ಹದಿನಾಲ್ಕು ದಿನಗಳಿದ್ದ ಕ್ವಾರಂಟೈನ್ ಅವಧಿಯನ್ನು 7 ದಿನಗಳಿಗೆ ಇಳಿಸಿದ ರಾಜ್ಯ ಸರಕಾರ

Update: 2020-05-23 15:28 GMT

ಬೆಂಗಳೂರು, ಮೇ 23: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆ ಹೊರ ರಾಜ್ಯಗಳಿಂದ ಆಗಮಿಸುವವರಿಗೆ ಹದಿನಾಲ್ಕು ದಿನಗಳಿದ್ದ ಕ್ವಾರಂಟೈನ್ ಅವಧಿಯನ್ನು ಒಂದು ವಾರಗಳಿಗೆ ಇಳಿಸಿ ರಾಜ್ಯ ಸರಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ದಿಲ್ಲಿ, ರಾಜಸ್ಥಾನ ಸೇರಿದಂತೆ ಕೊರೋನ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರು ರಾಜ್ಯಕ್ಕೆ ಆಗಮಿಸಲು 'ಸೇವಾ ಸಿಂಧು' ಯೋಜನೆಯಡಿ ಹೆಸರು ನೋಂದಣಿ ಮಾಡಿ ಪಾಸ್ ಪಡೆದಿರುವವರು ರಾಜ್ಯ ಸರಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಆರೋಗ್ಯ ಇಲಾಖೆ ನಿಗದಿಪಡಿಸಿರುವ ಹೊಟೇಲ್ ಅಥವಾ ಸಮುದಾಯ ಭವನಗಳಲ್ಲಿ ಕಡ್ಡಾಯವಾಗಿ ಒಂದು ವಾರ ಕಾಲ ಕ್ವಾರಂಟೈನ್‍ನಲ್ಲಿರಬೇಕು. ಈ ಅವಧಿಯಲ್ಲಿ ಗಂಟಲು ದ್ರವ ಸಂಗ್ರಹಿಸಿ ಕೊರೋನ ಸೋಂಕು ಪರೀಕ್ಷೆ ನಡೆಸಲಾಗುವುದು. ಮೇಲ್ಕಂಡ ರಾಜ್ಯಗಳನ್ನು ಹೊರತುಪಡಿಸಿ ಇತರೆ ರಾಜ್ಯಗಳಿಂದ ಆಗಮಿಸುವವರಿಗೆ ಹೋಮ್ ಕ್ವಾರಂಟೈನ್‍ನಲ್ಲಿ ಇರಿಸಲಾಗುವುದು.

ಕೊರೋನ ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಹತ್ತು ದಿನವಾದರೂ ರೋಗದ ಲಕ್ಷಣ ಕಾಣಿಸಿಕೊಳ್ಳದಿದ್ದರೆ ಮಾತ್ರ ಈ ಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಒಂದು ವೇಳೆ ರೋಗಿಗೆ ಮನೆಯಲ್ಲಿ ಕ್ವಾರಂಟೈನ್ ಆಗಲು ಸೂಕ್ತ ಸೌಲಭ್ಯಗಳಿಲ್ಲದಿದ್ದರೆ ಸರಕಾರವೇ ಬದಲಿ ವ್ಯವಸ್ಥೆ ಮಾಡಲಿದೆ. ಸೋಂಕಿತರು ಹೆಚ್ಚಿರುವ ರಾಜ್ಯಗಳಿಂದ ಆಗಮಿಸುವ 60 ವರ್ಷ ಮೇಲ್ಪಟ್ಟ ವೃದ್ಧರು ಮತ್ತು ಹತ್ತು ವರ್ಷದೊಳಗಿನ ಮಕ್ಕಳು-ಗರ್ಭಿಣಿಯರಿಗೆ ವಿನಾಯಿತಿ ನೀಡಲಾಗಿದೆ. ಇವರು ನೇರವಾಗಿ ಮನೆಗೆ ಹೋಗಿ ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿರಬೇಕು ಎಂದು ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News