ತನ್ನ ಚೆಕ್ ನಡೆಯುವುದಿಲ್ಲ ಎಂದು ಡಿಕೆಶಿಗೆ ಗೊತ್ತಾಗಿದೆ: ಬಸವರಾಜ ಬೊಮ್ಮಾಯಿ ಲೇವಡಿ

Update: 2020-05-25 14:40 GMT

ಬೆಂಗಳೂರು, ಮೇ 25: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತನ್ನ ಚೆಕ್ ನಡೆಯುವುದಿಲ್ಲ ಎಂಬುದು ಗೊತ್ತಾಗಿದ್ದು, ಹೀಗಾಗಿ ಅವರು ಎಲ್ಲೇ ಹೋದರೆ ಪದೇ ಪದೇ ನಾನು ಚೆಕ್ ಕೊಡುತ್ತೇನೆ' ಎಂದು ಹೇಳುತ್ತಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಲೇವಡಿ ಮಾಡಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾವು ರಾಜ್ಯದಿಂದ ಅತ್ಯಂತ ಶಾಂತ ರೀತಿಯಲ್ಲಿ 1.70 ಲಕ್ಷಕ್ಕೂ ಅಧಿಕ ಮಂದಿ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಿಕೊಟ್ಟಿದ್ದೇವೆ. ಮುಂಬೈನ ರೀತಿಯಲ್ಲಿ ಯಾವುದೇ ಗಲಾಟೆ, ಗೊಂದಲಕ್ಕೆ ಅವಕಾಶ ನೀಡಿಲ್ಲ ಎಂದು ತಿರುಗೇಟು ನೀಡಿದರು.

ಕೆಪಿಸಿಸಿ ಮುಖಂಡರು ಕೊರೋನ ಸಂಕಷ್ಟದ ಸಂದರ್ಭದಲ್ಲಿ ವಿನಾಕಾರಣ ರಾಜ್ಯ ಸರಕಾರದ ವಿರುದ್ಧ ಟೀಕೆ ಮಾಡುವುದು ಸರಿಯಲ್ಲ. ಹೊರ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಕೂಡಲೇ ಕರೆಸಿಕೊಳ್ಳಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಇವರೇ ಆಗ್ರಹಿಸುತ್ತಾರೆ. ಇದೀಗ ರಾಜ್ಯದಲ್ಲಿ ಹೊರ ರಾಜ್ಯಗಳಿಂದ ಬಂದವರಿಂದ ಸೋಂಕು ಹೆಚ್ಚಾಗಿದೆ ಎಂದು ಹೇಳುತ್ತಾರೆ. ಈ ದ್ವಂದ್ವ ನೀತಿ ಏಕೆ ಎಂದು ಪ್ರಶ್ನಿಸಿದರು.

ನಮ್ಮ ರಾಜ್ಯ ಮತ್ತು ಹೊರ ರಾಜ್ಯಗಳ ವಲಸೆ ಕಾರ್ಮಿಕರು ಸುರಕ್ಷಿತವಾಗಿ ಬಸ್ಸು ಮತ್ತು ರೈಲುಗಳ ಮೂಲಕ ಕಳುಹಿಸಿಕೊಡಲಾಗಿದೆ. ಇನ್ನೂ ಉಳಿದ ಕಾರ್ಮಿಕರನ್ನು ಕಳುಹಿಸಿಕೊಡಲು ಸರಕಾರ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣಕ್ಕೆ ಮಹಾರಾಷ್ಟ್ರ, ತಮಿಳುನಾಡು, ದಿಲ್ಲಿ ಸೇರಿದಂತೆ ಇನ್ನಿತರ ರಾಜ್ಯಗಳಿಂದ ಆಗಮಿಸುವವರಿಗೆ ನಿರ್ಬಂಧ ಹೇರಲಾಗಿದೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News