ರಾಜ್ಯದಲ್ಲಿ ಮತ್ತೆ 122 ಮಂದಿಗೆ ಕೊರೋನ ಸೋಂಕು, ಓರ್ವ ಮಹಿಳೆ ಬಲಿ

Update: 2020-05-27 07:48 GMT

ಬೆಂಗಳೂರು, ಮೇ 27: ರಾಜ್ಯದಲ್ಲಿ ಮತ್ತೆ 122 ಮಂದಿಗೆ ಕೊರೋನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ನಡುವೆ ಓರ್ವ ಸೋಂಕಿತ ಮಹಿಳೆ ಮೃತಪಟ್ಟಿದ್ದಾರೆ. ಕಳೆದ 19 ಗಂಟೆಗಳ ಅವಧಿಯಲ್ಲಿ ಸೋಂಕಿತರ ಪ್ರಮಾಣದಲ್ಲಿ ಇಷ್ಟೊಂದು ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಮಂಗಳವಾರ ಸಂಜೆ 5ರಿಂದ ಇಂದು ಮಧ್ಯಾಹ್ನ 12 ಗಂಟೆಯೊಳಗೆ 122 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಲೆಟಿನ್ ತಿಳಿಸಿದೆ.

ಇಂದು ಅತ್ಯಧಿಕ ಸೋಂಕಿನ ಪ್ರಕರಣಗಳು ಕಲಬುರಗಿಯಲ್ಲಿ ಪತ್ತೆಯಾಗಿದೆ. ಇಲ್ಲಿ 28 ಮಂದಿಗೆ ಸೋಂಕು ತಗುಲಿದೆ. ಉಳಿದಂತೆ ಯಾದಗಿರಿಯಲ್ಲಿ 16, ಹಾಸನದಲ್ಲಿ 14, ಬೀದರ್ 13, ಬೆಂಗಳೂರು 6, ರಾಯಚೂರು 5, ಉತ್ತರ ಕನ್ನಡ 6, ಚಿಕ್ಕಮಗಳೂರು 3, ಮಂಡ್ಯ ಜಿಲ್ಲೆಯಲ್ಲಿ ಓರ್ವ ವ್ಯಕ್ತಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ.

ಈ ನಡುವೆ ಕೊರೋನ ಸೋಂಕಿತ 69 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಿಂದ ಆಗಮಿಸಿದ್ದ ಇವರನ್ನು ಮೇ 20ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇಂದು ಸೋಂಕು ದೃಢಪಟ್ಟ 122 ಪ್ರಕರಣಗಳಲ್ಲಿ 109 ಮಂದಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸಿದವರು ಎಂದು ತಿಳಿದುಬಂದಿದೆ.

 ರಾಜ್ಯದ ಒಟ್ಟು ಸೋಂಕಿತರ ಪೈಕಿ 14 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೆ 45 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News