ಸಚಿನ್ ಶ್ರೇಷ್ಠ ಬ್ಯಾಟ್ಸ್ ಮನ್, ಕಾಲಿಸ್ ಪರಿಪೂರ್ಣ ಕ್ರಿಕೆಟಿಗ

Update: 2020-05-27 05:57 GMT

ಹೊಸದಿಲ್ಲಿ, ಮೇ 26: ಸಚಿನ್ ತೆಂಡುಲ್ಕರ್ ಕ್ರಿಕೆಟ್‌ನಲ್ಲಿ ನಾನು ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಜಾಕ್ ಕಾಲಿಸ್ ಓರ್ವ ಪರಿಪೂರ್ಣ ಕ್ರಿಕೆಟಿಗನಾಗಿದ್ದಾರೆ ಎಂದು ಆಸ್ಟ್ರೇಲಿಯದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಹೇಳಿದ್ದಾರೆ.

ಝಿಂಬಾಬ್ವೆಯ ಮಾಜಿ ವೇಗದ ಬೌಲರ್ ಮಬಾಂಗ್ವಾರೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಚರ್ಚೆ ನಡೆಸಿದ ಲೀ, ನಿಮ್ಮ ಶ್ರೇಷ್ಠ ಬ್ಯಾಟ್ಸ್‌ಮನ್ ಯಾರೆಂಬ ಪ್ರಶ್ನೆ ಎದುರಿಸಿದರು.

‘‘ನನ್ನ ಪ್ರಕಾರ ಸಚಿನ್ ತೆಂಡುಲ್ಕರ್ ವಿಶ್ವದ ಓರ್ವ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದಾರೆ ಎಂದರು. ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಬಗ್ಗೆ ಮಾತನಾಡುವಾಗ ತೆಂಡುಲ್ಕರ್ ಹಾಗೂ ಬ್ರಿಯಾನ್ ಲಾರಾ ಹೆಸರು ಪ್ರಮುಖವಾಗುತ್ತದೆ. ನನ್ನ ಅಭಿಪ್ರಾಯದಂತೆ ಜಾಕ್ ಕಾಲಿಸ್ ಓರ್ವ ಪರಿಪೂರ್ಣ ಕ್ರಿಕೆಟಿಗನಾಗಿದ್ದಾರೆ’’ಎಂದು ಲೀ ಹೇಳಿದರು.

 ಕಾಲಿಸ್ ದಕ್ಷಿಣ ಆಫ್ರಿಕಾದ ಪರ 166 ಟೆಸ್ಟ್, 328 ಏಕದಿನ ಹಾಗೂ 25 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. ಕ್ರಿಕೆಟ್ ಕಂಡ ಅತ್ಯಂತ ಶ್ರೇಷ್ಠ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. ಹೆಚ್ಚಿನ ಕ್ರಿಕೆಟ್ ತಜ್ಞರು ಕಾಲಿಸ್ ಹಾಗೂ ಸರ್ ಗ್ಯಾರಿಫೀಲ್ಡ್ ಸೋಬರ್ಸ್‌ರಲ್ಲಿ ಆಯ್ಕೆ ಮಾಡುವುದು ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾಲಿಸ್ ವೃತ್ತಿಜೀವನದಲ್ಲಿ 25,534 ರನ್‌ಗಳ ಜೊತೆಗೆ 577 ವಿಕೆಟ್‌ಗಳನ್ನು ಪಡೆದಿದ್ದರು. ತೆಂಡುಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 15,921 ರನ್ ಗಳಿಸಿದ್ದು, ಇದು ಟೆಸ್ಟ್‌ನಲ್ಲಿ ಬ್ಯಾಟ್ಸ್ ಮನ್ ಗಳಿಸಿದ ಗರಿಷ್ಠ ರನ್ ಆಗಿದೆ. ತೆಂಡುಲ್ಕರ್ ಟೆಸ್ಟ್‌ನಲ್ಲಿ 51 ಶತಕ ಸಿಡಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ 49 ಶತಕಗಳ ಸಹಿತ 18,426 ರನ್ ಗಳಿಸಿದ್ದಾರೆ. ತೆಂಡುಲ್ಕರ್ 24 ವರ್ಷಗಳ ವೃತ್ತಿಜೀವನದಲ್ಲಿ ಆರು ವಿಶ್ವಕಪ್ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, 2011ರಲ್ಲಿ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News