ಮಂಡಿನೋವಿನಿಂದ ನರಳುತ್ತಿದ್ದೀರಾ?: ನೋವನ್ನು ಶಮನಿಸಲು ಕೆಲವು ಸರಳ ಮಾರ್ಗಗಳಿಲ್ಲಿವೆ

Update: 2020-05-25 17:38 GMT

ಭಾರತದ ಜನಸಂಖ್ಯೆಯ ಸುಮಾರು ಶೇ.15ರಷ್ಟು ಜನರು ಸಂಧಿವಾತ ಪೀಡಿತರಾಗಿದ್ದಾರೆ. ಸಂಧಿವಾತದಿಂದಾಗಿ ಕೀಲುಗಳಲ್ಲಿ ನೋವು, ಊತ, ಪೆಡಸುತನ, ದೈಹಿಕ ನಿಶ್ಶಕ್ತಿ,ನಿದ್ರಾಹೀನತೆ ಇವೆಲ್ಲ ವ್ಯಕ್ತಿಯ ಸಾಮಾನ್ಯ ಆರೋಗ್ಯದ ಮೇಲೆ ಪರಿಣಾಮ ವನ್ನುಂಟು ಮಾಡುತ್ತವೆ. ಸಂಧಿವಾತದ ಆರಂಭದ ಹಂತಗಳಲ್ಲಿ ಸಾಮಾನ್ಯವಾಗಿ ಔಷಧಿಗಳ ಸೇವನೆ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಸೂಚಿಸಲಾಗುತ್ತದೆ. ದೀರ್ಘಕಾಲಿಕ ಸಂಧಿವಾತ ತೀವ್ರ ನೋವನ್ನುಂಟು ಮಾಡುತ್ತದೆ ಮತ್ತು ರೋಗಿಯ ಚಲನವನಗಳನ್ನು ನಿರ್ಬಂಧಿಸುತ್ತದೆ,ಅದು ರೋಗಿಯನ್ನು ಹೆಳವನನ್ನಾಗಿಯೂ ಮಾಡಬಲ್ಲದು. ಇಂತಹ ಪ್ರಕರಣಗಳಲ್ಲಿ ಮಂಡಿ ಬದಲಾವಣೆ ಕೊನೆಯ ಪರಿಹಾರವಾಗಬಹುದು. ಹೀಗಾಗಿ ಸಂಧಿವಾತ ರೋಗಿಗಳು ಕ್ರಿಯಾಶೀಲ ಜೀವನಶೈಲಿಯನ್ನು ಅನುಸರಿಸುವುದು ಮತ್ತು ಆರೋಗ್ಯಕರ ದೇಹತೂಕವನ್ನು ಕಾಯ್ದುಕೊಳ್ಳುವುದು ನೋವನ್ನು ನಿಭಾಯಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ.

ಸಂಧಿವಾತ ರೋಗಿಗಳು ದೈಹಿಕವಾಗಿ ಕ್ರಿಯಾಶೀಲರಾಗಿದ್ದರೆ ಕ್ರಮೇಣ ಕೀಲುಗಳ ಸುತ್ತಲಿನ ಸ್ನಾಯುಗಳು ಬಲಗೊಳ್ಳುತ್ತವೆ ಮತ್ತು ನೋವಿನಿಂದ ಮುಕ್ತರಾಗಬಹುದು. ಕೆಟ್ಟ ದೇಹಭಂಗಿಯು ಕೀಲುಗಳ ಮೇಲೆ ಒತ್ತಡವನ್ನು ಹೇರಬಲ್ಲದು,ಹೀಗಾಗಿ ದೇಹತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅಗತ್ಯವಾಗಿದೆ. ದೈನಂದಿನ ವ್ಯಾಯಾಮವು ಕೂಡ ಸಂಧಿವಾತ ರೋಗಿಗಳು ಫಿಟ್ ಆಗಿರಲು ನೆರವಾಗುತ್ತದೆ. ಇಂತಹ ರೋಗಿಗಳು ವಿಟಾಮಿನ್ ಮತ್ತು ಖನಿಜ ಸಮೃದ್ಧ ಆಹಾರಗಳನ್ನು ಸೇವಿಸಬೇಕು. ಪ್ರತಿದಿನ ಕನಿಷ್ಠ ಎಂಟು ಗ್ಲಾಸ್ ನೀರು ಕುಡಿಯುತ್ತಿದ್ದರೆ ಅದು ಕೀಲೆಣ್ಣೆಯಂತೆ ಕೆಲಸ ಮಾಡುತ್ತದೆ ಮತ್ತು ಉರಿಯೂತವನ್ನು ತಗ್ಗಿಸುತ್ತದೆ. ಸಂದುನೋವನ್ನು ನಿಭಾಯಿಸಲು ಕೆಲವು ಟಿಪ್ಸ್ ಇಲ್ಲಿವೆ......

