ಅಯ್ಯೋ ವಲಸೆ ಕಾರ್ಮಿಕ!

Update: 2020-05-26 17:18 GMT

ಭಾರತದ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲದವರಿಗೆ, ಭಾರತವನ್ನು ಅಂತರ್ಗತ ಮಾಡಿಕೊಳ್ಳದವರಿಗೆ ಈಗ ಒಂದು ಒಳ್ಳೆಯ ಅವಕಾಶ. ಇದು ಯಾವಾಗಲೂ ಲಭಿಸುವುದಿಲ್ಲ. ಈಗ ಸಾಕಷ್ಟು ಸಮಯಾವಕಾಶವೂ ಇದೆ. ಸದಾ ಫ್ಯಾಂಟಸಿ ಜಗತ್ತಿನಲ್ಲಿ ತೇಲಾಡುತ್ತಿರುವ ನಾವು ನಿಜವಾದ ಭಾರತ ಹೇಗೆ ಇದೆ ಎಂಬುದನ್ನು ಕಣ್ಣಾರೆ ನೋಡಲು ಮಾಡಬೇಕಾಗಿದ್ದು ಇಷ್ಟೇ. ಈ ಹಿಂದೆ ಒಂದು ಬಾರಿ ಮನೆಯ ಬಾಲ್ಕನಿಗೆ ಬಂದು ಜಾಗಟೆ ಬಾರಿಸಿ ಕೊರೋನ ಓಡಿಸಲು ಶ್ರಮಪಟ್ಟಿದ್ದನ್ನು ಸ್ಮರಿಸುತ್ತಾ ಮತ್ತೊಮ್ಮೆ ಬಂದು ಬೀದಿಯನ್ನು ನೋಡಿದರಾಯಿತು. ತಮ್ಮ ವೃದ್ಧ ಪಾಲಕರನ್ನು ಹೊತ್ತುಕೊಂಡು ಹೋಗುತ್ತಿರುವ ಆಧುನಿಕ ಶ್ರವಣ ಕುಮಾರರು, ಹಸಿದ ಮಕ್ಕಳನ್ನು ಕಂಕುಳಲ್ಲಿ ಇರಿಸಿ ಸೊರಗಿದ ಮುಖಭಾವದೊಂದಿಗೆ ಗಂಟು ಮೂಟೆ ಹೊತ್ತು ಸುಸ್ತಾಗಿ ಸಾಗುತ್ತಿರುವ ಗರ್ಭಿಣಿಯರು, ಕೊಳೆತ ಆಹಾರದ ಮುಂದೆ ಕೂತು ರೋದಿಸುತ್ತಿರುವ ಕಾರ್ಮಿಕರು, ಬೊಬ್ಬೆ ಎದ್ದಿರುವ ಪಾದಗಳಿಂದಾಗಿ ಇನ್ನು ಒಂದು ಹೆಜ್ಜೆಯೂ ಮುಂದಕ್ಕೆ ಹಾಕಲು ಸಾಧ್ಯವಾಗದೆ ದಯನೀಯ ಸ್ಥಿತಿಯಲ್ಲಿ ಅಸಹಾಯಕರಾಗಿ ಬಿದ್ದಿರುವ ವಲಸಿಗರನ್ನು ಕಾಣಬಹುದು. ಇದೇ ನಮ್ಮ ಭಾರತ. ಕಾಶ್ಮೀರದಿಂದ ಕನ್ಯಾ ಕುಮಾರಿವರೆಗೆ ಕಳೆದ ಕೆಲವು ದಿನಗಳಿಂದ ನಮ್ಮ ಕಣ್ಣಿಗೆ ಬೀಳುತ್ತಿರುವ ಮನಕಲಕುವ ದ್ರಶ್ಯ ಇದು.

