ಶೇ.95ರಷ್ಟು ಮಂದಿಗೆ ಕೊರೋನ ರೋಗದ ಲಕ್ಷಣಗಳೇ ಇಲ್ಲ: ಸಚಿವ ಡಾ.ಕೆ.ಸುಧಾಕರ್

Update: 2020-05-23 16:19 GMT

ಬೆಂಗಳೂರು, ಮೇ.23: ಕೊರೋನ ಸೋಂಕಿಗೆ ಲಸಿಕೆ ಸಿಗುವವರೆಗೆ ಸರಕಾರ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಸಾರ್ವಜನಿಕರು ಚಾಚೂತಪ್ಪದೆ ತಮ್ಮ ಬದುಕಿನ ಭಾಗವಾಗಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ಸಲಹೆ ಮಾಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಸಡಿಲಿಕೆ ನಂತರ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ನೆರೆಯ ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಇನ್ನಿತರ ರಾಜ್ಯಗಳಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದ ಕನ್ನಡಿಗರು ರಾಜ್ಯಕ್ಕೆ ಆಗಮಿಸಿದ್ದಾರೆ. ನಮ್ಮವರನ್ನು ರಾಜ್ಯಕ್ಕೆ ಬರಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಹೊರ ರಾಜ್ಯಗಳಿಂದ ಆಗಮಿಸಿದ ಎಲ್ಲರನ್ನು ಕಡ್ಡಾಯವಾಗಿ ತಪಾಸಣೆ ಮಾಡಲಾಗಿದ್ದು, ವಿವಿಧೆಡೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದ ಅವರು, ಲಾಕ್ ಡೌನ್ ಸಡಿಲಿಕೆ ಬಳಿಕ ಜನರು ಮನಸೋಇಚ್ಛೆ ನಡೆದುಕೊಳ್ಳುವುದು ಸರಿಯಲ್ಲ. ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವು ನೀಡಲಾಗುತ್ತಿದೆ. ಇನ್ನೂ ಮುಂದೆ ಜನರ ಸಹಕಾರ ಮುಖ್ಯ ಎಂದರು.

ರೋಗಕ್ಕೆ ಲಸಿಕೆ ಸಿಗುವವರೆಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಾಬೂನಿನಿಂದ ಕೈತೊಳೆದುಕೊಳ್ಳಬೇಕು. ಜನದಟ್ಟಣೆ ಕಾರ್ಯಕ್ರಮಗಳನ್ನು ರದ್ದು ಮಾಡಿ, ಹೊರಗೆ ತಿರುಗಾಡುವುದನ್ನು ನಿಲ್ಲಿಸಿ, ಪ್ರವಾಸ ಕಾರ್ಯಕ್ರಮಗಳನ್ನು ಕೈಬಿಡಬೇಕು. ಯಾವುದೇ ಕಾರಣಕ್ಕೂ ಹಿರಿಯ ನಾಗರಿಕರು ಮತ್ತು ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಬಾರದು. ಈ ಸೂಚನೆಗಳು ನಮ್ಮ ದೈನಂದಿನ ಭಾಗ ಆಗಬೇಕು ಎಂದರು.

ಕೊರೋನ ಶೇ.95ರಷ್ಟು ಮಂದಿಗೆ ರೋಗದ ಲಕ್ಷಣಗಳೇ ಕಾಣಿಸುತ್ತಿಲ್ಲ. ಕೇವಲ ಶೇ.5-6ರಷ್ಟು ಮಂದಿಗೆ ಮಾತ್ರ ನಾವು ಚಿಕಿತ್ಸೆ ನೀಡುತ್ತಿದ್ದೇವೆ. ಉಳಿದವರು ತಾವೇ ಗುಣಮುಖರಾಗುತ್ತಿದ್ದಾರೆ. ಶೇ.2ರಿಂದ 3ರಷ್ಟು ಮಂದಿ ಮಾತ್ರ ಗಂಭೀರ ಸ್ಥಿತಿಗೆ ಹೋಗುತ್ತಿದ್ದು, ಇದಕ್ಕೆ ಅವರಲ್ಲಿರುವ ಬೇರೆ ಕಾಯಿಲೆಗಳು ಕಾರಣ. ದೇಶದಲ್ಲಿ ಮರಣದ ಪ್ರಮಾಣವು ಶೇ.4ರಷ್ಟಿದೆ ಎಂದರು.

ಜನಪ್ರತಿನಿಧಿಗಳ ಒತ್ತಾಯದ ಕಾರಣಕ್ಕೆ ರಾಜ್ಯದ ಗಡಿಗಳಲ್ಲಿ ಕಾಯುತ್ತಿದ್ದ ರಾಜ್ಯದ ಕಾರ್ಮಿಕರನ್ನು ಕರ್ನಾಟಕಕ್ಕೆ ಕರೆಸಿಕೊಳ್ಳಲಾಗಿದೆ. ಇದೀಗ ತಮಿಳುನಾಡು ಮತ್ತು ಮಹಾರಾಷ್ಟ್ರಗಳಿಂದ ಆಗಮಿಸುವವರನ್ನು ನಿರ್ಬಂಧಿಸಲಾಗಿದೆ. ಕೊರೋನ ವಿರುದ್ಧದ ಹೋರಾಟಕ್ಕೆ ಸರಕಾರದೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.

ಡಿಕೆಶಿಗೆ ತಿರುಗೇಟು

ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಅವರ ಊರುಗಳಿಗೆ ಕಳುಹಿಸಿಕೊಡುವುದು ಸರಕಾರದ ಹೊಣೆ. ಡಿ.ಕೆ.ಶಿವಕುಮಾರ್ ಅವರು ಮನಸೋ ಇಚ್ಛೆ ಬಾಯಿ ಚಪಲಕ್ಕೆ ಮಾತನಾಡುವುದನ್ನು ಇನ್ನಾದರೂ ಬಿಡಬೇಕು. ಕಾಂಗ್ರೆಸಿಗರಿಗೆ ಜನರ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ರಾಜ್ಯದ ಎಲ್ಲ ಕುಟುಂಬಗಳಿಗೆ ಒಂದು ತಿಂಗಳ ಪಡಿತರ ವಿತರಿಸಿ ಕಾಳಜಿ ತೋರಿಸಲಿ. ಅದು ಬಿಟ್ಟು ಚಪಲಕ್ಕೆ ಮಾತನಾಡಿದರೆ ಅವರೇ ನಗೆಪಾಟಲೀಗೀಡಾಗುತ್ತಾರೆ.

-ಡಾ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News