ನಿಮ್ಮ ದೇಹಭಂಗಿಯ ಬಗ್ಗೆ ಎಚ್ಚರವಿರಲಿ

ತುಂಬ ಹೊತ್ತಿನವರೆಗೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ಶರೀರದಲ್ಲಿಯ ಕೀಲುಗಳಿಗೆ,ವಿಶೇಷವಾಗಿ ಮಂಡಿಗಳಿಗೆ ರಕ್ತಪೂರೈಕೆಯು ವ್ಯತ್ಯಯಗೊಳ್ಳುತ್ತದೆ ಮತ್ತು ಇದು ನೋವಿಗೆ ಹಾಗೂ ಮಂಡಿಗಳು ಪೆಡಸಾಗಲು ಕಾರಣವಾಗುತ್ತದೆ. ಆಗಾಗ್ಗೆ ಕಾಲುಗಳನ್ನು ಚಾಚುತ್ತಿದ್ದರೆ ಮಂಡಿಗಳಿಗೆ ರಕ್ತಸಂಚಾರವು ಹೆಚ್ಚುತ್ತದೆ ಮತ್ತು ಚಲನೆಯು ಉತ್ತಮಗೊಳ್ಳುತ್ತದೆ.

ವ್ಯಾಯಾಮ ನಿಮ್ಮ ಮಿತ್ರನಾಗಿರಲಿ

ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ನೋವನ್ನು ಶಮನಿಸುವಲ್ಲಿ ನೆರವಾಗುತ್ತದೆ. ವ್ಯಾಯಾಮವು ಕೀಲುಗಳ ಸುತ್ತಲಿನ ಸ್ನಾಯುಗಳನ್ನು ಬಲಗೊಳಿಸುತ್ತದೆ ಮತ್ತು ಇದರಿಂದ ನೋವಿನಿಂದ ಬಿಡುಗಡೆ ಸಿಗುತ್ತದೆ ಮತ್ತು ಕೀಲುಗಳ ಚಲನವನದಲ್ಲಿ ಸುಧಾರಣೆಯಾಗುತ್ತದೆ. ಶರೀರವನ್ನು ಕ್ರಿಯಾಶೀಲವಾಗಿಸಲು ಕೆಲಸದ ಮಧ್ಯೆ ಆಗಾಗ್ಗೆ ಬಿಡುವು ಮಾಡಿಕೊಂಡು ಕೊಂಚ ಸಮಯ ನಡೆದಾಡಬಹುದು ಅಥವಾ ಯೋಗವನ್ನು ಮಾಡಬಹುದು. ಸಂಧಿವಾತ ರೋಗಿಗಳು ಕಠಿಣ ವ್ಯಾಯಾಮಗಳಿಂದ ದೂರವಿರಬೇಕು. ಊತವನ್ನು,ಕೀಲುಗಳ ಉರಿಯೂತವನ್ನು ಕಡಿಮೆ ಮಾಡಲು ಐಸ್/ಹೀಟ್ ಪ್ಯಾಕ್ ಗಳನ್ನು ಬಳಸಬಹುದು.

