ಜೂ.1ರಿಂದ ದೇವಸ್ಥಾನ, ಮಸೀದಿ, ಚರ್ಚ್ ಗಳನ್ನು ತೆರೆಯಲು ಅವಕಾಶ: ಸಿಎಂ ಯಡಿಯೂರಪ್ಪ

Update: 2020-05-27 11:55 GMT

ಬೆಂಗಳೂರು, ಮೇ 27: ದೇವಸ್ಥಾನ, ಮಸೀದಿ ಮತ್ತು ಚರ್ಚ್ ಗಳನ್ನು ತೆರೆಯಲು ಜೂ.1ರಿಂದ ಅನುಮನಿ ನೀಡಲಾಗುವುದು. ಈ ಸಂಬಂಧ ಕೇಂದ್ರ ಸರಕಾರದ ಅನುಮೋದನೆ ಸಿಗಬೇಕಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ವಿಧಾನಸೌಧದ ಆವರಣದಲ್ಲಿ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ಅವರ ಪುಣ್ಯತಿಥಿ ಅಂಗವಾಗಿ ನೆಹರೂ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊರೋನ ಸೋಂಕು ತಡೆಗಟ್ಟಲು ಹೇರಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನ, ಮಸೀದಿ, ಚರ್ಚ್ ಗಳು ಎರಡು ತಿಂಗಳಿಂದ ತೆರೆದಿರಲಿಲ್ಲ. ಇದೀಗ ಕೇಂದ್ರ ಸರಕಾರ ಅನುಮತಿ ನೀಡಿದರೆ ತೆರೆಯಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದರು.

ದೇವಸ್ಥಾನ, ಮಸೀದಿ, ಚರ್ಚ್ ತೆರೆಯುವುದು ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಅನುಮತಿ ನಿರೀಕ್ಷೆಯಲ್ಲಿದ್ದು, ಕೇಂದ್ರ ಸರಕಾರ ಸೂಚನೆ ನೀಡಿದರೆ ಮಾತ್ರ ದೇವಸ್ಥಾನ, ಮಸೀದಿ, ಚರ್ಚ್ ಗಳನ್ನು ಪ್ರಾರಂಭಿಸಲಾಗುವುದು ಎಂದು ಯಡಿಯೂರಪ್ಪ ಇದೇ ವೇಳೆ ತಿಳಿಸಿದರು.

ಕೊರೋನ ಲಾಕ್ ಡೌನ್ ಸಡಿಲಿಕೆ ಬಳಿಕ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ಉಳಿಯುವ ವ್ಯವಸ್ಥೆ ಮಾಡಬೇಕಿದೆ. ಅವರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಸಂಬಂಧವೂ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಮಾಲ್ ಮತ್ತು ಹೊಟೇಲ್ ಪ್ರಾರಂಭಕ್ಕೆ ಸಂಬಂಧಿಸಿದಂತೆ ಕೇಂದ್ರ ಒಪ್ಪಿಗೆ ನೀಡಿದರೆ ಮಾತ್ರ ಸರಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಪರಿಹಾರ ಘೋಷಣೆ ಇಲ್ಲ: ಕೊರೋನ ಸೋಂಕು ತಡೆಗೆ ಹೇರಿದ್ದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಸರಕಾರ ಕಾರ್ಮಿಕರು ಮತ್ತು ರಿಕ್ಷಾ ಚಾಲಕರು ಸೇರಿ ಕೆಲ ಸಮುದಾಯಗಳಿಗೆ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಅದನ್ನು ಅರ್ಹ ಫಲಾನುಭವಿಗಳಿಗೆ ನೀಡಲು ಕ್ರಮ ವಹಿಸಲಾಗುತ್ತದೆ. ಆದರೆ, ಇನ್ನು ಯಾವುದೇ ಸಮುದಾಯಕ್ಕೆ ಪರಿಹಾರ ಘೋಷಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News