ಬೆಂಗಳೂರು: ವಿವಾಹವಾಗಲು ನಿರಾಕರಿಸಿದ ಯುವತಿಯ ಕೊಲೆಗೈದು ಠಾಣೆಗೆ ಶರಣಾದ ಯುವಕ

Update: 2020-05-22 17:09 GMT

ಬೆಂಗಳೂರು, ಮೇ 22: ಸಹಜೀವನ(ಲಿವಿಂಗ್ ಟುಗೆದರ್) ನಡೆಸುತ್ತಿದ್ದ ಯುವತಿಯು ವಿವಾಹವಾಗಲು ನಿರಾಕರಿಸಿದ್ದಕ್ಕೆ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಇಲ್ಲಿನ ಮಾರತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಿಕ್ಕಮಗಳೂರಿನ ತರೀಕೆರೆ ಮೂಲದ ನಯನಾ(25) ಕೊಲೆಯಾದ ಯುವತಿಯಾಗಿದ್ದು, ಪಾವಗಡ ಮೂಲದ ಕಾರು ಚಾಲಕ ತಿಪ್ಪೇಸ್ವಾಮಿ, ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

ದಿನಸಿ ಸಾಮಗ್ರಿ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ನಯನಾಗೆ 8 ತಿಂಗಳ ಹಿಂದೆ ತಿಪ್ಪೇಸ್ವಾಮಿ ಜತೆ ಪರಿಚಯವಾಗಿದೆ. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿದ್ದು, ಬಳಿಕ ನಾಲ್ಕು ತಿಂಗಳಿಂದ ಸಹಜೀವನ(ಲಿವಿಂಗ್ ಟುಗೆದರ್) ನಡೆಸುತ್ತಿದ್ದರು. ಇತ್ತೀಚೆಗೆ ನಯನಾ ಬೇರೆ ಹುಡುಗನ ಜೊತೆ ಮೊಬೈಲಿನಲ್ಲಿ ಮಾತನಾಡುತ್ತಿದ್ದಳು. ಮೇ 19ರ ರಾತ್ರಿ ಈ ಬಗ್ಗೆ ತಿಪ್ಪೇಸ್ವಾಮಿ ವಿಚಾರಿಸಿದಾಗ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ತಿಪ್ಪೇಸ್ವಾಮಿ ಚಾಕುವಿನಿಂದ ನಯನಾ ಮೇಲೆ ಹಲ್ಲೆ ಮಾಡಿದಾಗ, ನಯನಾ ಸಹ ಹಲ್ಲೆ ಮಾಡಿದ್ದಾಳೆ. ಇದರಿಂದ ಆಕ್ರೋಶಗೊಂಡ ತಿಪ್ಪೇಸ್ವಾಮಿ ಮಾರಣಾಂತಿಕ ಹಲ್ಲೆ ನಡೆಸಿ ನಯನಾರ ಹತ್ಯೆ ಬಳಿಕ ಬಳಿಕ ಮಾರತಹಳ್ಳಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News