ತಡವಾಗಿ ಕಿರಿಯರ ಶಾಲೆ ಆರಂಭಕ್ಕೆ ಚಿಂತನೆ

Update: 2020-05-26 16:19 GMT

ಬೆಂಗಳೂರು, ಮೇ 26: ಮುಂದಿನ ಶೈಕ್ಷಣಿಕ ವರ್ಷದ ಶಾಲಾ-ಕಾಲೇಜುಗಳನ್ನು ಮರು ಆರಂಭದ ಸಂಬಂಧ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಆದರೆ, ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ತರಗತಿಗಳನ್ನು ಮತ್ತಷ್ಟು ತಡವಾಗಿ ಆರಂಭಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.

ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ದ್ವಿತೀಯ ಪಿಯುಸಿ ತರಗತಿಗಳ ಆರಂಭಕ್ಕಾಗಿ ಶಿಕ್ಷಣ ಇಲಾಖೆ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆಯಾದರೂ ಆರೋಗ್ಯ ಇಲಾಖೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣ ಕೋಶದಿಂದ ಹಸುರು ನಿಶಾನೆ ಸಿಕ್ಕಿಲ್ಲ.

ಮುಂದಿನ ಶೈಕ್ಷಣಿಕ ವರ್ಷ ಆರಂಭಕ್ಕೆ ಸಂಬಂಧಿಸಿದಂತೆ ಹಲವು ರೀತಿಯ ಚರ್ಚೆಗಳು ನಡೆಯುತ್ತಿದ್ದು, ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಕುರಿತು ಈಗಾಗಲೇ ಹಲವು ಬಾರಿ ಚರ್ಚೆ ನಡೆಸಿದ್ದಾರೆ. ಆದರೆ ಶಾಲೆ ಆರಂಭ ಯಾವಾಗ ಎನ್ನುವುದು ಸ್ಪಷ್ಟವಾಗಿಲ್ಲ. ಆರಂಭಿಸಿದರೂ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿಗಳನ್ನು ವಿಳಂಬವಾಗಿ ಆರಂಭಿಸುವ ಕುರಿತು ಗಂಭೀರ ಚಿಂತನೆ ನಡೆಯುತ್ತಿದೆ.

ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ: ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿ ಯಾವಾಗ ಆರಂಭಿಸಿದರೆ ಸೂಕ್ತ ಎಂಬ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹವನ್ನು ಶಿಕ್ಷಣ ಸಚಿವರೇ ಮಾಡಿದ್ದಾರೆ. ಬಹುತೇಕರು ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿಗಳನ್ನು ವಿಳಂಬವಾಗಿ ಆರಂಭಿಸುವಂತೆ ಸಲಹೆ ನೀಡಿದ್ದಾರೆ.

ಹೀಗಾಗಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿಗಳನ್ನು ವಿಳಂಬವಾಗಿ ತೆರೆಯುವ ನಿಟ್ಟಿನಲ್ಲಿ ರೂಪುರೇಷಗಳು ಸಿದ್ಧವಾಗುತ್ತಿವೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ಖಚಿತಪಡಿಸಿವೆ.

ತರಗತಿ ಆರಂಭ ಸಂಬಂಧ ಶಿಕ್ಷಣ ಇಲಾಖೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕೇಂದ್ರದ ಮಾನವ ಸಂಪದಭಿವೃದ್ಧಿ ಸಚಿವಾಲಯದ ನಿರ್ದೇಶನವನ್ನು ಪಾಲಿಸುವ ಜತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣ ಕೋಶ ನೀಡುವ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ.

ಜತೆಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಅನುಮತಿ ಸಿಕ್ಕ ಅನಂತರವೇ ತರಗತಿ ಆರಂಭಿಸಲು ಸಾಧ್ಯ. ಯಾವ ರೀತಿಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದೂ ಆರೋಗ್ಯ ಇಲಾಖೆ ಸೂಚನೆ ನೀಡಲಿದೆ. ಅದರಂತೆ ಶೈಕ್ಷಣಿಕ ತರಗತಿ ಆರಂಭಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಶೈಕ್ಷಣಿಕ ವರ್ಷದ ಆರಂಭ ಸಂಬಂಧ: ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರಕಾರದ ಅನುಮತಿ ಇಲ್ಲದೆ ಶಾಲೆ ಆರಂಭಿಸಲು ಸಾಧ್ಯವಿಲ್ಲ. ಹೀಗಾಗಿ ಹಲವು ಆಯಾಮಗಳ ಚರ್ಚೆ ನಡೆಸಿದ್ದೇವೆ. ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News