×
Ad

ಬಜರಂಗದಳ ಕಾರ್ಯಕರ್ತರ ವಿರುದ್ಧದ ದೂರನ್ನು ಅಂಗಡಿ ಮಾಲಕರ ವಿರುದ್ಧ ದೂರು ಎಂದು ತಿರುಚಿದ opindia ವೆಬ್ ಸೈಟ್

Update: 2020-05-24 23:57 IST

ಬೆಂಗಳೂರು, ಮೇ.24: ಬೆಂಗಳೂರಿನ ವಿಜಯನಗರದಲ್ಲಿ ಕೆಲವು ಅಂಗಡಿಗಳ ಮೇಲೆ ಭಗವಾಧ್ವಜ ಹಾರಿಸಿದ ಪ್ರಕರಣದಲ್ಲಿ ಬಜರಂಗದಳ ಕಾರ್ಯಕರ್ತರ ವಿರುದ್ಧ ನೀಡಿದ ದೂರಿನ ವರದಿಯನ್ನು ತಿರುಚಿದ opindia ವೆಬ್ ಸೈಟ್ ಬೀದಿ ಬದಿ ವ್ಯಾಪಾರಿಗಳ ಮೇಲೆಯೇ ದೂರು ದಾಖಲಾಗಿದೆ ಎಂದು ವರದಿ ಮಾಡಿದೆ. 

ಶುಕ್ರವಾರ ಇಲ್ಲಿನ ವಿಜಯನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವ ವಕೀಲೆ ಮೈತ್ರೆಯಿ ಕೃಷ್ಣನ್, ಕೊರೋನ ಸೋಂಕಿನ ವಿರುದ್ಧ ಜಾತಿ, ಧರ್ಮ ಮರೆತು ಪ್ರತಿಯೊಬ್ಬರು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿ ವಿಜಯನಗರ ವ್ಯಾಪ್ತಿಯ ಅಂಗಡಿಗಳ ಮೇಲೆ ಕೇಸರಿ ಧ್ವಜ ಹಾರಿಸಿ, ಕೋಮು ಭಾವನೆ ಹುಟ್ಟು ಹಾಕುತ್ತಿರುವವ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು  ಒತ್ತಾಯಿಸಿದ್ದರು. 

ಏನಿದು ಪ್ರಕರಣ?: ನಾಲ್ಕು ದಿನಗಳ ಹಿಂದೆ ಬಜರಂಗದಳದ ಮುಖಂಡ ಎಂ.ಎಲ್.ಶಿವಕುಮಾರ್ ಗೌಡ ಎಂಬಾತ, ಇಲ್ಲಿನ ವಿಜಯನಗರ ವ್ಯಾಪ್ತಿಯ ಬೀದಿ ಬದಿ ಅಂಗಡಿಗಳ ಮೇಲೆ ಕೇಸರಿ ಧ್ವಜ ಹಾರಿಸಿದ್ದಾನೆ. ಇದೇ ಸಂದರ್ಭದಲ್ಲಿ ಸಂಘಪರಿವಾರದ ಕೆಲ ಕಾರ್ಯಕರ್ತರು ಹಿಂದೂಗಳು ಮಾತ್ರ ಇಲ್ಲಿ ವ್ಯಾಪಾರ ಮಾಡಬೇಕು. ಬೇರೆ ಧರ್ಮದ ವ್ಯಾಪಾರಿಗಳಿಗೆ ಅವಕಾಶ ಇಲ್ಲ ಎಂದು ವಿವಾದಿತ ಘೋಷಣೆಗಳು ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಈ ಬಗ್ಗೆ ವಾರ್ತಾಭಾರತಿ ಜೊತೆ ಮಾತನಾಡಿದ್ದ ಬೆಂಗಳೂರು ಜಿಲ್ಲಾಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ(ಎಐಸಿಸಿಟಿಯು)ದ ಕೆ.ಎಸ್.ವಿನಯ್ ಅವರು "ವಿಜಯನಗರ ಮಾರುಕಟ್ಟೆ ವ್ಯಾಪ್ತಿಯಲ್ಲಿ ಸಂಘಪರಿವಾರದ ಕಾರ್ಯಕರ್ತರು ಉದ್ದೇಶ ಪೂರ್ವಕವಾಗಿಯೇ ಅಂಗಡಿಗಳ ಮೇಲೆ ಕೇಸರಿ ಧ್ವಜ ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ಬಹುತೇಕ ಅಂಗಡಿ ಮಾಲಕರು ವಿರೋಧ ವ್ಯಕ್ತಪಡಿಸಿದರು. ಬಳಿಕ, ಅವರೆಲ್ಲಾ ಹೋದ ಮೇಲೆ ರಾತ್ರಿ ವೇಳೆ ಧ್ವಜ ಕಟ್ಟಿ ಹೋಗಿದ್ದು, ಈ ಸಂಬಂಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಹೇಳಿದ್ದರು. 

