ಸಿಲಿಕಾನ್ ಸಿಟಿಯಲ್ಲಿ ಮಳೆ ಅವಾಂತರ ತಡೆಯಲು ಪಾಲಿಕೆ ಮುಂಜಾಗ್ರತಾ ಕ್ರಮ

Update: 2020-05-27 16:55 GMT

ಬೆಂಗಳೂರು, ಮೇ 27: ಸಿಲಿಕಾನ್ ಸಿಟಿಯಲ್ಲಿ ಮುಂಗಾರು ಮಳೆ ಹಾಗೂ ಅದರ ಪೂರ್ವ ಮಳೆಯ ಅವಾಂತರಗಳನ್ನು ನಿಯಂತ್ರಿಸುವ ಸಲುವಾಗಿ ಬಿಬಿಎಂಪಿ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಕೊರೋನ ಭೀತಿ ಹಿನ್ನೆಲೆಯಲ್ಲಿ ಹಲವು ಕಡೆಗಳಲ್ಲಿ ಯೋಜನೆಗಳು ಸ್ಥಗಿತವಾಗಿದ್ದು, ಮಳೆ ಮುಂಜಾಗ್ರತೆ ಹಾಗೂ ಪ್ರಮುಖ ಜಂಕ್ಷನ್‍ಗಳಲ್ಲಿ ನೀರು ನಿಲ್ಲುವುದನ್ನು ತಡೆಯುವ ಪ್ರಕ್ರಿಯೆಯೂ ಒಂದಾಗಿದೆ.

ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಮಳೆ ಅನಾಹುತ ತಡೆಯುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಿಯಾಯೋಜನೆ, ನಗರದ ಪ್ರಮುಖ ಜಂಕ್ಷನ್‍ಗಳಲ್ಲಿ ಪ್ರವಾಹ ಪರಿಸ್ಥಿತಿ ತಪ್ಪಿಸಲು ಪ್ರಾಯೋಗಿಕವಾಗಿ ನಗರದ ಪ್ರಮುಖ ಜಂಕ್ಷನ್, ಅಂಡರ್ ಪಾಸ್‍ಗಳಲ್ಲಿ ನೀರು ನಿಲ್ಲುವುದನ್ನು ತಡೆಯಲು ಇಂಗುಗುಂಡಿ ನಿರ್ಮಾಣ ಯೋಜನೆ ರೂಪಿಸಿಕೊಳ್ಳಲಾಗಿತ್ತು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಇದಕ್ಕೆ ಹಿನ್ನಡೆ ಉಂಟಾಗಿದೆ. ಈ ವಾರ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು  ಹವಾಮಾನ ಇಲಾಖೆಯೂ ಮುನ್ಸೂಚನೆ ನೀಡಿದೆ.

ನಗರದಲ್ಲಿ ಹಲವು ಹಂತದಲ್ಲಿ ಪೂರ್ವತಯಾರಿ ನಡೆಸಿದ್ದರೂ ಒಂದಿಲ್ಲ ಒಂದು ರೀತಿಯಲ್ಲಿ ಎಲ್ಲಾದರೂ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಈಗ ಕೋವಿಡ್-19ದಿಂದ ಪೂರ್ವತಯಾರಿಗೆ ಹಿನ್ನಡೆಯಾಗುತ್ತಿರುವ ಸೂಚನೆ ಸಿಕ್ಕಿದೆ. ಅಲ್ಲದೆ, ಇದೇ ಅವಕಾಶದಿಂದ ಕೆಲವು ಅಧಿಕಾರಿಗಳು ಮೈಮರೆಯುವ ಸಾಧ್ಯತೆ ಇದೆ. ಸಣ್ಣ ಮಳೆಗೂ ಮೆಜೆಸ್ಟಿಕ್ ಬಳಿಯ ಓಕಳಿಪುರ ಜಂಕ್ಷನ್‍ನ ಅಂಡರ್ ಪಾಸ್ ಸೇರಿ ಹಲವು ಅಂಡರ್ ಪಾಸ್‍ಗಳಲ್ಲಿ ಮಳೆ ನೀರು ನಿಲ್ಲುತ್ತದೆ.

ನಗರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮರದ ರೆಂಬೆ, ಕೊಂಬೆ ಕಡಿಯುವುದು, ಮಳೆಯಿಂದ ನೆಲಕ್ಕುರುಳುವ ರೆಂಬೆಗಳ ತೆರವು ಮಾಡುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಪ್ರತ್ಯೇಕ ತಂಡ ರಚನೆ ಮಾಡಲು ಬಿಬಿಎಂಪಿ ಮುಂದಾಗಿದೆ. ಅದಕ್ಕಾಗಿ 10 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲು ಸಿದ್ಧತೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸಂಬಂಧ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಎಸ್.ರಂಗನಾಥಸ್ವಾಮಿ ಮಾಹಿತಿ ನೀಡಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಒಂದು ತಂಡ ರಚನೆ ಮಾಡಲಾಗುತ್ತಿದೆ. ಪ್ರತಿ ತಂಡದಲ್ಲೂ 7 ಜನ ಇರಲಿದ್ದು, 1 ವಾಹನ, ಮರತೆರವು ಮಾಡಲು ಬೇಕಾದ ಎಲ್ಲಾ ವಸ್ತುಗಳು ಇರಲಿವೆ. ಮಳೆಯಿಂದ ಹಾಗೂ ಮಳೆಗೆ ಮುನ್ನ ಮರದರೆಂಬೆ, ಕೊಂಬೆ ಕೂಡಲೇ ತೆರವು ಮಾಡಲು ಸಹಾಯವಾಗಲಿದೆ. ಅಲ್ಲದೆ, ಈ ತಂಡಗಳು, ಮರದರೆಂಬೆ, ಕೊಂಬೆಗಳನ್ನು 24 ಗಂಟೆ ಒಳಗಾಗಿ ಕತ್ತರಿಸಿದ ಭಾಗ ತೆರವುಗೊಳಿಸದಿದ್ದಲ್ಲಿ ಪಾಲಿಕೆ ವತಿಯಿಂದ  ತೆರವುಗೊಳಿಸಿ, ತಗಲುವ ವೆಚ್ಚವನ್ನು ಸಂಬಂಧಪಟ್ಟ ಅರಣ್ಯ ತಂಡಗಳ ಮೂಲಕ ವಸೂಲಿ ಮಾಡಲಾಗುವುದೆಂದರು.

ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ: ನಗರದಲ್ಲಿ ಮಳೆ ಅನಾಹುತಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲ ವಲಯಗಳಲ್ಲಿ 63 ತಾತ್ಕಾಲಿಕ ಸಹಾಯವಾಣಿ ಪ್ರಾರಂಭಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‍ ಕುಮಾರ್ ತಿಳಿಸಿದ್ದಾರೆ.

8 ವಲಯಗಳಲ್ಲಿ ಪ್ರಹಾರಿ ತಂಡಗಳನ್ನು ರಚನೆ ಮಾಡಿಕೊಳ್ಳಲಾಗಿದೆ. ಮರದರೆಂಬೆ, ಕೊಂಬೆಗೆ ತಂಡಗಳ ರಚನೆ ಮಾಡಿಕೊಳ್ಳಲಾಗಿದೆ. ಮಳೆಗೆ ಸಂಬಂಧಿಸಿದಂತೆ ಟಾಸ್ಕ್ ಫೋರ್ಸ್ ರಚನೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ನಗರದಲ್ಲಿ ಮಳೆ ನೀರು ಸೇರುವ ತಗ್ಗು ಪ್ರದೇಶಗಳಲ್ಲಿ ಮುಂಜಾಗ್ರತೆ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News