 ಲಾಕ್‌ಡೌನ್ ಯಡವಟ್ಟು
 ಭಾರತದಂತಹ ಬಡವರೇ ತುಂಬಿರುವ ಬಹು ಭಾಷೆಯ, ಬಹು ಸಂಸ್ಕೃತಿಯ ದೇಶದಲ್ಲಿ ಯಾವುದೇ ಒಂದು ಹೇಳಿಕೆ ನೀಡುವಾಗ ಅಥವಾ ಕ್ರಮ ಕೈಗೊಳ್ಳುವಾಗ ಈ ದೇಶದ ನಾಡಿ ಮಿಡಿತವನ್ನು ಚೆನ್ನಾಗಿ ಅರಿತಿರಬೇಕು. ವಿವೇಚನಾ ರಹಿತ ದುಡುಕಿನ ಮಾತಾಗಲಿ ಅಥವಾ ಕ್ರಮವಾಗಲಿ ಮೊದಲು ಕೊಳ್ಳಿ ಇಡುವುದು ಬಡವರ ಬದುಕಿನ ಬುಡಕ್ಕೆ ಎಂಬ ಇತಿಹಾಸ ಪುನರಾವರ್ತನೆಯಾಗುತ್ತಿದೆ. ಈ ಹಿಂದೆ ಅಥವಾ ಇತ್ತೀಚೆಗೆ ನಡೆದಿರುವ ಹಲವು ಘಟನೆಗಳಲ್ಲಿ ಬದುಕು ಕಳೆದು ಕೊಂಡಿರುವವರು ಬಡವರೇ ಹೆಚ್ಚು. ಇದೀಗ ಕೊರೋನ ನಿಮಿತ್ತ ಸರಕಾರ ಕೈಗೊಂಡಿರುವ ಕ್ರಮಗಳು ಕೊನೆಗೂ ಬಲಿ ತೆಗೆದುಕೊಂಡಿದ್ದು ದುರ್ಬಲರಾದ ವಲಸೆ ಕಾರ್ಮಿಕರನ್ನು. ವಲಸಿಗರ ಈ ದಯನೀಯ ಸ್ಥಿತಿಗೆ ನಾವೇ ಕಾರಣ. ನಾವು ಮತ ಹಾಕಿ ಆರಿಸಿರುವ ಸರಕಾರಕ್ಕೆ ನಮ್ಮ ದೇಶದ ಸ್ಪಷ್ಟ ಪರಿಕಲ್ಪನೆಯೇ ಇಲ್ಲ. ಅದು ಭಾರತ ಎಂದರೆ ಅಂಬಾನಿ, ಅದಾನಿ, ಡಿಜಿಟಲ್ ಇಂಡಿಯಾ ಎಂಬ ಗುಂಗಿನಲ್ಲಿದೆ. ಯಾವುದೇ ಕ್ರಮ ಕೈಗೊಳ್ಳುವಾಗ ಅಂಬಾನಿ, ಅದಾನಿಯಂತಹ ಶ್ರೀಮಂತ ಕುಳಗಳನ್ನು ಹೊರಗಿಟ್ಟು, ತಳಸಮುದಾಯಗಳ ಯೋಗಕ್ಷೇಮದ ಬಗ್ಗೆ ಯೋಚಿಸಬೇಕು. ಧಿಡೀರ್ ಲಾಕ್‌ಡೌನ್‌ಘೋಷಿಸುವ ಮೊದಲು ವಲಸೆ ಕಾರ್ಮಿಕರ ಬಗ್ಗೆ ಒಂದು ಬಾರಿ ಚಿಂತಿಸಬೇಕಿತ್ತು. ಇಂತಹ ಆತುರಾತುರದ ಕ್ರಮ ಸಮಾಜದ ಕೆಳವರ್ಗಕ್ಕೆ ಯಾವ ರೀತಿಯ ಸಂಕಷ್ಟ ತರಲಿದೆ ಎಂಬುದನ್ನು ಯೋಚಿಸಬೇಕಿತ್ತು. ನಮ್ಮ ದೇಶದಲ್ಲಿರುವವರೆಲ್ಲ ಸ್ವಂತ ವಿಮಾನ, ಕಾರು, ಬಂಗಲೆ, ಸಾಕಷ್ಟು ಉದ್ದಿಮೆ, ಡಿಜಿಟಲ್ ವ್ಯವಹಾರ ನಡೆಸುವವರಲ್ಲ ಎಂಬ ಸಣ್ಣ ಮಟ್ಟಿನ ತಿಳುವಳಿಕೆ ನಮ್ಮ ಸರಕಾರಕ್ಕೆ ಇರಬೇಕಿತ್ತು. ಇದರ ಕೊರತೆಯಿಂದಾಗಿಯೇ ಇಂದು ವಲಸೆ ಕಾರ್ಮಿಕರು ಬೀದಿ ಹೆಣವಾಗುತ್ತಿದ್ದಾರೆ.

