ಅರಮನೆ ಮೈದಾನದಲ್ಲಿ ಸೇರಿದ ಕಾರ್ಮಿಕರು: ರಾಜ್ಯ ಸರಕಾರದ ವಿರುದ್ಧ ಡಿ.ಕೆ.ಶಿವಕುಮಾರ್ ಆಕ್ರೋಶ

Update: 2020-05-23 15:13 GMT

ಬೆಂಗಳೂರು, ಮೇ 23: ನಗರದ ಅರಮನೆ ಮೈದಾನದಲ್ಲಿರುವ ವಲಸೆ ಕಾರ್ಮಿಕರ ಸ್ಥಿತಿಯನ್ನು ನೋಡಿ ಸಂಕಟವಾಗುತ್ತಿದೆ. 20 ಸಾವಿರಕ್ಕೂ ಹೆಚ್ಚು ಜನರು ಬೆಳಗ್ಗೆ 6ಗಂಟೆಯಿಂದ ಅಲ್ಲಿದ್ದಾರೆ. ಅವರಿಗೆ ಕನಿಷ್ಠ ಊಟ, ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಸರಕಾರ 1 ಸಾವಿರ ರೂ. ರೈಲ್ವೆ ವೆಚ್ಚವನ್ನು ಭರಿಸುವುದಾಗಿ ಹೇಳಿ, ಇದೀಗ ಪ್ರಯಾಣದ ವೆಚ್ಚ ಅವರೇ ಭರಿಸಬೇಕು ಎಂದು ಹೇಳುತ್ತಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಇಲ್ಲಿನ ಅರಮನೆ ಮೈದಾನದಲ್ಲಿರುವ ಈಶಾನ್ಯ ರಾಜ್ಯಗಳ ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ನಾನು ಸರಕಾರಕ್ಕೆ ಮತ್ತೊಮ್ಮೆ ಹೇಳುತ್ತಿದ್ದೇನೆ, ಕೆಪಿಸಿಸಿಯಿಂದ ತಕ್ಷಣದಲ್ಲಿಯೇ ಎಲ್ಲರ ರೈಲ್ವೆ ಪ್ರಯಾಣದ ವೆಚ್ಚವನ್ನು ಭರಿಸಲು ಸಿದ್ದರಿದ್ದೇವೆ. ದಯವಿಟ್ಟು ಅವರನ್ನು ಅವರ ರಾಜ್ಯಕ್ಕೆ ಕಳುಹಿಸಿಕೊಡಿ. ಇಲ್ಲವೇ ನಮಗೆ ಅವಕಾಶ ಮಾಡಿಕೊಡಿ. ಅವರಿಗೆ ಊಟದ ವ್ಯವಸ್ಥೆ ಮಾಡಿ ಪ್ರಯಾಣದ ವೆಚ್ಚವನ್ನೂ ಭರಿಸಿ ಕಳುಹಿಸಿಕೊಡುತ್ತೇನೆ' ಎಂದು ಗುಡುಗಿದರು.

ನಮ್ಮ ರಾಜ್ಯದ ಏಳ್ಗೆಗಾಗಿ ದುಡಿದ ಕಾರ್ಮಿಕರು ಅನ್ನ-ನೀರಿಲ್ಲದೆ ತಮ್ಮ ಊರುಗಳಿಗ ತೆರಳಲು ಒಡಿಶಾ ಮತ್ತು ಈಶಾನ್ಯ ರಾಜ್ಯಗಳ ನೂರಾರು ವಲಸೆ ಕಾರ್ಮಿಕರು ಅರಮನೆ ಮೈದಾನದಲ್ಲಿ ಬೀಡುಬಿಟ್ಟಿದ್ದಾರೆ. ಅವರ ಪರಿಸ್ಥಿತಿಯನ್ನು ನೋಡಿದರೆ ಹೊಟ್ಟೆ ಉರಿಯುತ್ತದೆ. ಅಧಿಕಾರಿಗಳನ್ನು ಕೂಡಲೇ ಕಳುಹಿಸಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ನಾನು ಆ ವಲಸೆ ಕಾರ್ಮಿಕರ ಜೊತೆ ಮಾತನಾಡಿದೆ, ಅವರಿಗೆ ಸರಕಾರದ ಯಾವುದೇ ನೆರವು ಸಿಕ್ಕಿಲ್ಲ. ನಿಮಗೆ ಹಣ ನೀಡಬೇಕೇ ಹೇಳಿ ಈ ಕ್ಷಣದಲ್ಲೇ ನಾವು ಚೆಕ್ ಅಥವಾ ಡಿಡಿ ಮೂಲಕ ಕಾರ್ಮಿಕರ ರೈಲ್ವೆ ಪ್ರಯಾಣದ ವೆಚ್ಚ ಭರಿಸಲು ಸಿದ್ಧ. ನಿಮಗೆ ಆಗುವುದಿಲ್ಲ ಎಂದರೆ ನಮಗೆ ಅವಕಾಶ ಕೊಡಿ. ನಾವು ಅವರಿಗೆ ಎಲ್ಲ ವ್ಯವಸ್ಥೆ ಮಾಡುತ್ತೇವೆ. ಮುಖ್ಯಮಂತ್ರಿ ಯಡಿಯೂರಪ್ಪನವರೇ ರಾಜ್ಯದ ಮರ್ಯಾದೆ ಹೋಗುತ್ತಿದೆ. ಕೂಡಲೇ ಎಚ್ಚೆತ್ತು ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಮಾಡಿ ಎಂದು ಶಿವಕುಮಾರ್ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News