ಡಾ.ಆನಂದ್ ತೇಲ್ತುಂಬ್ಡೆ ಬಿಡುಗಡೆ ಆಗ್ರಹಿಸಿ ಡಿಎಚ್‍ಎಸ್‍ನಿಂದ ಮೌನ ಪ್ರದರ್ಶನ

Update: 2020-05-26 18:22 GMT

ಬೆಂಗಳೂರು, ಮೇ 26: ದಲಿತ ಚಿಂತಕ ಡಾ.ಆನಂದ್ ತೇಲ್ತುಂಬ್ಡೆ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಹಾಗೂ ಕೊರೋನ ಸೋಂಕು ತಡೆಗಟ್ಟಲು ಹೇರಿರುವ ಲಾಕ್‍ಡೌನ್ ಅವಧಿಯಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ದಲಿತ ಹಕ್ಕುಗಳ ಸಮಿತಿ(ಡಿಎಚ್‍ಎಸ್) ವತಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಮೌನ ಪ್ರದರ್ಶನ ನಡೆಸಲಾಯಿತು.

ಮಂಗಳವಾರ ಇಲ್ಲಿನ ಶ್ರೀರಾಮಪುರ ಸೇವಾಶ್ರಮ ಸ್ಕೂಲ್ ಪಕ್ಕದ ಆಟದ ಮೈದಾನದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಬಳಿ ಡಿಎಚ್‍ಎಸ್ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ನೇತೃತ್ವದಲ್ಲಿ ಕಾರ್ಯಕರ್ತರು, ಅಂಬೇಡ್ಕರ್ ಅವರ ಕುಟುಂಬದ ಸದಸ್ಯರು ಆಗಿರುವ ಆನಂದ್ ತೇಲ್ತುಂಬ್ಡೆ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಮಾರಕ ಕೊರೋನ ವೈರಸ್ ಸೋಂಕು ತಡೆಗಟ್ಟಲು ಹೇರಿರುವ ಲಾಕ್‍ಡೌನ್ ಅವಧಿಯಲ್ಲೇ ರಾಜ್ಯದ ಹಲವು ಕಡೆಗಳಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಿರುವುದನ್ನು ನೋಡಿದರೆ, ಜಾತಿಯ ವೈರಸ್ ಕೊರೋನ ಸೋಂಕಿಗಿಂತಲೂ ಭೀಕರ ಮತ್ತು ಅಪಾಯಕಾರಿ. ಹೀಗಾಗಿ ರಾಜ್ಯ ಸರಕಾರ ತಪ್ಪಿತಸ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗೋಪಾಲಕೃಷ್ಣ ಹರಳಹಳ್ಳಿ ಒತ್ತಾಯಿಸಿದರು.

ಕೊರೋನ ಸೋಂಕಿನ ಸಂದರ್ಭದಲ್ಲಿ ಕೃಷಿ ಕೂಲಿ ಕಾರ್ಮಿಕರು, ನಗರದಲ್ಲಿರುವ ಅಸಂಘಟಿತ ಕಾರ್ಮಿಕರ ಪೈಕಿ ಬಹುತೇಕರು ದಲಿತ ಸಮುದಾಯಕ್ಕೆ ಸೇರಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದುದರಿಂದ ಸರಕಾರ ದಲಿತ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಅಲ್ಲದೆ, ಖಾಸಗಿ ಪೈನಾನ್ಸ್‍ಗಳಿಂದ ಬಡವರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಕ್ರಮ ವಹಿಸಬೇಕೆಂದು ಕೋರಿದರು. ಈ ಹೋರಾಟದಲ್ಲಿ ಡಿಎಚ್‍ಎಸ್‍ನ ಸಹಸಂಚಾಲಕ ರಾಜಣ್ಣ, ಪದಾಧಿಕಾರಿಗಳಾದ ಶಂಕರ್, ಹೇಮಾವತಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News