ತ್ರಿಭಾಷಾ ಸೂತ್ರ ಕೈಬಿಟ್ಟ ಎಸ್‍ಬಿಐ ವಿರುದ್ಧ ಹೋರಾಟ: ಮನು ಬಳಿಗಾರ್ ಎಚ್ಚರಿಕೆ

Update: 2020-05-27 16:58 GMT

ಬೆಂಗಳೂರು, ಮೇ 27: ತ್ರಿಭಾಷಾ ಸೂತ್ರ ಕೈಬಿಟ್ಟು, ಕನ್ನಡ ಬಳಕೆಯನ್ನು ನಿರ್ಲಕ್ಷ್ಯಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದಿರುವ ಡಾ.ಮನು ಬಳಿಗಾರ್, ಕನ್ನಡ ನಿರ್ಲಕ್ಷ್ಯ ಮಾಡಿದರೆ ಬ್ಯಾಂಕ್ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಕೂಡಲೇ ಪಾಸ್‍ಬುಕ್ ಮುಖಪುಟದಲ್ಲಿ ಹಿಂದಿನಂತೆ ಕನ್ನಡದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಎಂದು ಮುದ್ರಿಸಬೇಕು ಎಂದು ಆಗ್ರಹಿಸಿದ್ದಾರೆ.

ಇತ್ತೀಚಿಗೆ ಕನ್ನಡದಲ್ಲಿದ್ದ ಈ ಬರಹವನ್ನು ತೆಗೆದುಹಾಕಿ, ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಉಳಿಸಲಾಗಿದೆ. ಬ್ಯಾಂಕಿನ ವ್ಯವಹಾರವನ್ನು ಕನ್ನಡದಲ್ಲೇ ನಡೆಸಬೇಕು. ಈ ರೀತಿ ಕನ್ನಡಕ್ಕೆ ಅಪಮಾನ ಮಾಡಿರುವವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬ್ಯಾಂಕ್ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಪತ್ರದ ಮೂಲಕ ಎಚ್ಚರಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಕ್ರಮಕ್ಕೆ ಹಲವು ಕನ್ನಡ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ತಪ್ಪನ್ನು ಸರಿಪಡಿಸದಿದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News