ಜೂ.1ರಿಂದ ಹೈಕೋರ್ಟ್ ಕಲಾಪ ಆರಂಭ: ಮಾರ್ಗಸೂಚಿ ಅನ್ವಯ ಕಲಾಪ ನಡೆಸಲು ರಾಜ್ಯ ಸರಕಾರ ಆದೇಶ

Update: 2020-05-27 12:10 GMT

ಬೆಂಗಳೂರು, ಮೇ 27: ಜೂ.1ರಿಂದ ಹೈಕೋರ್ಟ್ ಕಲಾಪಗಳು ಆರಂಭವಾಗಲಿವೆ. ಆದರೆ, ಕಟ್ಟುನಿಟ್ಟಿನ ಆದೇಶಗಳನ್ನ ಪಾಲನೆ ಮಾಡಿಕೊಂಡು ಕಲಾಪಗಳನ್ನು ನಡೆಸಬೇಕು ಎಂದು ರಾಜ್ಯ ಸರಕಾರ ಆದೇಶಿಸಿದೆ.

ಮೇ 27ರ ಬುಧವಾರ ಹೈಕೋರ್ಟ್ ಕಲಾಪಗಳು ಆರಂಭ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಯನ್ವಯ ನ್ಯಾಯಮೂರ್ತಿಗಳು ಕಡ್ಡಾಯವಾಗಿ ಮಾಸ್ಕ್ ಬಳಸಬೇಕು, ಸಾಧ್ಯವಾದಷ್ಟು ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಬಳಸಬೇಕು, ಕೋರ್ಟ್ ಹಾಲ್‍ಗಳಲ್ಲಿ ಎಸಿ ಬದಲು ಫ್ಯಾನ್ ಬಳಸಬೇಕು, ನಿಶ್ಯಬ್ಧವಾಗಿ ಲ್ಯಾಪ್‍ಟ್ಯಾಪ್, ಟ್ಯಾಬ್ ಬಳಕೆ ಮಾಡಲು ಅನುಮತಿ ನೀಡಲಾಗಿದೆ. ರೆಡ್‍ಝೋನ್ ಪ್ರದೇಶಕ್ಕೆ ಭೇಟಿ ನೀಡುವುದಿಲ್ಲ ಎಂದು ವಕೀಲರು ಈ ಬಗ್ಗೆ ಹೈಕೋರ್ಟ್‍ಗೆ ಅಫಡವಿಟ್ ಸಲ್ಲಿಸಬೇಕು.

ಹೈಕೋರ್ಟ್ ಸಿಬ್ಬಂದಿ, ವಕೀಲರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವಕೀಲರು 15 ರಿಂದ 20 ನಿಮಿಷದಲ್ಲಿ ವಾದ ಮಂಡನೆ ಮುಗಿಸಬೇಕು. ಕೋರ್ಟ್ ಹಾಲ್‍ನಲ್ಲಿ ಒಂದು ಬಾರಿ 20 ವಕೀಲರು ಮಾತ್ರ ಇರಬೇಕು. ಅದಕ್ಕಿಂತ ಹೆಚ್ಚಿನ ವಕೀಲರ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ.

ಹೈಕೋರ್ಟ್ ಕಚೇರಿಗೆ ಯಾರೂ ಪ್ರವೇಶ ಮಾಡಬಾರದು. ವಕೀಲರು, ಕ್ಲರ್ಕ್, ಕಕ್ಷಿದಾರರಿಗೆ ಕಚೇರಿಗೆ ಪ್ರವೇಶವಿಲ್ಲ. ಎಲ್ಲರೂ ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಬಳಸಬೇಕು.

ಇ-ಫೈಲಿಂಗ್ ಮೂಲಕ ಕೇಸ್ ದಾಖಲಿಸಲು ಅವಕಾಶ ನೀಡಲಾಗಿದೆ. ನಿಗದಿತ ಸ್ಥಳದಲ್ಲಿ ಖುದ್ದು ಕೇಸ್ ದಾಖಲಿಸಲು ಅವಕಾಶ ನೀಡಲಾಗಿದೆ. ಜೂ.1ರಿಂದ ಈ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ರಾಜ್ಯ ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News