ಬೆಂಗಳೂರು: ಕ್ವಾರಂಟೈನ್‍ ಗೆ ಒಪ್ಪದವರು ಮರಳಿ ದಿಲ್ಲಿಗೆ

Update: 2020-05-25 15:10 GMT

ಬೆಂಗಳೂರು, ಮೇ 25: ದೇಶಿಯ ವಿಮಾನಗಳ ಹಾರಾಟ ಆರಂಭವಾಗಿದ್ದು, ಬೆಳಗ್ಗೆ ದೆಹಲಿ ಹಾಗೂ ಚೆನ್ನೈನಿಂದ ಬೆಂಗಳೂರಿಗೆ ಬಂದ ವಿಮಾನದಲ್ಲಿನ ಪ್ರಯಾಣಿಕರಲ್ಲಿ ಕೆಲವರು ಕ್ವಾರಂಟೈನ್‍ಗೆ ಒಪ್ಪದೇ ಇದ್ದುದರಿಂದ ಅವರನ್ನು ಮರಳಿ ದೆಹಲಿಗೆ ವಾಪಸ್ ಕಳುಹಿಸಲಾಗಿದೆ.

ಹೊಟೇಲ್ ಕ್ವಾರಂಟೈನ್‍ಗೆ ನಿರಾಕರಿಸಿ ದೆಹಲಿ ಮತ್ತು ಚೆನ್ನೈನಿಂದ ಬಂದ ಪ್ರಯಾಣಿಕರು ತಗಾದೆ ತೆಗೆದಿದ್ದಾರೆ. ಈ ಸಂಬಂಧ ವಿಮಾನ ನಿಲ್ದಾಣದ ಒಳಗೆ ಅಧಿಕಾರಿಗಳ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಹೋಂ ಕ್ವಾರಂಟೈನ್ ಕಳುಹಿಸಿ, ಹೊಟೇಲ್ ಕ್ವಾರಂಟೈನ್‍ಗೆ ಹೋಗಲ್ಲ. ಬೇರೆ ಬೇರೆ ರಾಜ್ಯಗಳಿಂದ ದೆಹಲಿಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬಂದಿದ್ದೀವಿ. ನಾವು ದೆಹಲಿ ರಾಜ್ಯದವರಲ್ಲ ಎಂದು ಗಲಾಟೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಟೇಲ್ ಕ್ವಾರಂಟೈನ್‍ಗೆ ಒಪ್ಪಿಕೊಳ್ಳದ ಪ್ರಯಾಣಿಕರನ್ನು ಸಿಬ್ಬಂದಿ ದೆಹಲಿಗೆ ವಾಪಸ್ ಕಳುಹಿಸಿದ್ದಾರೆ. ಉಳಿದ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲಾಗಿದೆ.

ಹೊರ ರಾಜ್ಯದಿಂದ ಬರುವ ಎಲ್ಲಾ ಪ್ರಯಾಣಿಕರಿಗೆ ಏಳು ದಿನ ಹೊಟೇಲ್ ಕ್ವಾರಂಟೈನ್ ಹಾಗೂ ಇನ್ನೂ ಏಳು ದಿನ ಹೋಂ ಕ್ವಾರಂಟೈನ್ ಕಡ್ಡಾಯವಾಗಿದೆ. ಕ್ವಾರಂಟೈನ್‍ಗೆ ಹೋಗುವವರು ತಮ್ಮದೇ ಖರ್ಚಿನಲ್ಲಿ ಟಿಕೆಟ್ ಖರೀದಿ ಮಾಡಬೇಕು, ಹೋಮ್ ಕ್ವಾರಂಟೈನ್ ಆಗುವವರು ಕೂಡ ತಮ್ಮದೇ ಖರ್ಚಿನಲ್ಲಿ ಕ್ಯಾಬ್‍ಗಳನ್ನು ಬುಕ್ ಮಾಡಿಕೊಳ್ಳಬೇಕು.

ವಿಮಾನ ನಿಲ್ದಾಣದಿಂದ ನಿರ್ಗಮನ ಮಾಡುವವರಿಗೆ ಹೈಟೆಕ್ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಟಿವಿ ಸ್ಕ್ರೀನ್‍ನಲ್ಲಿ ಪ್ರತಿ ಪ್ರಯಾಣಿಕರ ದೇಹದ ಉಷ್ಣಾಂಶ ಪರಿಶೀಲನೆ ಮಾಡಲಾಗುತ್ತಿದ್ದು, ದೇಹದ ಉಷ್ಣಾಂಶ 38 ಕ್ಕಿಂತ ಜಾಸ್ತಿ ಬಂದಲ್ಲಿ ಪ್ರಯಾಣಕ್ಕೆ ಅವಕಾಶವಿಲ್ಲ. ಪ್ರತಿ ಅರ್ಧ ಗಂಟೆಗೊಮ್ಮೆ ಇಡೀ ವಿಮಾನ ನಿಲ್ದಾಣವನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News