ ಮೈತ್ರೆಯಿ ಕೃಷ್ಣನ್, ಕೊರೋನ ಸೋಂಕಿನ ವಿರುದ್ಧ ಜಾತಿ, ಧರ್ಮ ಮರೆತು ಪ್ರತಿಯೊಬ್ಬರು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿ ವಿಜಯನಗರ ವ್ಯಾಪ್ತಿಯ ಅಂಗಡಿಗಳ ಮೇಲೆ ಕೇಸರಿ ಧ್ವಜ ಹಾರಿಸಿ, ಕೋಮು ಭಾವನೆ ಹುಟ್ಟು ಹಾಕುತ್ತಿರುವವ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಏನಿದು ಪ್ರಕರಣ?: ಕಳೆದ ನಾಲ್ಕು ದಿನಗಳ ಹಿಂದೆ ಭಜರಂಗದಳದ ಮುಖಂಡ ಎನ್ನಲಾದ ಎಂ.ಎಲ್.ಶಿವಕುಮಾರ್ ಗೌಡ ಎಂಬಾತ, ಇಲ್ಲಿನ ವಿಜಯನಗರ ವ್ಯಾಪ್ತಿಯ ಬೀದಿ ಬದಿ ಅಂಗಡಿಗಳ ಮೇಲೆ ಕೇಸರಿ ಧ್ವಜ ಹಾರಿಸಿದ್ದಾನೆ. ಇನ್ನು, ಇದೇ ಸಂದರ್ಭದಲ್ಲಿ ಸಂಘಪರಿವಾರದ ಕೆಲ ಕಾರ್ಯಕರ್ತರು ಹಿಂದೂಗಳು ಮಾತ್ರ ಇಲ್ಲಿ ವ್ಯಾಪಾರ ಮಾಡಬೇಕು. ಬೇರೆ ಧರ್ಮದ ವ್ಯಾಪಾರಿಗಳಿಗೆ ಅವಕಾಶ ಇಲ್ಲ ಎಂದು ವಿವಾದಿತ ಘೋಷಣೆಗಳು ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೊಲೀಸ್ ಠಾಣೆ ಸಮೀಪ: ಕೋಮುಭಾವನೆ ಕೆರಳಿಸುವ ಉದ್ದೇಶದಿಂದಾಗಿಯೇ ಕೇಸರಿ ಧ್ವಜ ಹಾರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಅಲ್ಲದೆ, ಈ ಘಟನೆಯು ವಿಜಯನಗರ ಪೊಲೀಸ್ ಠಾಣೆಯ ಸಮೀಪದಲ್ಲಿಯೇ ನಡೆದಿದೆ ಎಂದು ತಿಳಿದುಬಂದಿದೆ. 

ಹೊರಟ ಮೇಲೆ ಕಟ್ಟಿದರು..!
ವಿಜಯನಗರ ಮಾರುಕಟ್ಟೆ ವ್ಯಾಪ್ತಿಯಲ್ಲಿ ಸಂಘಪರಿವಾರದ ಕಾರ್ಯಕರ್ತರು ಉದ್ದೇಶ ಪೂರ್ವಕವಾಗಿಯೇ ಅಂಗಡಿಗಳ ಮೇಲೆ ಕೇಸರಿ ಧ್ವಜ ಹಾರಿಸಿದ್ದಾರೆ.ಈ ಸಂದರ್ಭದಲ್ಲಿ ಬಹುತೇಕ ಅಂಗಡಿ ಮಾಲಕರು ವಿರೋಧ ವ್ಯಕ್ತಪಡಿಸಿದರು. ಬಳಿಕ, ಅವರೆಲ್ಲಾ ಹೋದ ಮೇಲೆ ರಾತ್ರಿ ವೇಳೆ ಧ್ವಜ ಕಟ್ಟಿ ಹೋಗಿದ್ದು, ಈ ಸಂಬಂಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
-ಕೆ.ಎಸ್.ವಿನಯ್, ಬೆಂಗಳೂರು ಜಿಲ್ಲಾಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ(ಎಐಸಿಸಿಟಿಯು) 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News