ದೇಶ ಕಟ್ಟಿದವರು

ಬೃಹತ್ ಜನ ಸಂಖ್ಯೆ ಹೊಂದಿರುವ ನಮ್ಮದೊಂದು ಬಡವರ ದೇಶ. ಬದುಕು ಕಟ್ಟಿಕೊಳ್ಳಲು ದೇಶಾಂತರ ಹೋಗುವ ಅವರ ಕಷ್ಟ ಕಾರ್ಪಣ್ಯಗಳ ಬಗ್ಗೆ ಸರಕಾರ ಯೋಚಿಸಬೇಕಿತ್ತು. ಕೋವಿಡ್-19 ದೇಶಕ್ಕೆ ಪ್ರವೇಶಿಸುವ ಮುನ್ನ ಮತ್ತು ನಂತರವೂ ನಮ್ಮ ಕೈಯಲ್ಲಿ ಸಾಕಷ್ಟು ಸಮಯಾವಕಾಶವಿತ್ತು. ವಲಸೆ ಕಾರ್ಮಿಕರನ್ನು ಸೂಕ್ತ ಸಮಯದಲ್ಲಿ ಅವರವರ ಊರುಗಳಿಗೆ ಹೋಗಲು ಅವಕಾಶ ನೀಡುತ್ತಿದ್ದರೆ ಇಂದು ಮನಕಲಕುವ ಈ ದ್ರಶ್ಯಗಳು ನಮ್ಮ ಕಣ್ಣ ಮುಂದೆ ಬರುತ್ತಿರಲಿಲ್ಲ. ನಿರ್ಲಕ್ಷ ತಾಳಿದ ಪರಿಣಾಮ ವಲಸೆ ಕಾರ್ಮಿಕನ ಬದುಕು ಜರ್ಜರಿತವಾಗಿದೆ. ದೇಶ ಕಟ್ಟಲು ವಲಸೆ ಕಾರ್ಮಿಕರ ಕಾಣಿಕೆ ಯಾವ ಮಟ್ಟದಲ್ಲೂ ಕಮ್ಮಿ ಇಲ್ಲ. ಊರೂರು ಅಲೆದಾಡಿ ತಮ್ಮ ಬದುಕು ಕಟ್ಟುವ ಜೊತೆ ಜೊತೆಗೆ ದೇಶವನ್ನು ಕಟ್ಟಿರುವವರು ಇವರೇ. ನಮ್ಮ ಮಕ್ಕಳು ಇಂಜಿನಿಯರೋ, ಡಾಕ್ಟರೋ ಆಗಿ ದೂರದ ಊರಲ್ಲಿ ಎಲ್ಲೋ ದುಡಿಯುತ್ತಿರುವಾಗ ನಮಗೊಂದು ಸುಂದರವಾದ ಮನೆಯೋ, ಕಚೇರಿಯೋ, ಕ್ರೀಡಾಂಗಣವೋ, ರಸ್ತೆಯೋ ಶಾಪಿಂಗ್ ಮಾಲೋ, ಶಾಲಾ ಕಾಲೇಜೋ ಕಟ್ಟಲು ಹೆಗಲು ಕೊಟ್ಟಿದ್ದು, ಬೆವರು ಹರಿಸಿದ್ದು ಇವರೇ. ನಮ್ಮ ಭವ್ಯವಾದ ದೇವಾಲಯವೋ, ಮಸೀದಿಯೋ, ಇಗರ್ಜಿಯೋ ನಿರ್ಮಾಣಗೊಳ್ಳಲು ಜೀವ ಸವೆಸಿದವರು ಇವರೇ. ಅದಕ್ಕಿಂತಲೂ ಹೆಚ್ಚಾಗಿ ನಮ್ಮೂರುಗಳಲ್ಲಿ ಇದ್ದ ಕಾರ್ಮಿಕರ ಸಮಸ್ಯೆಯನ್ನು ನಿವಾರಿಸಿದವರೂ ಇವರೇ. ತಾವು ತೊಡುವ ಆಭರಣ, ಉಡುವ ಬಟ್ಟೆ, ಆಡುವ ಭಾಷೆಗಳ ಮೂಲಕ ನಮ್ಮ ಬಹು ಸಂಸ್ಕೃತಿಯನ್ನು ದೇಶದ ಉದ್ದಗಲಕ್ಕೂ ಪರಿಚಯಿಸಿ ವೈವಿಧ್ಯತೆಯನ್ನು ಪೋಷಿಸಿದವರು ಇವರೇ. ನಮಗೆ ವಿವಿಧ ಭಾಷೆಗಳನ್ನು ಪರಿಚಯಿಸಿದ ಭಾಷಾ ಪಂಡಿತರೂ ಇವರೇ. ಒಂದರ್ಥದಲ್ಲಿ ಸಾಂಸ್ಕೃತಿಕ ರಾಯಭಾರಿಗಳು. ಅಂತಹವರನ್ನು ಇಂದು ನಾವು ನಡೆಸಿಕೊಂಡ ರೀತಿ ಅಮಾನವೀಯ ಮತ್ತು ಅಕ್ಷಮ್ಯ. ಲಾಕ್‌ಡೌನ್‌ಗೆ ಮೊದಲೇ ಅವರನ್ನು ಅವರವರ ಪಾಡಿಗೆ ಅವರವರ ಊರುಗಳಿಗೆ ಹೋಗಿ ತಮ್ಮ ತಮ್ಮ ಕುಟುಂಬಗಳನ್ನು ಸೇರಲು ಬಿಡುತ್ತಿದ್ದರೆ ಅವರಿಗೆ ಮಾಡುವ ಬಲು ದೊಡ್ಡ ಉಪಕಾರವಾಗುತ್ತಿತ್ತು. ಇದೊಂದು ಕೋವಿಡ್-19 ತಡೆಗಟ್ಟಲು ಉಪಯುಕ್ತ ಕ್ರಮವೂ ಆಗುತ್ತಿತ್ತು. ಆದರೆ ಆ ರೀತಿ ಮಾಡದೆ ಶ್ರೀಮಂತ ಕುಳಗಳ ಚಿಂತೆಯಲ್ಲಿಯೇ ಮುಳುಗಿದ್ದ ನಮ್ಮ ಸರಕಾರ ವಲಸಿಗರನ್ನು ಲಾಕ್‌ಡೌನ್ ಎಂಬ ಸಂಕೋಲೆಯಲ್ಲಿ ಬಂಧಿಸಿ ಆಹಾರ, ನಿದ್ದೆ ಇಲ್ಲದೆ, ಬೀದಿ ಬದಿಯಲ್ಲಿ ನರಳಾಡಿ ಸಾಯುವಂತೆ ಮಾಡಿದೆ.

