ಬೆಂಗಳೂರು: ಗುಡಿಸಲುಗಳ ಧ್ವಂಸ; ಬೀದಿಗೆ ಬಿದ್ದ ವಿದ್ಯಾರ್ಥಿಗಳ ಸಹಿತ ನೂರಾರು ಕೂಲಿ ಕಾರ್ಮಿಕರು

Update: 2020-05-25 18:06 GMT

ಬೆಂಗಳೂರು, ಮೇ 25: ಕೊರೋನ ಸೋಂಕು ತಡೆಗಟ್ಟಲು ಹೇರಿದ್ದ ಲಾಕ್‍ಡೌನ್ ಅವಧಿಯಲ್ಲಿ ಇಲ್ಲಿನ ಕಾಚರಕನಹಳ್ಳಿ ಸರ್ವೆ ನಂ.153ರಲ್ಲಿ ವಾಸವಾಗಿದ್ದ ಉತ್ತರ ಕರ್ನಾಟಕ ಭಾಗದ ವಲಸೆ ಕಾರ್ಮಿಕರ 230ಕ್ಕೂ ಹೆಚ್ಚು ಗುಡಿಸಲುಗಳನ್ನು ಭೂಗಳ್ಳರು ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಆರೇಳು ಮಂದಿ 10ನೆ ತರಗತಿ ವಿದ್ಯಾರ್ಥಿಗಳು ಸೇರಿ ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಕೂಲಿ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.

ನಿನ್ನೆ ಸುರಿದ ಅಬ್ಬರದ ಗಾಳಿ-ಮಳೆಯಿಂದ ಇಲ್ಲಿರುವ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಮವಸ್ತ್ರ, ಪಠ್ಯ-ಪುಸ್ತಕಗಳ ಸಂಪೂರ್ಣ ಹಾಳಾಗಿದ್ದು, ಭವಿಷ್ಯದ ಕನಸು ಹೊತ್ತಿದ್ದ ವಿದ್ಯಾರ್ಥಿಗಳು ಮಳೆಯಲ್ಲಿ ತೊಯ್ದು ಹೋಗಿರುವ ಪಠ್ಯ-ಪುಸ್ತಕಗಳನ್ನು ಮುಂದಿಟ್ಟುಕೊಂಡು ಕಣ್ಣೀರು ಹಾಕಿತ್ತಿದ್ದರೆ, ಮತ್ತೊಂದೆಡೆ ಇದ್ದ ಸೂರು ಧ್ವಂಸವಾಗಿರುವುದರಿಂದ ಬಡಕೂಲಿ ಕಾರ್ಮಿಕರು ಮುಂದೇನು ಮಾಡುವುದು ಎಂದು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ.

ಈ ಮಧ್ಯೆ ಭೂಗಳ್ಳರು 'ನೀವು ಯಾವುದೇ ಕಾರಣಕ್ಕೂ ಈ ಪ್ರದೇಶದಲ್ಲಿ ಕಾಣಿಸಿಕೊಂಡರೆ ಪರಿಣಾಮ ನೆಟ್ಟಗಿರುವುದಿಲ್ಲ' ಎಂಬ ಪ್ರಾಣ ಬೆದರಿಕೆಯ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಇದರ ನಡುವೆ ಸುದೀರ್ಘ ಲಾಕ್‍ಡೌನ್‍ನಿಂದಾಗಿ ಅನ್ನಕ್ಕೆ ದಾರಿಯಾಗಿದ್ದ ಕಟ್ಟಡ ನಿರ್ಮಾಣ ಕೆಲಸವೂ ಸರಿಯಾಗಿ ಸಿಗದೆ, ಬಡಕೂಲಿ ಕಾರ್ಮಿಕರನ್ನು ಕೊರೋನ ಸೋಂಕಿನ ಜೊತೆಗೆ ಹಸಿವಿನ ಭೀತಿಯೂ ತೀವ್ರವಾಗಿ ಕಾಡುತ್ತಿದೆ.

ಕಾಚರನಹಳ್ಳಿ ಸರಕಾರಿ ಕೆರೆ ಅಂಗಳದ ಜಾಗದಲ್ಲಿ ಹಲವು ವರ್ಷಗಳಿಂದ ವಾಸ ಮಾಡುತ್ತಿದ್ದ ವಲಸೆ ಕಾರ್ಮಿಕರ ಪ್ರದೇಶವನ್ನು ಈಗಾಗಲೇ ಕೊಳಚೆ ಪ್ರದೇಶವೆಂದು ರಾಜ್ಯ ಸರಕಾರವೇ ಅಧಿಕೃತವಾಗಿ ಘೋಷಿಸಿದೆ. ಆದರೆ, ಈ ಪ್ರದೇಶಕ್ಕೆ ಯಾವುದೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿರಲಿಲ್ಲ. ಇದೀಗ ಅದೇ ಸ್ಥಳದಲ್ಲಿ ಕೂಲಿ ಕಾರ್ಮಿಕರ ವಾಸಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಕಾರ್ಮಿಕರ ಆಗ್ರಹವಾಗಿದೆ.

