ಬೆಂಗಳೂರಿನಲ್ಲಿ ಮುಂದುವರಿದ ಗುಡುಗು ಸಹಿತ ಮಳೆ

Update: 2020-05-27 16:00 GMT

ಬೆಂಗಳೂರು, ಮೇ 27: ಸತತ ಮೂರು ದಿನಗಳಿಂದಲೂ ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ.

ಇಲ್ಲಿನ ಆರ್.ಟಿ ನಗರ, ಯಲಹಂಕ, ಆರ್‍ಆರ್ ನಗರ, ಯಶವಂತಪುರ, ಹೆಬ್ಬಾಳ, ಮೆಜೆಸ್ಟಿಕ್, ಜಯನಗರ, ಕೋರಮಂಗಲ ಸೇರಿದಂತೆ ನಗರದ ಬಹುತೇಕ ಎಲ್ಲ ಕಡೆ ಮಳೆಯಾಗುತ್ತಿದೆ. ಗಂಟೆಗೆ ನಲವತ್ತು ಕಿ.ಮೀವರೆಗೂ ಹೆಚ್ಚಿನ ವೇಗದಲ್ಲಿ ಗಾಳಿ ಬೀಸುತ್ತಿದ್ದು, ರಸ್ತೆ, ಕೆಳ ಸೇತುವೆಗಳು ನೀರಿನಿಂದ ಆವೃತವಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗಿ ಅವಾಂತರ ಸೃಷ್ಟಿಯಾದ ಪರಿಣಾಮ ಜನರು ಪರದಾಡುತ್ತಿದ್ದು, ಬುಧವಾರ ಸುರಿದ ಮಳೆಯಿಂದ ಕೆಲವು ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಇಲ್ಲಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಯಶವಂತಪುರಕ್ಕೆ ಹೋಗುವ ಮಾರ್ಗ ಮಲ್ಲೇಶ್ವರಂ ಕಾಡು ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಮರಗಳು ಬಿದ್ದ ಪರಿಣಾಮ ಒಂದು ಕಾರು ಜಖಂಗೊಂಡಿತ್ತು.

ಅದೇ ರೀತಿ, ಮೆಜೆಸ್ಟಿಕ್ ಭೂಮಿಕ ಥಿಯೇಟರ್ ಎದುರು ಮರವೊಂದು ರಸ್ತೆಗುರುಳಿದ್ದ ದೃಶ್ಯ ಕಂಡು ಬಂದಿದೆ. ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದ ಇನ್ನೆರಡು ದಿನಗಳ ಕಾಲ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News