ವಕೀಲರ ಕ್ಲರ್ಕ್‍ಗಳಿಗೆ ನೆರವು ನೀಡಲು ಯೋಜನೆ ರೂಪಿಸಿ: ಹೈಕೋರ್ಟ್ ನಿರ್ದೇಶನ

Update: 2020-05-25 15:08 GMT

ಬೆಂಗಳೂರು, ಮೇ 25: ನೋಂದಾಯಿತ ವಕೀಲರ ಕ್ಲರ್ಕ್‍ಗಳಿಗೆ ನೆರವು ನೀಡುವ ಹಿನ್ನೆಲೆಯಲ್ಲಿ ಯೋಜನೆ ರೂಪಿಸಲು ಬೆಂಗಳೂರು ವಕೀಲರ ಸಂಘ ಹಾಗೂ ರಾಜ್ಯ ವಕೀಲರ ಕ್ಲರ್ಕ್‍ಗಳ ಸಂಘದ ಜಂಟಿ ಸಭೆ ಏರ್ಪಡಿಸಿ ಎಂದು ರಾಜ್ಯ ವಕೀಲರ ಪರಿಷತ್‍ಗೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತು ಕರ್ನಾಟಕ ರಾಜ್ಯ ವಕೀಲರ ಕ್ಲರ್ಕ್‍ಗಳ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ತನ್ನ ವಕೀಲರ ಕ್ಲರ್ಕ್‍ಗಳಿಗೆ ಆರ್ಥಿಕ ನೆರವು ನೀಡಲು ಕ್ಲರ್ಕ್‍ಗಳ ಸಂಘವೇ ನಿಧಿ ಸ್ಥಾಪಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.

ಇದಕ್ಕಾಗಿ ಹಿರಿಯ ವಕೀಲರಿಂದ ಆರ್ಥಿಕ ನೆರವು ಪಡೆಯಬಹುದು. ನಿಧಿ ಸಂಗ್ರಹಿಸಲು ರಾಜ್ಯ ವಕೀಲರ ಪರಿಷತ ಹಾಗೂ ಬೆಂಗಳೂರು ವಕೀಲರ ಸಂಘ ಅಗತ್ಯ ಸಹಕಾರ ನೀಡುವ ಬಗ್ಗೆ ಹೈಕೋರ್ಟ್‍ಗೆ ಸಂಪೂರ್ಣ ನಂಬಿಕೆ ಇದೆ ಎಂದು ನ್ಯಾಯಪೀಠ ತಿಳಿಸಿದೆ. ಬೆಂಗಳೂರು ವಕೀಲರ ಸಂಘವನ್ನೂ ಪ್ರತಿವಾದಿಯನ್ನಾಗಿ ಸೇರ್ಪಡೆ ಮಾಡಿ ಎಂದು ಅರ್ಜಿದಾರರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ಲಾಕ್‍ಡೌನ್ ಜಾರಿ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕ್ಲರ್ಕ್‍ಗಳಿಗೆ ನೆರವು ನೀಡಲು 5 ಕೋಟಿ ಮೊತ್ತದ ಸಂಗ್ರಹ ನಿಧಿ ಸ್ಥಾಪಿಸಲು ನಿರ್ದೇಶಿಸಬೇಕು ಎಂಬುದು ಅರ್ಜಿದಾರರ ಕೋರಿಕೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News