ಹೋರಾಟಕ್ಕೆ ಸಜ್ಜು: ವಲಸೆ ಕಾರ್ಮಿಕರ ಗುಡಿಸಲುಗಳನ್ನು ಧ್ವಂಸಗೊಳಿಸಿದ ಭೂಗಳ್ಳರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾರ್ಮಿಕರು ವಿಧಾನಸೌಧ ಚಲೋ ಹಮ್ಮಿಕೊಳ್ಳಲು ತೀರ್ಮಾನಿಸಿದ್ದು, ರಾಜ್ಯ ಸರಕಾರ ವಲಸೆ ಕಾರ್ಮಿಕರಿಗೆ ಕಾಚರಕನಹಳ್ಳಿ ಕೆರೆ ಅಂಗಳದ ಜಾಗದಲ್ಲಿ ಕೂಡಲೇ ಸೂಕ್ತ ಪುನರ್ ವಸತಿ ಒದಗಿಸಬೇಕು ಎಂದು ಆಗ್ರಹಿಸಲು ಮುಂದಾಗಿದ್ದಾರೆ.

ನನ್ನ ಭವಿಷ್ಯವನ್ನು ತೀರ್ಮಾನಿಸುವ ಎಸೆಸೆಲ್ಸಿ ಪರೀಕ್ಷೆ ಬರೆಯಬೇಕು. ಆದರೆ, ನನಗೆ ನನ್ನ ಪುಸ್ತಕಗಳು, ಸಮವಸ್ತ್ರ ಯಾವುದೇ ಇಲ್ಲ. ದುಷ್ಕರ್ಮಿಗಳು ನನ್ನ ಗುಡಿಸಲು ಧ್ವಂಸ ಮಾಡುವ ವೇಳೆ ಅವುಗಳನ್ನು ಹಾಳು ಮಾಡಿದ್ದು, ನಾನೀನ ನನ್ನ ಗೆಳೆಯರಿಂದ ಪಠ್ಯ-ಪುಸ್ತಕಗಳನ್ನು ಪಡೆದು ಓದುತ್ತಿದ್ದೇನೆ. ಕೂಡಲೇ ರಾಜ್ಯ ಸರಕಾರ ನನಗೆ ಪಠ್ಯಪುಸ್ತಕಗಳನ್ನು ಹಾಗೂ ಸಮವಸ್ತ್ರ ವ್ಯವಸ್ಥೆ ಮಾಡಬೇಕು

-ತಿಮ್ಮಪ್ಪ, ಎಸೆಸೆಲ್ಸಿ ವಿದ್ಯಾರ್ಥಿ

ಭೂಮಿ ಕಬಳಿಕೆ ಉದ್ದೇಶದಿಂದ ಭೂಗಳ್ಳರು ಕಾಚರಕನಹಳ್ಳಿ ಕೆರೆ ಅಂಗಳದಲ್ಲಿದ್ದ ಸರಕಾರದ ಘೋಷಿತ ಕೊಳಚೆ ಪ್ರದೇಶದಲ್ಲಿದ್ದ ಬಡ ಕೂಲಿ ಕಾರ್ಮಿಕರ 230ಕ್ಕೂ ಹೆಚ್ಚು ಗುಡಿಸಲುಗಳನ್ನು ಲಾಕ್‍ಡೌನ್ ಅವಧಿಯನ್ನು ದುರ್ಬಳಕೆ ಮಾಡಿಕೊಂಡು ಧ್ವಂಸ ಮಾಡಿರುವುದು ಅಕ್ಷಮ್ಯ. ಕೂಡಲೇ ಸರಕಾರ ಅವರಿಗೆ ಪುನರ್ ವಸತಿ ಕಲ್ಪಿಸಬೇಕು. ಇಲ್ಲದಿದ್ದರೆ ಅವರು ಹೋರಾಟ ಮಾಡುವುದು ಅನಿವಾರ್ಯ

-ವಿ.ಮೂರ್ತಿ ಪ್ರಧಾನ ಕಾರ್ಯದರ್ಶಿ, ಬಿಡುಗಡೆಯ ಚಿರತೆಗಳು

ಪತ್ರಿಕೆ ಫಲಶ್ರುತಿ

ಕಾಚರನಹಳ್ಳಿ ಕೆರೆ ಅಂಗಳದಲ್ಲಿ ವಾಸವಾಗಿದ್ದ ವಲಸೆ ಕಾರ್ಮಿಕರ ಗುಡಿಸಲು ಧ್ವಂಸ ಪ್ರಕರಣ ಸಂಬಂಧ ‘ವಾರ್ತಾಭಾರತಿ’ ಪತ್ರಿಕೆಯ ಮುಖಪುಟದಲ್ಲಿ 'ಕೊಳಗೇರಿ ಧ್ವಂಸ' ಎಂಬ ತಲೆಬರಹದಡಿ ಪ್ರಕಟವಾದ ವರದಿ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್ ಅವರು ಪೊಲೀಸರಿಗೆ ದೂರು ನೀಡಿದ್ದು, ಸರಕಾರದ ಅಧಿಕೃತ ಘೋಷಿತ ಕೊಳಚೆ ಪ್ರದೇಶ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News