ಬೆಂಗಳೂರು: ಜೂ.1 ರಿಂದ ಮೆಟ್ರೋ ರೈಲು ಸಂಚಾರ ಆರಂಭ

Update: 2020-05-25 16:18 GMT

ಬೆಂಗಳೂರು, ಮೇ 23: ಲಾಕ್‍ಡೌನ್ 4.0 ಮುಗಿಯುತ್ತಿದ್ದಂತೆ ‘ನಮ್ಮ ಮೆಟ್ರೋ’ ರೈಲು ಸೇವೆ ಪುನಾರಂಭಕ್ಕೆ ಸಿದ್ಧತೆ ನಡೆಸಿದ್ದು, ಕೇಂದ್ರದ ಅನುಮತಿ ಸೇರಿದಂತೆ ಎಲ್ಲವೂ ಅಂದುಕೊಂಡಂತೆ ಆದರೆ, ಜೂ.1ರಿಂದ ಮೆಟ್ರೋ ರೈಲು ಮರು ಆರಂಭಗೊಳ್ಳಲಿದೆ.

ಈ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‍ಸಿಎಲ್) ಈಗಾಗಲೇ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದೆ. ಮೆಟ್ರೊ ರೈಲು ಸಂಚಾರ ಆರಂಭವಾದ ನಂತರ ಯಾವ ರೀತಿ ಕಾರ್ಯ ನಿರ್ವಹಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ರೈಲಿನಲ್ಲಿ ಮಾರ್ಕಿಂಗ್ ಸೇರಿದಂತೆ ಮತ್ತಿತರ ಅಂಶಗಳ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ ಎಂದು ಭದ್ರತಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರೆಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ನಿಲ್ದಾಣಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತದೆ. 10 ವರ್ಷ ವಯಸ್ಸಿನ ಒಳಗಿನವರಿಗೆ, 60 ವರ್ಷ ಮೇಲ್ಪಟ್ಟವರಿಗೆ ಮೆಟ್ರೋದಲ್ಲಿ ಸಂಚರಿಸಲು ಅವಕಾಶ ನೀಡಬೇಕಾ ಎಂಬುದರ ಕುರಿತು ಚರ್ಚೆ ನಡೆಸಲಾಗುತ್ತಿದೆ. ಸ್ಮಾರ್ಟ್‍ಕಾರ್ಡ್ ಹೊಂದಿದವರಿಗೆ ಅವಕಾಶ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮೆಟ್ರೊ ರೈಲು ಸೇವೆ ಪುನಾರಂಭಕ್ಕೆ ಸಿದ್ಧತೆಯಂತೂ ನಡೆದಿದೆ. ಆದರೆ, ದಿನಾಂಕ ಇನ್ನೂ ಖಚಿತವಾಗಿಲ್ಲ. ಇದಕ್ಕಾಗಿ ಕೇಂದ್ರದ ಸೂಚನೆಯನ್ನು ಎದುರು ನೋಡುತ್ತಿದ್ದೇವೆ. ಸದ್ಯಕ್ಕೆ ಮೇ 31ರವರೆಗೆ ಮೆಟ್ರೋ ಸೇವೆ ನಿಷೇಧಿಸಲಾಗಿದೆ’ ಎಂದು ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News