ಗುಜರಾತ್: ಬೃಹತ್ ಫಾರ್ಮಾ ಕಂಪೆನಿ 'ಕ್ಯಾಡಿಲಾ'ದ ಮೂವರು ಉದ್ಯೋಗಿಗಳು ಕೊರೋನಗೆ ಬಲಿ

Update: 2020-05-23 18:14 GMT

ಅಹ್ಮದಾಬಾದ್: ಗುಜರಾತ್ ಮೂಲದ ಬೃಹತ್ ಫಾರ್ಮಾ ಕಂಪೆನಿ ಕ್ಯಾಡಿಲಾ ಫಾರ್ಮಾಸ್ಯೂಟಿಕಲ್ಸ್ ನ ಮೂವರು ಉದ್ಯೋಗಿಗಳು ಕೊರೋನ ವೈರಸ್ ನಿಂದ ಮೃತಪಟ್ಟಿದ್ದಾರೆ. ಈ ಕಂಪೆನಿಯ 35 ಜನರು ಕೊರೋನ ವೈರಸ್ ಸೋಂಕಿಗೊಳಗಾಗಿದ್ದಾರೆ.

ಹಲವು ಉದ್ಯೋಗಿಗಳು ಕೊರೋನ ಪಾಸಿಟಿವ್ ಆದ ನಂತರ ಮೇ 7ರಂದು ಈ ಕಂಪೆನಿಯ ಬಾಗಿಲು ಮುಚ್ಚಲಾಗಿತ್ತು. ಮೃತರಲ್ಲಿ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಧೋಲ್ಕಾ ನಿವಾಸಿಯಾದ ಮತ್ತೊಬ್ಬ ಉದ್ಯೋಗಿ ಮನೆಯಲ್ಲೇ ಇದ್ದರು ಎನ್ನಲಾಗಿದೆ.

“ನಮ್ಮ ಉದ್ಯೋಗಿಗಳ ಸಾವಿನಿಂದ ದುಃಖಿತರಾಗಿದ್ದೇವೆ. ಸೋಂಕಿತರು ಮತ್ತು ಮೃತರ ಕುಟುಂಬದ ಜೊತೆ ನಾವು ರಚಿಸಿದ ತಂಡಗಳು ಮಾತುಕತೆ ನಡೆಸುತ್ತಿವೆ” ಎಂದ ಕ್ಯಾಡಿಲಾದ ವಕ್ತಾರರು ತಿಳಿಸಿದ್ದಾರೆ.

   ಕೊರೋನ ಸೋಂಕಿನಿಂದ ಮೃತಪಟ್ಟವರನ್ನು ಔಷಧ ಉತ್ಪಾದನಾ ಘಟಕದ ಸಹಾಯಕ ಜನರಲ್ ಮ್ಯಾನೇಜರ್ ಹಿಮಾಂಶು ಕವಾತಿಯಾ, ಪ್ಯಾಕೇಜಿಂಗ್ ವಿಭಾಗದ ಅಶೋಕ್ ಪಟೇಲ್ ಹಾಗೂ ಗುತ್ತಿಗೆ ಕಾರ್ಮಿಕ ಉಮೇಶ್ ಚೌಹಾಣ್ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ 40ರಿಂದ 58 ವರ್ಷದೊಳಗಿನವರಾಗಿದ್ದಾರಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

 ಮೃತರಲ್ಲೊಬ್ಬನಾದ ಉಮೇಶ್ ಧೋಲ್ಕಾ ಜಿಲ್ಲೆಯ ಭಟ್ ಗ್ರಾಮದಲ್ಲಿರುವ ತನ್ನ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದನು. ಆತನ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದುದರಿಂದ ವೈದ್ಯರು ಆತನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮನೆಗೆ ಕಳುಹಿಸಿದ್ದರು. ಆದಾಗ್ಯೂ ಮೂರು ದಿನಗಳ ಆನಂತರ ಆತನ ಆರೋಗ್ಯ ಬಿಗಡಾಯಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News