ದೇಹತೂಕವನ್ನು ಕಾಯ್ದುಕೊಳ್ಳಿ

ಬೊಜ್ಜು ದೇಹವನ್ನು ಹೊಂದಿರುವುದು ಮಂಡಿ ನೋವಿಗೆ ಆಹ್ವಾನವನ್ನು ನೀಡುವ ಪ್ರಮುಖ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ. ನಮ್ಮ ಸಂದುಗಳು ನಿರ್ದಿಷ್ಟ ಭಾರವನ್ನು ಮಾತ್ರ ಹೊರಬಲ್ಲವು. ಇದಕ್ಕಿಂತ ಹೆಚ್ಚಾದ ಭಾರವು ಸಂದುಗಳ ಮೇಲೆ, ವಿಶೇಷವಾಗಿ ಮಂಡಿಗಳ ಮೇಲೆ ನಾಲ್ಕು ಪಟ್ಟು ಹೆಚ್ಚು ಒತ್ತಡವನ್ನು ಉಂಟು ಮಾಡಬಲ್ಲದು. ಕೇವಲ ಶೇ.10ರಷ್ಟು ದೇಹತೂಕವನ್ನು ತಗ್ಗಿಸಿಕೊಂಡರೂ ಸಂಧಿವಾತದ ನೋವು ಶೇ.50ರಷ್ಟು ಕಡಿಮೆಯಾಗುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಹೀಗಾಗಿ ಸಂಧಿವಾತ ರೋಗಿಗಳು ತಮ್ಮ ದಿನಚರಿಯಲ್ಲಿ ತೂಕ ಇಳಿಸಲು ನೆರವಾಗುವ ವ್ಯಾಯಾಮಗಳನ್ನು ಸೇರಿಸಿಕೊಳ್ಳಬೇಕು.

ಚೆನ್ನಾಗಿ ನಿದ್ರೆ ಮಾಡಿ

ರಾತ್ರಿ ತುಂಬ ತಡವಾಗಿ ಮಲಗಿ ಬೆಳಿಗ್ಗೆ ಬೇಗ ಏಳುವವರು ಹೆಚ್ಚು ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಕಡಿಮೆ ನಿದ್ರೆಯು ಸಂದುಗಳ ನೋವಿಗೆ ಕಾರಣವಾಗಬಹುದು. ವ್ಯಕ್ತಿ ನಿದ್ರಿಸಿದ್ದಾಗ ಆತನ/ಆಕೆಯ ಉರಿಯೂತ ಮಟ್ಟವು ಕಡಿಮೆಯಾಗುತ್ತದೆ ಮತ್ತು ಚೇತರಿಸಿಕೊಳ್ಳಲು ಶರೀರಕ್ಕೆ ಅವಕಾಶ ದೊರೆಯುತ್ತದೆ. ದಿನಕ್ಕೆ ಕನಿಷ್ಠ ಏಳೆಂಟು ಗಂಟೆಗಳ ಸುಖನಿದ್ರೆ ಕೀಲುಗಳು ಮತ್ತು ಸ್ನಾಯುಗಳನ್ನು ಆರೋಗ್ಯಯುತವಾಗಿರಿಸಲು ಅಗತ್ಯವಾಗಿದೆ.

ಆರೋಗ್ಯಕರ ಆಹಾರಕ್ರಮ ಅನುಸರಿಸಿ

ಸಂದುಗಳ ನೋವನ್ನು ಗುಣಪಡಿಸುವಲ್ಲಿ ಡಿ ವಿಟಾಮಿನ್‌ಗಿಂತ ಮಿಗಿಲಾದುದು ಇನ್ನೊಂದಿಲ್ಲ. ದ್ರವಗಳ ಸೇವನೆಯು ಶರೀರವನ್ನು ಕ್ರಿಯಾಶೀಲವಾಗಿರಿಸಲು ನೆರವಾಗುತ್ತದೆ. ಸೌಮ್ಯ ಸ್ವರೂಪದ ನಿರ್ಜಲೀಕರಣವೂ ಮಾನವ ಶರೀರವನ್ನು ನೋವಿಗೆ ಹೆಚ್ಚು ಸಂವೇದನಾಶೀಲವಾಗಿಸುತ್ತದೆ. ಹೀಗಾಗಿ ದ್ರವಗಳ ಸೇವನೆ ಮುಖ್ಯವಾಗಿದೆ. ಧೂಮ್ರಪಾನ,ಸಂಸ್ಕರಿತ ಜಂಕ್ ಫುಡ್ ಮತ್ತು ಇಂಗಾಲೀಕೃತ ಪಾನೀಯಗಳ ಸೇವನೆ ಮೂಳೆಗಳನ್ನು ಟೊಳ್ಳಾಗಿಸುತ್ತದೆ,ಹೀಗಾಗಿ ಸಂಧಿವಾತ ಸಮಸ್ಯೆಯಿರುವವರು ಇವುಗಳಿಂದ ದೂರವಿರಬೇಕು. ಮದ್ಯಪಾನವು ಉರಿಯೂತವನ್ನು ತೀವ್ರಗೊಳಿಸುತ್ತದೆ,ಹೀಗಾಗಿ ಇದೂ ಒಳ್ಳೆಯದಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News