ಕೆಎಸ್ಆರ್‌ಟಿಸಿ ಬಸ್ ಚಾಲಕ-ನಿರ್ವಾಹಕರಿಗೆ ಊಟದ ಸಮಸ್ಯೆ !

Update: 2020-05-25 18:08 GMT

ಬೆಂಗಳೂರು, ಮೇ 25: ಕೋವಿಡ್-19 ಲಾಕ್‍ಡೌನ್ ಸಡಿಲಿಕೆ ಬಳಿಕ ದೂರದ ಊರುಗಳಿಗೆ ತೆರಳುವ ಕೆಎಸ್ಆರ್‌ಟಿಸಿ ಬಸ್‍ಗಳ ಚಾಲಕ-ನಿರ್ವಾಹಕರು ಊಟ-ತಿಂಡಿಯಿಲ್ಲದೆ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯ ಎದುರಾಗಿದೆ.

ರಾಜಧಾನಿಯಿಂದ ದೂರದ ನಗರಗಳಾದ ಮಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ ಉತ್ತರ ಕರ್ನಾಟಕ್ಕೆ ತೆರಳುವ ಬಸ್ ಸಿಬ್ಬಂದಿಗೆ ಮುಂಜಾನೆ ಹಾಗೂ ರಾತ್ರಿಯ ವೇಳೆಯಲ್ಲಿ ಊಟ-ತಿಂಡಿಯ ಸಮಸ್ಯೆ ಎದುರಾಗಿದೆ.

ಬೆಂಗಳೂರಿನಿಂದ ಮುಂಜಾನೆ ಅಥವಾ ರಾತ್ರಿ ಪಾಳಿಯಲ್ಲಿ ಬಸ್‍ಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಒಂದೊಂದು ನಗರವನ್ನು ತಲುಪಲು ಕನಿಷ್ಠ 5 ರಿಂದ 7-8 ತಾಸುಗಳ ಅಗತ್ಯವಿದೆ. ಆದರೆ, ಎಲ್ಲಿಯೂ ಹೊಟೇಲ್‍ಗಳಿಲ್ಲದೇ ಅನ್ನ-ನೀರಿಗಾಗಿ ಚಾಲಕ ಮತ್ತು ನಿರ್ವಾಹಕರು ಪರದಾಡುವಂತಾಗಿದೆ. ಅಲ್ಲದೆ, ಕೊರೋನ ಆತಂಕದ ನಡುವೆಯೇ ಪ್ರಯಾಣ ಮಾಡಬೇಕಾಗಿದೆ.

ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮುಂಜಾನೆ 7 ಗಂಟೆಯಿಂದಲೇ ಬಸ್‍ಗಳು ಕಾರ್ಯಾಚರಿಸಲು ಆರಂಭಿಸುತ್ತವೆ. ಪ್ರಯಾಣಿಕರು ಸಹಜವಾಗಿಯೇ ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತುಕೊಂಡು ಟಿಕೆಟ್ ಖರೀದಿ ಮಾಡುತ್ತಿರುತ್ತಾರೆ. ಅವರನ್ನು ಬಸ್‍ಗೆ ಹತ್ತಿಸುವ ಪ್ರಕ್ರಿಯೆಯಲ್ಲಿ ಬೆಳಗ್ಗೆ ಸಿಬ್ಬಂದಿಗೆ ತಿಂಡಿ ಮಾಡಲು ಸಮಯವೇ ಇರುವುದಿಲ್ಲ.

ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಚಾಲನೆಯ ವೇಳೆ ಮಾರ್ಗ ಮಧ್ಯೆ ಯಾವುದೇ ಕಡೆಗಳಲ್ಲಿ ಬಸ್ ನಿಲ್ಲಿಸುವ ಹಾಗಿಲ್ಲ. ಅಷ್ಟೇ ಅಲ್ಲ, ಈ ಹಿಂದಿನ ವ್ಯವಸ್ಥೆಯಂತೆ ಬಸ್ ಚಾಲಕ, ನಿರ್ವಾಹಕ ಸಹಿತ ಪ್ರಯಾಣಿಕರಿಗೆ ಊಟಕ್ಕೆಂದು ಮಾರ್ಗ ಮಧ್ಯೆ ಬಸ್ ನಿಲ್ಲಿಸುವಂತಿಲ್ಲ. ಪ್ರಯಾಣಿಕರು ಬಸ್ ಹತ್ತುವಾಗಲೇ ಪಾರ್ಸೆಲ್ ತರಬೇಕು. ಇನ್ನು, ಚಾಲಕರು, ನಿರ್ವಾಹಕರು ನಿಗದಿತ ಡಿಪೋಗೆ ತೆರಳಿದ ಬಳಿಕ ಊಟ-ತಿಂಡಿ ಸೇವಿಸಬೇಕು.

ಊಟ, ತಿಂಡಿಗಾಗಿ ಬಸ್ ಚಾಲಕರು-ನಿರ್ವಾಹಕರು ಹೊಟೇಲ್‍ಗಳನ್ನು ಅವಲಂಬಿಸಿರುತ್ತಾರೆ. ಅಲ್ಲದೆ, ಹೊಟೇಲ್‍ಗಳಲ್ಲಿಯೂ ಪಾರ್ಸಲ್‍ಗಷ್ಟೇ ಅವಕಾಶ ನೀಡಲಾಗಿದೆ. ಅದಕ್ಕೂ ಹೊಟೇಲ್‍ನಲ್ಲಿ ದುಪ್ಪಟ್ಟು ದರ ನೀಡಬೇಕು. ಒಂದೆಡೆ ಈ ಸಮಸ್ಯೆಯಾದರೆ, ಮತ್ತೊಂದಡೆ ನಿರ್ವಾಹಕರಿಗೆ ಪ್ರಯಾಣಿಕರ ಗೋಳು ತಪ್ಪುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಚಾರವು ಪ್ರಯಾಣಿಕರ ನಡುವೆ ವಾಗ್ವಾದಕ್ಕೆ ಕಾರಣವಾಗುತ್ತಿದೆ.

ಮಾರ್ಗಸೂಚಿಯಂತೆ ಸಂಚಾರ: ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಕೆಎಸ್ಸಾರ್ಟಿಸಿ ಬಸ್ ಕಾರ್ಯಾಚರಿಸುತ್ತಿವೆ. ಹೊಟೇಲ್‍ಗಳು ಈಗಾಗಲೇ ಬಂದ್ ಆಗಿದ್ದು, ಸಿಬಂದಿಗೆ ಅಥವಾ ಪ್ರಯಾಣಿಕರಿಗೆ ಊಟ-ತಿಂಡಿಗೆಂದು ಎಲ್ಲಿಯೂ ನಿಲ್ಲಿಸುವುದಿಲ್ಲ. ಪ್ರಯಾಣಿಕರು ಮನೆಯಿಂದ ಬರುವಾಗ ಊಟ-ತಿಂಡಿ ತರಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News