ಆದರೆ ಈ ಬಗ್ಗೆ ವರದಿ ಮಾಡಿದ ಕಟ್ಟಾ ಬಲಪಂಥೀಯ ಹಾಗು ಸುಳ್ಳು, ತಿರುಚಿದ ಸುದ್ದಿಗಳನ್ನು ಪ್ರಕಟಿಸುವುದಕ್ಕೆ ಕುಖ್ಯಾತವಾಗಿರುವ ವೆಬ್ ಸೈಟ್ opindia ಕೇಸರಿ ಧ್ವಜ ಹಾರಿಸಿದ್ದಕ್ಕೆ ಬೀದಿ ಬದಿ ವ್ಯಾಪಾರಿಗಳ ವಿರುದ್ಧವೇ ದೂರು ನೀಡಲಾಗಿದೆ ಎಂದು ವರದಿ ಪ್ರಕಟಿಸಿದೆ. ಆದರೆ ದೂರು ದಾಖಲಾಗಿರುವುದು ಸ್ವತಃ ಬಿಜೆಪಿ ಹಾಗು ಸಂಘಪರಿವಾರದ ಕಾರ್ಯಕರ್ತ ಎಂದು ಗುರುತಿಸಿಕೊಂಡಿರುವ ಎಂ.ಎಲ್.ಶಿವಕುಮಾರ್ ಗೌಡ ಹಾಗೂ ‘Uttara Kannada Mandi’ ಎಂಬ ಹೆಸರಿನ ಫೇಸ್ ಬುಕ್ ಪೇಜ್ ವಿರುದ್ಧ. ಯಾವುದೇ ಅಂಗಡಿ ಮಾಲಕರ ವಿರುದ್ಧ ದೂರು ನೀಡಲಾಗಿಲ್ಲ. ಇನ್ನು ಶಿವಕುಮಾರ್ ಗೆ ಈ ಪ್ರದೇಶದಲ್ಲಿ ಯಾವುದೇ ಅಂಗಡಿ ಅಥವಾ ಬೀದಿ ಬದಿ ವ್ಯಾಪಾರ ಇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. 

opindia ಪ್ರಕಟಿಸಿರುವ 'ಸುದ್ದಿಯ' ಶೀರ್ಷಿಕೆ ಹಾಗು ಅದರ ಕೆಳಗಿರುವ ಸುದ್ದಿಗೂ ವ್ಯತ್ಯಾಸವಿದೆ. ಶೀರ್ಷಿಕೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ವಿರುದ್ಧ ದೂರು ಎಂದು ಹೇಳಿದ್ದಾರೆ ಒಳಗೆ ಸುದ್ದಿಯಲ್ಲಿ ಒಬ್ಬ ವ್ಯಕ್ತಿ ಹಾಗು ಫೇಸ್ ಬುಕ್ ಪೇಜ್ ವಿರುದ್ಧ ದೂರು ನೀಡಲಾಗಿದೆ. opindia  ತನ್ನ ವರದಿಯನ್ನು https://thefederal.com/ ವೆಬ್ ಸೈಟ್ ನಲ್ಲಿ ಪ್ರಕಟಿತ ಸುದ್ದಿಯ ಆಧರಿತ ಎಂದು federal ಸುದ್ದಿಯ ಲಿಂಕ್ ಹಾಕಿದೆ (https://thefederal.com/states/south/karnataka/plaint-filed-over-saffron-flags-in-bengalurus-commercial-spaces/).  ಆದರೆ https://thefederal.com/ ಸುದ್ದಿಯಲ್ಲಿ ತನಗೆ ಬೇಕಾದ ಅಂಶಗಳನ್ನು ಮಾತ್ರ ತೆಗೆದುಕೊಂಡು ಉಳಿದವುಗಳನ್ನು ಬಿಟ್ಟು ಬಿಟ್ಟಿದೆ. 

ಉದಾಹರಣೆಗೆ ಶಿವಕುಮಾರ್ ಬಿಜೆಪಿ ಹಾಗು ಸಂಘಪರಿವಾರದೊಂದಿಗೆ ಗುರುತಿಸಿಕೊಂಡಿರುವ ವಿಷಯ federal ವೆಬ್ ಸೈಟ್ ಪ್ರಕಟಿಸುವ ಸುದ್ದಿಯಲ್ಲಿದೆ. ಆದರೆ ಅದೇ ವರದಿ ಆಧಾರದಲ್ಲಿ ಪ್ರಕಟಿಸುವ opindia ವರದಿಯಲ್ಲಿ ಈ ವಿಷಯವೇ ಇಲ್ಲ ! ಎರಡೆರಡು ಭಗವಾಧ್ವಜ ತನ್ನ ಅಂಗಡಿ ಮೇಲಿರುವ ವ್ಯಕ್ತಿಯೊಬ್ಬ ಅದನ್ನು ಯಾರು ಹಾಕಿದರು ಎಂದು ನನಗೇ ಗೊತ್ತಿಲ್ಲ ಎಂದು ಹೇಳಿದ ಎಂದು federal ವರದಿಯಲ್ಲಿದೆ. ಆದರೆ opindia ಆ ವಿಷಯವನ್ನು ಉಲ್ಲೇಖಿಸಿಲ್ಲ. 

Opindia ದ ಈ ಸುದ್ದಿ ತಿರುಚುವಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ಇಂತಹ ಸುಳ್ಳು ಸುದ್ದಿ ಪ್ರಕಟಿಸಬೇಡಿ ಎಂದು ಓದುಗರು ಟ್ವಿಟರ್ ನಲ್ಲಿ opindia ವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News