ಸ್ವಾಮೀಜಿ ಹತ್ಯೆ ಹಿಂದಿನ ಸತ್ಯ ಬೆಳಕಿಗೆ ಬರಬೇಕು: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

Update: 2020-05-25 17:54 GMT

ಬೆಂಗಳೂರು, ಮೇ 25: ಮಹಾರಾಷ್ಟ್ರ ರಾಜ್ಯದ ನಾದೇಡ್ ಜಿಲ್ಲೆಯ ನಾಗಠಾಣದಲ್ಲಿ ಕರ್ನಾಟಕ ಮೂಲಕ ರುದ್ರಪಶುಪತಿ ಶಿವಾಚಾರ್ಯ ಸ್ವಾಮೀಜಿ ಹತ್ಯೆ ಹಿಂದಿನ ಸತ್ಯ ಬೆಳಕಿಗೆ ಬರಬೇಕಿದ್ದು, ಈ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಹಾರಾಷ್ಟ್ರ ಗೃಹ ಸಚಿವರೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಲ್ಲಿನ ಬಳ್ಳಾರಿ ಮೂಲದ ಸ್ವಾಮೀಜಿ ಮಹಾರಾಷ್ಟ್ರದಲ್ಲಿ ಮಠ ಸ್ಥಾಪಿಸಿಕೊಂಡಿದ್ದರು. ದುಷ್ಕರ್ಮಿಗಳನ್ನು ಅವರನ್ನು ಹತ್ಯೆಗೈದಿದ್ದು, ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಗೊತ್ತಾಗಿದೆ. ಆದರೆ, ಶ್ರೀಗಳ ಹತ್ಯೆಯ ಸತ್ಯಾಸತ್ಯತೆ ಜನರಿಗೆ ಗೊತ್ತಾಗಬೇಕಿದೆ. ಅಲ್ಲದೆ ಅಲ್ಲಿರುವ ಉಳಿದ ಸ್ವಾಮೀಜಿಗಳಿಗೂ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಹೇಳಿದರು.

ಹೊರೆ ಸರಿಯಲ್ಲ: ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಸಾರ್ವಜನಿಕರ ಪ್ರಯಾಣಿಕರ ಮೇಲೆ ಕೊರೋನ ಸಂಕಷ್ಟದ ಸಂದರ್ಭದಲ್ಲಿ ಹೊರೆ ಹೇರುವುದು ಸರಿಯಲ್ಲ. ಒಮ್ಮೆ ಬಸ್ ಹತ್ತಿ ಮುಂದಿನ ನಿಲ್ದಾಣದಲ್ಲಿ ಇಳಿಯಬೇಕಿರುವ ಬಡ ಕೂಲಿ ಕಾರ್ಮಿಕರ 70 ರೂ.ಪಾಸ್ ಪಡೆಯಬೇಕೆಂಬ ನಿಯಮ ಅವೈಜ್ಞಾನಿಕ. ಕೂಡಲೇ ಈ ಪದ್ಧತಿ ಬದಲಾವಣೆ ಮಾಡಿ ಜನರಿಗೆ ಹೊರೆಯಾಗದ ರೀತಿಯಲ್ಲಿ ಟಿಕೆಟ್ ವಿತರಣೆ ಮಾಡಬೇಕು ಎಂದು ಖಂಡ್ರೆ ಆಗ್ರಹಿಸಿದರು.

ಎರಡು ತಿಂಗಳ ಲಾಕ್‍ಡೌನ್ ಹಿನ್ನೆಲೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿ ಇರುವ ಕಾರ್ಮಿಕರಿಂದ ಹೆಚ್ಚಿನ ಹಣ ವಸೂಲಿ ಯಾವುದೇ ಕಾರಣಕ್ಕೂ ಸರಿಯಲ್ಲ. ಆದುದರಿಂದ ಬಿಎಂಟಿಸಿ ಬಸ್ ಪ್ರಯಾಣಕ್ಕೆ ಎಲ್ಲರೂ 70 ರೂ.ಪಾಸ್ ಪಡೆಯಬೇಕೆಂಬ ನಿಯಮ ಜನ ವಿರೋಧಿ. ಈ ಬಗ್ಗೆ ಸಾರಿಗೆ ಸಚಿವರು ಗಮನಹರಿಸಬೇಕು ಎಂದು ಈಶ್ವರ್ ಖಂಡ್ರೆ ಒತ್ತಾಯಿಸಿದರು.

ಹೋರಾಟ ಅನಿವಾರ್ಯ: ಕೇಂದ್ರ ಸರಕಾರದ ಪ್ರಸ್ತಾವಿತ ವಿದ್ಯುತ್ ತಿದ್ದುಪಡಿ ಮಸೂದೆ ರೈತ ವಿರೋಧಿ. ಕೃಷಿ ಪಂಪ್ ಸೆಟ್‍ಗೆ ನೀಡುತ್ತಿರುವ ಉಚಿತ ವಿದ್ಯುತ್ ಕಡಿತ ಪ್ರಸ್ತಾಪ ಸರಿಯಲ್ಲ. ಆದುದರಿಂದ ಈ ಮಸೂದೆಗೆ ಯಾವುದೇ ಕಾರಣಕ್ಕೂ ರಾಜ್ಯ ಸರಕಾರ ಒಪ್ಪಿಗೆ ನೀಡಬಾರದು. ಒಂದು ವೇಳೆ ಸರಕಾರ ಒಪ್ಪಿಗೆ ನೀಡಿದ್ದೆ ಆದರೆ ಕಾಂಗ್ರೆಸ್ ಪಕ್ಷದ ಅನಿವಾರ್ಯವಾಗಿ ಹೋರಾಟಕ್ಕೆ ಇಳಿಯಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News