ಲಂಚ ಸ್ವೀಕಾರ ಆರೋಪ: ಪೊಲೀಸ್ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

Update: 2020-05-22 16:27 GMT

ಬೆಂಗಳೂರು, ಮೇ 22: ಸಿಗರೇಟ್ ವಿತರಕರಿಂದ ಲಂಚ ಸ್ವೀಕಾರ ಆರೋಪ ಸಂಬಂಧ ಮೂವರು ಪೊಲೀಸ್ ಅಧಿಕಾರಿಗಳೂ ಸೇರಿದಂತೆ 6 ಮಂದಿಯ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖಾಧಿಕಾರಿಗಳು ದಾಳಿ ನಡೆಸಿದ್ದಾರೆ.

ಎಸಿಪಿ ಪ್ರಭುಶಂಕರ್, ಇನ್ಸ್ ಪೆಕ್ಟರ್ ಗಳಾದ ಆರ್.ಎಂ.ಅಜಯ್, ನಿರಂಜನ್ ಕುಮಾರ್, ಮಧ್ಯವರ್ತಿಗಳಾದ ಬಾಬುರಾಜೇಂದ್ರ ಪ್ರಸಾದ್, ಆದಿಲ್ ಅಝೀಝ್, ಭೂಷಣ್ ಅವರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಇಲ್ಲಿನ ಸಹಕಾರ ನಗರದಲ್ಲಿರುವ ಪ್ರಭುಶಂಕರ್ ನಿವಾಸ, ಎಚ್‍ಬಿಆರ್ ಲೇಔಟ್‍ನಲ್ಲಿ ಅಜಯ್ ನಿವಾಸ ಹಾಗೂ ನಿರಂಜನ್‍ಕುಮಾರ್ ಅವರ ಬಸವೇಶ್ವರ ನಗರ ನಿವಾಸ. ಜೊತೆಗೆ ಮೈಸೂರು ಸರ್ಕಲ್‍ನಲ್ಲಿರುವ ಸಿಸಿಬಿ ಆರ್ಥಿಕ ಅಪರಾಧ ದಳದ ಎಸಿಪಿ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ಅದೇ ರೀತಿ, ಖಾಸಗಿ ಮಧ್ಯವರ್ತಿಯಾದ ಬಾಬುರಾಜೇಂದ್ರ ಪ್ರಸಾದ್‍ ರ ಯಲಹಂಕ ಉಪನಗರದ ಮನೆ, ಆದಿಲ್ ಅಝೀಝ್ ನೆಲೆಸಿರುವ ಶಾಂತಿನಗರದ ಮನೆ, ಭೂಷಣ್ ಅವರ ಯಲಹಂಕ ಉಪನಗರದ ನಿವಾಸ ಮತ್ತು ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ ಎಂದು ಎಸಿಬಿ ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News