ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿರುದ್ಧ ಐವನ್ ಡಿಸೋಜ ದೂರು

Update: 2020-05-27 09:47 GMT

ಬೆಂಗಳೂರು, ಮೇ 27: ರಾಷ್ಟ್ರೀಯ ವಿಪತ್ತು ಕಾಯ್ದೆ ಉಲ್ಲಂಘನೆ, ಸಾರ್ವಜನಿಕವಾಗಿ ಸುಳ್ಳು ಹೇಳಿಕೆ ಮತ್ತು ಜನರನ್ನು ದಾರಿತಪ್ಪಿಸುವ ಮಾಹಿತಿ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪೊಲೀಸ್ ದೂರು ನೀಡಿದ್ದಾರೆ.

ವಿಧಾನಸೌಧ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ, ನಳಿನ್ ಕುಮಾರ್ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿ, ‘‘ಪ್ರಧಾನ ಮಂತ್ರಿಯಿಂದಾಗಿ ನಾವು ಕೋವಿಡ್-19 ವೈರಸ್‌ನಿಂದ ಬದುಕಿ ಉಳಿದಿದ್ದೇವೆ’’ ಎಂದು ಹೇಳಿದ್ದಾರೆ. ಹಾಗಾದರೆ ಈ ಸೋಂಕಿನಿಂದ ದೇಶಾದ್ಯಂತ ಸಾವಿಗೀಡಾಗಿರುವ ಸಾವಿರಾರು ಮಂದಿಯ ಸಾವಿಗೆ ಮುಂಜಾಗ್ರಕಾ ಕ್ರಮ ಕೈಗೊಳ್ಳದೇ ಇದ್ದುದಕ್ಕೆ ಪ್ರಧಾನಿ ಜವಾಬ್ದಾರಿ ಆಗಬೇಕಲ್ಲವೇ? ಅದೇರೀತಿ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸ್ಥಾನವು ರೊಟೇಶನ್ ಹುದ್ದೆಯಾಗಿದೆ. ಆದರೆ ಭಾರತ ಕೋವಿಡ್-19ರಲ್ಲಿ ಸಾಧಿಸಿದ ಸಾಧನೆಗಾಗಿಯೇ ಇದು ಲಭಿಸಿದೆ ಎಂದು ಉದ್ದೇಶಪೂರ್ವಕವಾಗಿ ಪ್ರತಿಬಿಂಬಿಸಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದ್ದು, ವಿಶ್ವಸಂಸ್ಥೆ ಮತ್ತು ಅಧೀನ ಸಂಸ್ಥೆಗಳ ನೈಜ ಉದ್ದೇಶವನ್ನು ತಿರುಚುವ ದುರುದ್ದೇಶವನ್ನು ಹೊಂದಿದೆ ಎಂದು ದೂರಿದ್ದಾರೆ.

ನಳಿನ್ ಕುಮಾರ್ ಅವರು ದೇಶಾದ್ಯಂತ ಜಾರಿಯಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ ವಿರುದ್ಧ ಹೇಳಿಕೆಯನ್ನು ನೀಡಿದ್ದಾರೆ. ಆದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಐವನ್ ಡಿಸೋಜ ಪೊಲೀಸ್ ದೂರಿನಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News