ಬೆಂಗಳೂರಿನಲ್ಲಿ 6 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 288ಕ್ಕೆ ಏರಿಕೆ

Update: 2020-05-27 16:25 GMT

ಬೆಂಗಳೂರು, ಮೇ 27: ನಗರದಲ್ಲಿ ಬುಧವಾರ ಹೊಸದಾಗಿ ಆರು ಪ್ರಕರಣ ಪತ್ತೆಯಾಗಿದ್ದು, ತಮಿಳುನಾಡಿಗೆ ಅಂತ್ಯಕ್ರಿಯೆಗೆ ಹೋಗಿ ಬಂದಿದ್ದ ತಂದೆ ಮಗನಿಗೆ, ನೇಪಾಳ, ಅರಬ್, ಮಧ್ಯಪ್ರದೇಶದಿಂದ ಬಂದಿರುವ ಮೂವರಿಗೆ, ಹೆಬ್ಬಗೋಡಿಯ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಸಂಬಂಧಿಕರ ಅಂತ್ಯಕ್ರಿಯೆ ಎಂದು ತಮಿಳುನಾಡಿಗೆ ಹೋಗಿ ನಗರಕ್ಕೆ ಬಂದಿರುವ 60 ವರ್ಷದ ವ್ಯಕ್ತಿ(ರೋಗಿ-2334) ಆತನ 32 ವರ್ಷದ ಮಗನಿಗೆ ಕೊರೋನ ದೃಢಪಟ್ಟಿದೆ. ಅಂತರ್ ರಾಜ್ಯ ಹಾಗೂ ಅಂತಾರ್ ರಾಷ್ಟ್ರೀಯ ಪ್ರಯಾಣಿಕರಲ್ಲಿ ಮಧ್ಯ ಪ್ರದೇಶದಿಂದ ಬೆಂಗಳೂರಿಗೆ ಬಂದ 25 ವರ್ಷದ ಮಹಿಳೆ(ರೋಗಿ-2335), ನೇಪಾಳದಿಂದ 22 ವರ್ಷದ ಮಹಿಳೆ, ಅರಬ್‍ ರಾಷ್ಟ್ರದಿಂದ ಬಂದ 28 ವರ್ಷದ ಓರ್ವ ಮಹಿಳೆ ಸೇರಿ ಮೂವರಿಗೆ ಕೊರೋನ ಸೋಂಕು ದೃಢಪಟ್ಟಿದೆ.

ಇವರಿಗೆ ಬೆಂಗಳೂರಿನ ಸ್ಥಳೀಯ ವಿಳಾಸವಿಲ್ಲ. ಇವರ ಪ್ರಯಾಣ ಮಾಡಿ ಬಂದಿದ್ದ ಅವರನ್ನು ಹೊಟೇಲ್ ಕ್ವಾರಂಟೈನ್ ಮಾಡಲಾಗಿದೆ. ಇನ್ನು ಹೆಬ್ಬಗೋಡಿಯ 57 ವರ್ಷದ ವ್ಯಕ್ತಿಗೆ ಕೊರೋನ ಸೋಂಕು ಪತ್ತೆಯಾಗಿದೆ. ಇವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ.

ನಗರದಲ್ಲಿ 288 ಸೋಂಕು ಪತ್ತೆ: ನಗರದಲ್ಲಿ ಇಲ್ಲಿಯವರಿಗೆ 288 ಪ್ರಕರಣ ಪತ್ತೆಯಾಗಿದ್ದು, 151 ಜನರು ಗುಣಮುಖರಾಗಿದ್ದು, 120 ಜನರಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. 11 ಜನರು ಮರಣ ಹೊಂದಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 10,608 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿರುವ ಒಟ್ಟು 1,621 ಜನರು ಹಾಗೂ  ದ್ವಿತೀಯ ಸಂಪರ್ಕದಲ್ಲಿರುವ 5,047 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News