ವಲಸೆ ಕಾರ್ಮಿಕರನ್ನು ಮುಂಚಿತವಾಗಿ ಅವರ ಊರಿಗೆ ಕಳುಹಿಸಿದರೆ, ಮಹಾ ನಗರಗಳಲ್ಲಿ ಕಾರ್ಮಿಕರ ಲಭ್ಯತೆಯ ಕೊರತೆ ಉಂಟಾಗಬಹುದು ಎಂಬುದು ಸರಕಾರದ ಆತಂಕವಾಗಿತ್ತೋ ಅಥವಾ ಬಡವರ ಬಗ್ಗೆ ಈ ಸರಕಾರದ ಧೋರಣೆಯೇ ಹೀಗೆ ಏನೋ? ಇಲ್ಲದಿದ್ದಲ್ಲಿ ವಲಸೆ ಕಾರ್ಮಿಕರಿಗೆ ಇಂದು ಇಂತಹ ದುಸ್ಥಿತಿ ಬರುತ್ತಿರಲಿಲ್ಲ. ಆಯಿತು, ಕೊರೋನ ಬಗ್ಗೆ ಅಷ್ಟೊಂದು ಮಾಹಿತಿ ಇರಲಿಲ್ಲ, ಅದರ ಜಾಡು ಕಂಡು ಹಿಡಿಯಲು ಅಸಾಧ್ಯವಾಯಿತೆಂದೇ ಒಪ್ಪಿಕೊಳ್ಳೋಣ, ಬಳಿಕವಾದರೂ ಅವರಿಗೆ ತುರ್ತು ಸೂಕ್ತ ಸಾರಿಗೆ ವ್ಯವಸ್ಥೆ ಮಾಡಿಕೊಟ್ಟು ಅವರು ಊರನ್ನು ಸುರಕ್ಷಿತವಾಗಿ ತಲುಪುವಂತೆ ನೋಡಿಕೊಳ್ಳುತ್ತಿದ್ದರೂ ಸಾಕಾಗುತ್ತಿತ್ತು. ನಮ್ಮಲ್ಲಿ ಇಷ್ಟೊಂದು ಸಾರಿಗೆ ವ್ಯವಸ್ಥೆಗಳಾದ ವಿಮಾನ, ರೈಲು, ಬಸ್ ಸಂಚಾರ ವ್ಯವಸ್ಥೆ ಇರುವಾಗ ಅದನ್ನು ಉಪಯೋಗಿಸಬಹುದಿತ್ತು. ಆದರೆ ಆಳುವ ಸರಕಾರ ಅದರ ಗೋಜಿಗೇ ಹೋಗಿಲ್ಲ. ಈ ದೇಶದ ಬಡವರ ಕಷ್ಟಕ್ಕೆ ಉಪಯೋಗವಾಗದ ಈ ಎಲ್ಲ ವ್ಯವಸ್ಥೆಗಳು ಇದ್ದು ಏನು ಪ್ರಯೋಜನ? ತಮ್ಮ ಪಾಲಕರೊಂದಿಗೆ ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಾಕುತ್ತಾ ದೂರದ ಊರಿಗೆ ನಡೆಯುತ್ತಿದ್ದ ಮುಗ್ಧ ಕಂದಮ್ಮಗಳ ಬಗ್ಗೆಯೂ ಸರಕಾರದ ಮನಸ್ಸು ಕರಗಲಿಲ್ಲ. ನಾಳೆ ಇವರು ಯುದ್ಧ ಭೂಮಿಯಲ್ಲಿ ದೇಶಕ್ಕಾಗಿ ಹೋರಾಡಬಹುದಾದ ವೀರ ಸೈನಿಕರೂ ಆಗಬಹದು, ದೇಶವನ್ನು ವೈಜ್ಞಾನಿಕ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಒಯ್ಯಬಹುದಾದ ವಿಜ್ಞಾನಿಗಳೂ ಆಗಬಹುದು, ದೇಶವನ್ನು ಜಾಗತಿಕ ಮಟ್ಟದಲ್ಲಿ ಮುನ್ನಡೆಸಬಹುದಾದ ನಾಯಕರೂ ಆಗಬಹುದು. ಇದ್ಯಾವುದು ಆಗದಿದ್ದರೂ ಕೊನೆಯ ಪಕ್ಷ ಇವರೆಲ್ಲ ನಮ್ಮ ಭಾರತ ಮಾತೆಯ ಪುಟಾಣಿ ಪ್ರಜೆಗಳು ಎಂಬ ಸಣ್ಣ ಅರಿವು ನಮ್ಮ ಸರಕಾರದ ಯೋಚನಾ ಲಹರಿಯಲ್ಲಿ ಹಾದು ಹೋಗಬೇಕಿತ್ತು.

