ಕರಿಬೇವಿನ ಸೊಪ್ಪಿನ ಅದ್ಭುತ ಆರೋಗ್ಯಲಾಭಗಳು ನಿಮಗೆ ಗೊತ್ತೇ?

Update: 2020-05-25 17:47 GMT

ಆಹಾರ ಪದಾರ್ಥಗಳಲ್ಲಿ ಒಗ್ಗರಣೆಗೆ ಬಳಸುವ ಕರಿಬೇವು ಸ್ವಾದಕ್ಕಿಂತ ಹೆಚ್ಚಿನದನ್ನು ನೀಡುತ್ತದೆ. ಕಬ್ಬಿಣ,ಕ್ಯಾಲ್ಸಿಯಂ,ರಂಜಕ ಮತ್ತು ಸಿ,ಬಿ,ಎ ಇತ್ಯಾದಿ ವಿಟಾಮಿನ್‌ಗಳನ್ನು ಸಮೃದ್ಧವಾಗಿ ಒಳಗೊಂಡಿರುವ ಇದು ಶರೀರಕ್ಕೆ ನಾರನ್ನೂ ಒದಗಿಸುತ್ತದೆ. ಇದಿಷ್ಟೇ ಅಲ್ಲ,ಕರಿಬೇವು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು,ಆರೋಗ್ಯಕರವಾದ ಜೀರ್ಣಕ್ರಿಯೆಗೆ,ಸೋಂಕುಗಳ ವಿರುದ್ಧ ಹೋರಾಡಲು ಹಾಗೂ ಚರ್ಮ ಮತ್ತು ತಲೆಗೂದಲ ಸೊಬಗನ್ನು ಹೆಚ್ಚಿಸಲೂ ನೆರವಾಗುತ್ತದೆ.

* ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ

 ಕರಿಬೇವಿನಲ್ಲಿರುವ ವಿಶೇಷ ವಿಧದ ನಾರು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ತಗ್ಗಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಈ ಎಲೆಗಳು ಶರೀರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಬಿಡುಗಡೆಗೊಳಿಸಲು ಮತ್ತು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ತಗ್ಗಿಸಲು ನೆರವಾಗುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಮಧುಮೇಹಿಗಳು ತಮ್ಮ ಎಲ್ಲ ಆಹಾರಗಳಲ್ಲಿ ಸಾಧ್ಯವಿದ್ದಷ್ಟು ಮಟ್ಟಿಗೆ ಕರಿಬೇವು ಇರುವಂತೆ ನೋಡಿಕೊಳ್ಳಬೇಕು. ಪ್ರತಿದಿನ ರಾತ್ರಿ ಖಾಲಿಹೊಟ್ಟೆಯಲ್ಲಿ ತಾಜಾ ಕರಿಬೇವನ್ನು ಸೇವಿಸುವ ಮೂಲಕ ಮಧುಮೇಹ ತೊಂದರೆಯನ್ನು ದೂರವಿಡಬಹುದು.

* ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ

 ಉತ್ಕರ್ಷಣ ನಿರೋಧಕಗಳ ಆಗರವಾಗಿರುವ ಕರಿಬೇವು ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್)ನ ಉತ್ಪತ್ತಿಗೆ ಕಾರಣವಾಗುವ ಕೊಬ್ಬಿನ ಉತ್ಕರ್ಷಣ ಪ್ರಕ್ರಿಯೆಯನ್ನು ತಡೆಯುತ್ತದೆ ಮತ್ತು ಇದು ಒಳ್ಳೆಯ ಕೊಲೆಸ್ಟ್ರಾಲ್(ಎಚ್‌ಡಿಎಲ್)ನ ಮಟ್ಟವನ್ನು ಹೆಚ್ಚಿಸುತ್ತದೆ ಹಾಗೂ ಶರೀರವನ್ನು ಹೃದ್ರೋಗಗಳು ಮತ್ತು ಅಪಧಮನಿ ಕಾಠಿಣ್ಯದಿಂದ ರಕ್ಷಿಸುತ್ತದೆ. ಇದಕ್ಕಾಗಿ ಪ್ರತಿದಿನ ಕರಿಬೇವಿನ ಚಟ್ನಿಯನ್ನು ಸೇವಿಸಬೇಕು.

* ಆರೋಗ್ಯಕರ ಜೀರ್ಣಕ್ರಿಯೆಗೆ ನೆರವಾಗುತ್ತದೆ

ಕರಿಬೇವಿನ ಎಲೆಗಳು ಸೌಮ್ಯ ವಿರೇಚಕ ಗುಣವನ್ನು ಹೊಂದಿವೆಯಾದರೂ ಹೊಟ್ಟೆಯ ತೊಂದರೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ. ಈ ಎಲೆಗಳಲ್ಲಿರುವ ಕಾರ್ಬರೆಲ್ ಅಲ್ಕಲಾಯ್ಡೆ ಬ್ಯಾಕ್ಟೀರಿಯಾ ನಿರೋಧಕ ಮತ್ತು ಉರಿಯೂತ ನಿರೋಧಕ ಗುಣಗಳನ್ನು ಹೊಂದಿದ್ದು,ಇವು ಹೊಟ್ಟೆಯ ತೊಂದರೆಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿವೆ. ಉತ್ತಮ ಜೀರ್ಣಕ್ರಿಯೆಗಾಗಿ ಕೆಲವು ಕರಿಬೇವಿನ ಎಲೆಗಳನ್ನು ಚೂರುಗಳನ್ನಾಗಿಸಿ ಅದನ್ನು ಮಜ್ಜಿಗೆಯ ಜೊತೆ ಸೇವಿಸಬೇಕು

* ಕಟ್ಟಿದ ಮೂಗನ್ನು ತೆರೆಯುತ್ತದೆ

 ಎದೆ ಮತ್ತು ಮೂಗು ಕಟ್ಟಿಕೊಂಡಿದ್ದರೆ ಕರಿಬೇವಿನ ಎಲೆಯು ಅತ್ಯುತ್ತಮ ಮನೆಮದ್ದಾಗಿ ಕಾರ್ಯ ನಿರ್ವಹಿಸುತ್ತದೆ. ಸಿ ಮತ್ತು ಎ ವಿಟಾಮಿನ್‌ಗಳೊಂದಿಗೆ ಅತ್ಯಂತ ಪ್ರಬಲ ಉರಿಯೂತ ನಿರೋಧಕ ಡಿಕಂಜೆಸ್ಟಂಟ್ ಮತ್ತು ಉತ್ಕರ್ಷಣ ನಿರೋಧಕ ಏಜೆಂಟ್ ಆಗಿರುವ ಕೇಂಪ್‌ಫೆರಾಲ್ ಎಂಬ ಸಂಯುಕ್ತವನ್ನು ಒಳಗೊಂಡಿರುವ ಕರಿಬೇವಿನ ಎಲೆಯು ಕಟ್ಟಿದ ಮೂಗನ್ನು ತೆರೆಯಲು ಮತ್ತು ಕಟ್ಟಿಕೊಂಡಿದ್ದ ಲೋಳೆ ಹೊರಹೋಗಲು ನೆರವಾಗುತ್ತದೆ. ಇದಕ್ಕಾಗಿ ಕರಿಬೇವಿನ ಎಲೆಯ ಹುಡಿಯಿಂದ ಪೇಸ್ಟ್ ಮಾಡಿ ಅದಕ್ಕೆ ಒಂದು ಚಮಚ ಜೇನು ಬೆರೆಸಿಕೊಂಡು ದಿನಕ್ಕೆರಡು ಬಾರಿ ಸೇವಿಸಬೇಕು.

* ತಲೆಗೂದಲಿಗೆ ಹಾನಿಯನ್ನು ತಡೆಯುತ್ತದೆ

ಕರಿಬೇವಿನ ಎಲೆಯು ಕೂದಲು ನರೆಯುವುದನ್ನು ತಡೆಯುತ್ತದೆ,ಹಾನಿಗೀಡಾದ ಕೂದಲಿಗೆ ಚಿಕಿತ್ಸೆಯನ್ನು ನೀಡುತ್ತದೆ,ತಲೆಗೂದಲನ್ನು ದಟ್ಟವಾಗಿಸುತ್ತದೆ ಮತ್ತು ಕೂದಲನ್ನು ಹೆಚ್ಚು ಆರೋಗ್ಯಯುತವಾಗಿಸುತ್ತದೆ. ಕೂದಲು ಉದುರುವುದನ್ನು ತಡೆಯುವ ಜೊತೆಗೆ ತಲೆಹೊಟ್ಟನ್ನೂ ನಿವಾರಿಸುತ್ತದೆ. ಕರಿಬೇವಿನ ಎಲೆಗಳ ರಸವನ್ನು 100 ಎಂಎಲ್ ತೆಂಗಿನೆಣ್ಣೆಗೆ ಸೇರಿಸಿ ಅದು ಕಪ್ಪಾಗುವತನಕ ಕಾಯಿಸಬೇಕು ಮತ್ತು ಇದನ್ನು ವಾರಕ್ಕೆರಡು ಬಾರಿ ನೆತ್ತಿಗೆ ಹಚ್ಚಿಕೊಳ್ಳಬೇಕು.

* ಕಲೆಗಳು ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ

 ಕರಿಬೇವಿನ ಎಲೆಯು ಚರ್ಮದಲ್ಲಿ ಎಲ್ಲ ಕೊಳೆಗಳು ಮತ್ತು ಅಶುದ್ಧತೆಗಳನ್ನು ತೆಗೆಯುತ್ತದೆ. ಮೊಡವೆಗಳುಂಟಾಗುವುದನ್ನು ತಡೆಯುವ ಮೂಲಕ ಚರ್ಮವನ್ನು ತಾಜಾ ಆಗಿರಿಸಿ ಅದು ಹೊಳೆಯುವಂತಾಗಲು ನೆರವಾಗುತ್ತದೆ. ಕರಿಬೇವಿನ ಎಲೆಗಳು, ಅರಿಷಿಣ, ಲಿಂಬೆರಸ ಮತ್ತು ಸ್ವಲ್ಪ ನೀರನ್ನು ಬೆರೆಸಿ ಪೇಸ್ಟ್ ತಯಾರಿಸಿ ಅದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಂಡು ಅರ್ಧ ಗಂಟೆಯ ಬಳಿಕ ತೊಳೆದುಕೊಳ್ಳಬೇಕು. ದಿನಕ್ಕೆರಡು ಬಾರಿ ಹೀಗೆ ಮಾಡಬೇಕು. ಕರಿಬೇವಿನ ಹುಡಿಗೆ ಲಿಂಬೆರಸ ಮತ್ತು ಪನ್ನೀರು ಸೇರಿಸಿಯೂ ಪೇಸ್ಟ್ ತಯಾರಿಸಿ ಇದೇ ರೀತಿಯಲ್ಲಿ ಬಳಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News