×
Ad

ದೈನಂದಿನ ಪಾಸ್ ದರ ಪರಿಷ್ಕರಣೆ ಮಾಡಿದ ಬಿಎಂಟಿಸಿ

Update: 2020-05-25 20:33 IST

ಬೆಂಗಳೂರು, ಮೇ 25: ಸಾರ್ವಜನಿಕರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ದೈನಂದಿನ ಪಾಸ್ ದರವನ್ನು ಪರಿಷ್ಕರಣೆ ಮಾಡಿದೆ.

ಬಿಎಂಟಿಸಿಯ ದಿನದ ಪಾಸು ಮಾಮೂಲಿಯಾಗಿ 70 ರೂ.ಗಳಿತ್ತು. ಆದರೆ, ಪ್ರಯಾಣಿಕರ ಒತ್ತಡದ ಮೇರೆಗೆ ಅದನ್ನು 50 ರೂ.ಗೆ ಇಳಿಕೆ ಮಾಡಲಾಗಿದೆ. ಅಲ್ಲದೆ, ಹೊಸದಾಗಿ 30 ರೂ., 20 ರೂ., 12 ರೂ., 10 ರೂ., 5 ರೂ.ಗಳ ಪಾಸ್‍ಗಳನ್ನು ಬಿಡುಗಡೆ ಮಾಡಲಾಗಿದೆ. ಟಿಕೆಟ್ ಬದಲಿಗೆ ಇವುಗಳನ್ನು ನೀಡಲು ನಿರ್ಧರಿಸಲಾಗಿದೆ.

ಈವರೆಗೆ ದಿನದ ಪಾಸ್‍ಗಳನ್ನು 70ರೂ.ಗೆ ನೀಡಲಾಗಿತ್ತು. ಕೊರೋನ ಸಾಂಕ್ರಾಮಿಕ ಭೀತಿ ಹಿನ್ನೆಲೆಯಲ್ಲಿ ಹಣ ಪಡೆದು ಟಿಕೆಟ್ ನೀಡುತ್ತಿರಲಿಲ್ಲ. ಪ್ರತಿಯೊಬ್ಬರೂ ಪಾಸ್ ಪಡೆದೇ ಪ್ರಯಾಣಿಸಬೇಕಿತ್ತು. ಹಾಗಾಗಿ ಪ್ರತಿ ಸ್ಟೇಜ್‍ಗೆ ಪ್ರಯಾಣಿಸಲು ಪ್ರಯಾಣಿಕರು 70ರೂ. ಕೊಡಲೇಬೇಕಿತ್ತು.

ಸಾರ್ವಜನಿಕ ಪ್ರಯಾಣಿಕರಿಗೆ ಇದು ತೀವ್ರ ಹೊರೆಯಾಗಿ ಪರಿಣಮಿಸಿತ್ತು. ಇದರಿಂದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. 5ರೂ., 10ರೂ. ಪ್ರಯಾಣಕ್ಕೆ 70ರೂ.ಗಳನ್ನು ಅನಗತ್ಯವಾಗಿ ತೆರಬೇಕಲ್ಲ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ, ಬಿಎಂಟಿಸಿಯಲ್ಲಿ ಪ್ರಯಾಣಿಕರ ಸಂಖ್ಯೆಯೂ ಕೂಡ ವಿರಳವಾಗಿತ್ತು.

ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ರಯಾಣ ಮಾಡುವವರು 70ರೂ. ಕೊಟ್ಟು ಪ್ರಯಾಣ ಮಾಡುತ್ತಿದ್ದರು. ಅಲ್ಲದೆ, ಇಷ್ಟೊಂದು ಹಣ ಕೊಟ್ಟು ಬಸ್‍ನಲ್ಲಿ ಏಕೆ ಹೋಗಬೇಕೆಂದು ಹಲವರು ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ಬಿಎಂಟಿಸಿಯ ಈ ಧೋರಣೆಗೆ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿತ್ತು. ಅಲ್ಲದೆ, ಹಲವು ಪ್ರತಿಭಟನೆಗಳೂ ನಡೆದವು.

ಇದರಿಂದ ಎಚ್ಚೆತ್ತ ಬಿಎಂಟಿಸಿ 70 ರೂ. ಇದ್ದ ದಿನದ ಪಾಸ್ ದರವನ್ನು 50ರೂ.ಗೆ ಇಳಿಸಿ ಹೊಸದಾಗಿ 30 ರೂ., 20 ರೂ., 10 ರೂ., 5ರೂ.ಗಳ ಪಾಸ್ ನೀಡಲು ನಿರ್ಧರಿಸಿದೆ. ಇಂದಿನಿಂದಲೇ ಹೊಸ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಕೊರೋನ ಭೀತಿ ಹಿನ್ನೆಲೆಯಲ್ಲಿ ಜನ ಅನಗತ್ಯವಾಗಿ ಹೆಚ್ಚು ಬಸ್‍ಗಳಲ್ಲಿ ಓಡಾಡಬಾರದು, ನಗದು ಪಡೆದು ಟಿಕೆಟ್ ನೀಡಿದರೆ ರೋಗ ಹರಡುವ ಶಂಕೆ ಇದೆ. ಹೀಗಾಗಿ ನಾವು ದಿನದ ಪಾಸ್ ನೀಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದ್ದೆವು. ಸಾರ್ವಜನಿಕ ಪ್ರಯಾಣಿಕರ ನಿಬರ್ಂಧಕ್ಕೆ ಈ ಕ್ರಮ ಕೈಗೊಳ್ಳಲಾಗಿತ್ತು. ಸಾರ್ವಜನಿಕರಿಂದ ಸುಲಿಗೆ ಮಾಡುವ ಉದ್ದೇಶ ನಮ್ಮದಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿಯೇ ಸಾರಿಗೆ ಸಂಸ್ಥೆ ಇರುವುದು. ಈಗ ಪ್ರಯಾಣಿಕರ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಪಾಸ್ ದರವನ್ನು ಇಳಿಸಲಾಗಿದೆ. ತಾತ್ಕಾಲಿಕವಾಗಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ದರ ಕಡಿಮೆ ಮಾಡಿದ ಹಿನ್ನೆಲೆಯಲ್ಲಿ ಪ್ರಯಾಣಿಕರ ಓಡಾಟ ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ. ನಾವು ಬಸ್‍ಗಳನ್ನು ಹೆಚ್ಚು ಕಾರ್ಯಾಚರಣೆ ನಡೆಸುತ್ತೇವೆ ಮತ್ತು ಹೆಚ್ಚು ಟ್ರಿಪ್‍ಗಳನ್ನು ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News