ಪಾಕ್ ನಲ್ಲಿ ವಿಮಾನ ಪತನ: 97 ಮಂದಿ ಮೃತ್ಯು

Update: 2020-05-23 17:33 GMT

ಕರಾಚಿ (ಪಾಕಿಸ್ತಾನ), ಮೇ 23: ಪಾಕಿಸ್ತಾನದ ದಕ್ಷಿಣದ ನಗರ ಕರಾಚಿಯಲ್ಲಿ ಶುಕ್ರವಾರ ಪ್ರಯಾಣಿಕ ವಿಮಾನವೊಂದು ಮನೆಗಳ ಮೇಲೆ ಅಪ್ಪಳಿಸಿ ಪತನಗೊಂಡ ಘಟನೆಯಲ್ಲಿ 97 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಅದೇ ವೇಳೆ, ಇಬ್ಬರು ಪವಾಡಸದೃಶವಾಗಿ ಬದುಕುಳಿದಿದ್ದಾರೆ.

ಕರಾಚಿ ವಿಮಾನ ನಿಲ್ದಾಣದ ಸಮೀಪದ ಸ್ಥಳದಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಯ ಮೃತದೇಹಗಳನ್ನು ಪಡೆದುಕೊಳ್ಳಲಾಗಿದೆ ಎಂದು ಸಿಂಧ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಶುಕ್ರವಾರ ಅಪರಾಹ್ನ ಅಪಘಾತ ಸಂಭವಿಸಿದ ಬಳಿಕ ಆರಂಭವಾದ ರಕ್ಷಣಾ ಕಾರ್ಯಾಚರಣೆ ಶನಿವಾರ ಮುಂಜಾನೆ ಮುಗಿಯಿತು.

ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ)ಗೆ ಸೇರಿದ ವಿಮಾನವು ಲಾಹೋರ್‌ನಿಂದ ಕರಾಚಿಗೆ 91 ಪ್ರಯಾಣಿಕರು ಮತ್ತು 7 ಸಿಬ್ಬಂದಿಯನ್ನು ಹೊತ್ತು ಹಾರುತ್ತಿತ್ತು. ಅದು ಮಧ್ಯಾಹ್ನ ಸ್ಥಳೀಯ ಸಮಯ 2:30ಕ್ಕೆ ವಾಯು ಸಂಚಾರ ನಿಯಂತ್ರಣ ಕೊಠಡಿಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತು ಎಂದು ಪಿಐಎ ಖಚಿತಪಡಿಸಿದೆ.

ಅದು ಏರ್‌ಬಸ್ ಎ320 ವಿಮಾನವಾಗಿತ್ತು ಹಾಗೂ ಅತ್ಯಂತ ಸುರಕ್ಷಿತ ವಿಮಾನಗಳ ಪೈಕಿ ಒಂದಾಗಿತ್ತು. ತಾಂತ್ರಿಕವಾಗಿ ಹಾಗೂ ಕಾರ್ಯಾಚರಣೆ ವಿಷಯದಲ್ಲಿ ಎಲ್ಲವೂ ಸರಿಯಾಗಿತ್ತು ಎಂದು ಪಿಐಎ ವಕ್ತಾರರೊಬ್ಬರು ತಿಳಿಸಿದರು. ಈ ವಿಮಾನವನ್ನು 2014ರಲ್ಲಿ ಖರೀದಿಸಲಾಗಿತ್ತು ಎಂದರು.

ವಿಮಾನದ ಪೈಲಟ್ ಸಜ್ಜದ್ ಗುಲ್ ಅತ್ಯಂತ ಹಿರಿಯ ಎ320 ವಿಮಾನದ ಪೈಲಟ್ ಆಗಿದ್ದರು ಹಾಗೂ ಅಪಾರ ಹಾರಾಟ ಅನುಭವವನ್ನು ಹೊಂದಿದ್ದರು ಎಂದು ಅವರು ಹೇಳಿದರು. ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದ ಬಳಿಕ, ಕೆಲವೇ ದಿನಗಳ ಹಿಂದೆ ಅವುಗಳು ಕಾರ್ಯಾಚರಣೆಗೆ ಮರಳಿದ್ದವು.

ವಿಮಾನವು ಜನವಸತಿ ಸ್ಥಳಕ್ಕೆ ಅಪ್ಪಳಿಸಿದ್ದು, ಹಲವಾರು ಕಟ್ಟಡಗಳು ಧ್ವಂಸಗೊಂಡಿವೆ ಹಾಗೂ ಬಿರುಕುಬಿಟ್ಟಿವೆ. ಅಂತಿಮವಾಗಿ ವಿಮಾನವು ರಸ್ತೆಯೊಂದರ ಮೇಲೆ ಅಪ್ಪಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News