ಈ ವಲಸಿಗರು ಇದೀಗ ಹೇಗಾದರೂ ನೂರಾರು ಕಿಲೋ ಮೀಟರ್ ನಡೆದು ತಮ್ಮ ತಮ್ಮ ರಾಜ್ಯಗಳ ಗಡಿ ತಲುಪಿದರೂ ಅವರನ್ನು ಕೆಲವು ರಾಜ್ಯಗಳು ಒಳ ಪ್ರವೇಶಿಸಲು ಬಿಡುತ್ತಿಲ್ಲ. ಇದರಿಂದಾಗಿ ಹಿಂಸಾಚಾರವೂ ನಡೆದಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ನಮ್ಮದೇ ರಾಜ್ಯದ ಕನ್ನಡಿಗರು ಈ ಬಗ್ಗೆ ನೊಂದು ಅಳವತ್ತುಕೊಂಡಿದ್ದಾರೆ. ಈ ಎಲ್ಲ ಮಾನವೀಯ ಬಿಕ್ಕಟ್ಟಿಗೆ ಸರಕಾರದ ವಿವೇಚನೆ ರಹಿತ ಲಾಕ್‌ಡೌನ್ ನಿರ್ಧಾರವೇ ಕಾರಣ.

 ಊಹೆಗೆ ಸಿಲುಕದ ವೇದನೆ ದೇಶದ ಪ್ರಮುಖ ಪ್ರಾರ್ಥನಾ ಸ್ಥಳಗಳಿಗೆ ಆಗಿರುವ ಕೋಟಿ ಕೋಟಿ ರೂ. ನಷ್ಟದ ಬಗ್ಗೆ ವರದಿಯಾಗಿದೆ. ಇವುಗಳಲ್ಲಿ ಆಂಧ್ರದ ತಿರುಪತಿ, ಕೇರಳದ ಅನಂತ ಪದ್ಮನಾಭ, ಮುಂಬೈಯ ಹಾಜಿ ಅಲಿ ಮತ್ತು ರಾಜಸ್ತಾನದ ಅಜ್ಮೀರ್ ದರ್ಗಾಗಳೂ ಸೇರಿವೆ. ಇವೆಲ್ಲ ಬರೀ ಆರ್ಥಿಕ ನಷ್ಟಗಳು. ಇದನ್ನು ಇಂದಲ್ಲ ನಾಳೆಯಾದರೂ ಧಾರ್ಮಿಕ ಶ್ರದ್ಧಾಳುಗಳು ತುಂಬಬಹುದು. ಆದರೆ ವಲಸೆ ಕಾರ್ಮಿಕರನ್ನು ಕಳೆದುಕೊಂಡ ಅವರ ಕುಟುಂಬಕ್ಕೆ ಆಗಿರುವ ಮಾನಸಿಕ ವೇದನೆಯ ನಷ್ಟದ ಮೌಲ್ಯ ಯಾರ ಊಹೆಗೂ ಬಂದಿಲ್ಲ.

ಶೋಷಣೆಗೆ ಸರಕಾರದ ಅಭಯ
ಕಡಿಮೆ ವೇತನ, ಅಸುರಕ್ಷತೆಯ ಕೆಲಸದ ವಾತಾವರಣ, ಖಾತರಿ ಇಲ್ಲದ ಉದ್ಯೋಗದಂತಹ ಶೋಷಣೆಗಳಿಗೆ ಈಗಾಗಲೇ ಒಳಗಾಗಿರುವ ಕಾರ್ಮಿಕರನ್ನು ಮತ್ತಷ್ಟು ಶೋಷಣೆ ಮಾಡಲು ಸರಕಾರ ಕೆಲವು ಲಾಭಕೋರ ಕಂಪೆನಿಗಳಿಗೆ ಮತ್ತೊಂದು ಅಸ್ತ್ರ ನೀಡಿದೆ. ಅದೇ ಕಾರ್ಮಿಕ ಕಾನೂನುಗಳಿಗೆ ವಿರುದ್ಧವಾಗಿರುವ ಕೆಲಸದ ಅವಧಿಯ ವಿಸ್ತರಣೆ. ಅಂದ ಮಾತ್ರಕ್ಕೆ ಎಲ್ಲ ಕಂಪೆನಿಗಳು ಕಾರ್ಮಿಕರನ್ನು ಶೋಷಣೆ ಮಾಡುತ್ತವೆ ಎಂದಲ್ಲ. ಕಾರ್ಮಿಕರನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುವ ಅವೆಷ್ಟೋ ಕಂಪೆನಿಗಳಿವೆ. ಅಂತಹ ಕಂಪೆನಿಗಳು ಸರಕಾರದ ಇಂತಹ ಆದೇಶಗಳನ್ನು ಗಣನೆಗೆ ತೆಗೆದುಕೊಳ್ಳದೆ ಕಾರ್ಮಿಕರ ಜೊತೆ ಉತ್ತಮ ಬಾಂಧವ್ಯ ಹೊಂದುವುದಕ್ಕೆ ಒತ್ತು ನೀಡಲಿವೆ. ಆದರೆ ಕೆಲವು ಲಾಭಕೋರ ಉದ್ದಿಮೆಗಳಿಗೆ ಕಾರ್ಮಿಕರನ್ನು ಶೋಷಣೆ ಮಾಡಲು ಸರಕಾರವೇ ಮುಂದೆ ನಿಂತು ಅಭಯ ನೀಡಿದಂತಾಗಿದೆ. ಈ ಕ್ರಮದಿಂದಾಗಿ ಕಾರ್ಮಿಕರು ಮತ್ತು ಕಂಪೆನಿ ಮಾಲಕರ ಸಂಬಂಧ ಹದಗೆಡಲಿದೆ. ಸರಕಾರದ ಈ ಕ್ರಮದ ಬಗ್ಗೆ ದೇಶದ ಶ್ರೇಷ್ಠ ಸಾಫ್ಟ್‌ವೇರ್ ಉದ್ಯಮಿ ಹಾಗೂ ಮಾನವತಾವಾದಿ ಅಜೀಮ್ ಪ್ರೇಮ್ ಜಿ ನೋವು ವ್ಯಕ್ತಪಡಿಸಿದ್ದಾರೆ. ಒಬ್ಬ ಒಳ್ಳೆಯ ಉದ್ಯಮಿ ಕಾರ್ಮಿಕರಿಂದ ಕೆಲಸ ತೆಗೆಯಲು ಚೆನ್ನಾಗಿ ಅರಿತಿರುತ್ತಾನೆ. ಆತ ಕಾರ್ಮಿಕರ ಮೇಲೆ ತೋರುವ ಮಾನವೀಯತೆ, ನೀಡುವ ವೇತನ ಮತ್ತು ಸವಲತ್ತು ಒಳ್ಳೆಯದಿದ್ದರೆ 8 ಗಂಟೆಯ ಅವಧಿಯಲ್ಲಿ 16 ಗಂಟೆಗಳ ಉತ್ಪಾದನೆಯನ್ನೂ ಮಾಡಬಹುದು. ಕಂಪೆನಿ ಮೇಲಿನ ನಿಷ್ಠೆಯಿಂದಾಗಿ ಎಷ್ಟೋ ಮಂದಿ ಸಮಯವನ್ನೂ ಪರಿಗಣಿಸದೆ ದುಡಿಯುವವರಿದ್ದಾರೆ.

