ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಸೆಸೆಲ್ಸಿ ಪರೀಕ್ಷೆ ನಡೆಸಿ: ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2020-05-27 14:52 GMT

ಬೆಂಗಳೂರು, ಮೇ 27: ಎಸೆಸೆಲ್ಸಿ ಪರೀಕ್ಷೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಪರೀಕ್ಷೆ ನಡೆಸಬೇಕು ಹಾಗೂ ಯಾವುದೇ ವಿದ್ಯಾರ್ಥಿಗೆ ಇದರಿಂದ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.

ಎಸೆಸೆಲ್ಸಿ ಪರೀಕ್ಷೆ ರದ್ದು ಕೋರಿ ಬೆಂಗಳೂರಿನ ಎಂ.ಲೋಕೇಶ್ ಸೇರಿ ಮೂವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಸರಕಾರದಿಂದ ಎಸೆಸೆಲ್ಸಿ ಪರೀಕ್ಷೆ ನಡೆಸಲು ಕೈಗೊಂಡಿರುವ ಮಾರ್ಗಸೂಚಿಗಳ ಮಾಹಿತಿಯನ್ನು ಸರಕಾರದ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠವು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಪರೀಕ್ಷೆ ನಡೆಸಬೇಕೆಂದು ಸೂಚನೆ ನೀಡಿ, ಅರ್ಜಿಯನ್ನು ಇತ್ಯರ್ಥಪಡಿಸಿತು.

ಕೊರೋನ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ 2019-20ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಗಳನ್ನು ಜೂ.25ರಿಂದ ನಡೆಸಲು ರಾಜ್ಯ ಸರಕಾರ ಮೇ 18ರಂದು ವೇಳಾಪಟ್ಟಿ ಪ್ರಕಟಿಸಿದೆ. ಒಟ್ಟು 8.48 ಲಕ್ಷ ಇದ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕಿದೆ.

ಜೂ.25ರಿಂದ ಪರೀಕ್ಷೆ ನಡೆಸಲು ಸರಕಾರ ತೀರ್ಮಾನಿಸಿದ್ದು, ಕೊರೋನ ಸೋಂಕು ಹರಡುತ್ತಿರುವ ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ. ಪರೀಕ್ಷೆ ನಡೆಸಿದರೆ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಮತ್ತವರ ಕುಟುಂಬ ವರ್ಗಕ್ಕೂ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News