ವಿಧಾನಪರಿಷತ್ ಸ್ಥಾನಗಳಿಗಾಗಿ ಬಿಜೆಪಿಯಲ್ಲಿ ಲಾಬಿ ಆರಂಭ

Update: 2020-05-23 15:30 GMT

ಬೆಂಗಳೂರು, ಮೇ 23: ಕೊರೋನ ಮಹಾಮಾರಿಯ ಅಟ್ಟಹಾಸದ ನಡುವೆಯೆ ಆಡಳಿತರೂಢ ಬಿಜೆಪಿಯಲ್ಲಿ ವಿಧಾನಪರಿಷತ್ತಿನ ನಾಮ ನಿದೇರ್ಶನ ಸ್ಥಾನಗಳಿಗಾಗಿ ಲಾಬಿ ಆರಂಭವಾಗಿದೆ.

ಜೂನ್ ತಿಂಗಳಲ್ಲಿ ವಿಧಾನ ಪರಿಷತ್ತಿನ 5 ಸ್ಥಾನಗಳನ್ನು ಖಾಲಿಯಾಗಲಿವೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೆ ಆಕಾಂಕ್ಷಿಗಳು ಪಕ್ಷದ ಹಿರಿಯ ನಾಯಕರ ಬಳಿ ತಮ್ಮ ಸ್ಥಾನ ಖಚಿತಪಡಿಸಿಕೊಳ್ಳಲು ದುಂಬಾಲು ಬಿದ್ದಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಪತನಗೊಂಡು, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾಗಿದ್ದ ಅನರ್ಹ ಶಾಸಕರ ಪೈಕಿ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಎಂಟಿಬಿ ನಾಗರಾಜ್, ಎಚ್.ವಿಶ್ವನಾಥ್ ಹಾಗೂ ಟಿಕೆಟ್ ಕೈತಪ್ಪಿದ್ದ ಆರ್.ಶಂಕರ್ ವಿಧಾನಪರಿಷತ್ತಿಗೆ ನಾಮ ನಿದೇರ್ಶನಗೊಳ್ಳಲು ಮುಖ್ಯಮಂತ್ರಿ ಮೇಲೆ ಈಗಾಗಲೆ ಒತ್ತಡ ಹೇರುತ್ತಿದ್ದಾರೆ.

ಕೆಲವು ಜಿಲ್ಲೆಗಳಲ್ಲಿ ಪ್ರಬಲವಾಗಿರುವ ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಲಾಬಿ ಆರಂಭಿಸಿರುವುದು, ಬಿಜೆಪಿ ವರಿಷ್ಠರಿಗೆ ತಲೆ ನೋವಾಗಿದೆ. ಮೂಲ ಹಾಗೂ ವಲಸಿಗರು ಎಂಬ ಸಂಘರ್ಷಕ್ಕೆ ಎಡೆಮಾಡಿಕೊಡದಂತೆ ಮುಂದುವರಿಯುವಂತೆ ಬಿಜೆಪಿ ಹೈಕಮಾಂಡ್ ಈಗಾಗಲೆ ರಾಜ್ಯ ಬಿಜೆಪಿಗೆ ಸಂದೇಶ ರವಾನಿಸಿದೆ.

ಪ್ರಾದೇಶಿಕ, ಜಾತಿವಾರು, ಅನುಭವವನ್ನಾಧರಿಸಿ ಐದು ಸ್ಥಾನಗಳಿಗೆ ನಾಮನಿರ್ದೇಶನ ಮಾಡಲು ಮುಖ್ಯಮಂತ್ರಿ ಉದ್ದೇಶಿಸಿದ್ದು, ಈ ಸಂಬಂಧ ಬಿಜೆಪಿ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂಬುದು ಕಾದು ನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News