ಒಟ್ಟಾರೆ ಕಾರ್ಮಿಕರು ಮತ್ತು ಮಾಲಕರ ನಡುವಿನ ಸಂಬಂಧ ಚೆನ್ನಾಗಿರಬೇಕು. ಸರಕಾರ ಕೆಲಸದ ಅವಧಿ ವಿಸ್ತರಿಸಿದಾಕ್ಷಣ ಉತ್ಪಾದನೆ ಹೆಚ್ಚಾಗುತ್ತದೆ ಎಂಬುದು ಬರೀ ಭ್ರಮೆ. ಪ್ರಯೋಜನ ಇಲ್ಲದ ಹೆಚ್ಚುವರಿ ಅವಧಿಯ ದುಡಿಮೆಯು, ಕಾರ್ಮಿಕರ ಮಾನಸಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಒಪ್ಪಿತ ಮಾನ ದಂಡಗಳ ಪ್ರಕಾರ ಕಾರ್ಮಿಕರನ್ನು ಕೇವಲ 8 ಗಂಟೆ ಮಾತ್ರ ದುಡಿಸಬೇಕು. 8 ಗಂಟೆಗಳಿಗಿಂತ ಮೇಲಿನ ಕೆಲಸದ ಅವಧಿಯನ್ನು ಹೆಚ್ಚುವರಿ ಎಂದು ಪರಿಗಣಿಸಿ ಅಧಿಕ ವೇತನವನ್ನು ನೀಡಬೇಕು. ಆದರೆ ಸರಕಾರದ ಈಗಿನ ಆದೇಶವು ಇವೆಲ್ಲ ನಿಯಮಗಳನ್ನು ಗಾಳಿಗೆ ತೂರಿದೆ. ಇದರಿಂದಾಗಿ ಕಾರ್ಮಿಕರು ಇನ್ನು ಮುಂದೆ ಒತ್ತಡದಲ್ಲಿ ದುಡಿಯಬೇಕಾಗಿದೆ. ಇಂತಹ ಮಾನಸಿಕ ಒತ್ತಡ ಕಾರ್ಖಾನೆಗಳಲ್ಲಿ ಅಪಘಾತಗಳಿಗೆ ಕಾರಣವಾಗಲಿದೆ. ಆದ್ದರಿಂದ ಸರಕಾರದ ಈ ಕ್ರಮವು ಕಂಪೆನಿಗಳಿಗೆ ಲಾಭಕ್ಕಿಂತ ಹೆಚ್ಚು ನಷ್ಟವನ್ನೇ ತರಲಿದೆ.

Writer - ಗಿರೀಶ್ ಬಜ್ಪೆ

contributor

Editor - ಗಿರೀಶ್ ಬಜ್ಪೆ

contributor

Similar News