ಕೋವಿಡ್ ಸೋಂಕು ಪತ್ತೆಗೆ ಸ್ಮಾರ್ಟ್ ಕಿಯೋಸ್ಕ್ ನಿಂದ ಮಾದರಿ ಸಂಗ್ರಹ: ಡಾ. ಅಶ್ವಥ್ ನಾರಾಯಣ

Update: 2020-05-27 17:26 GMT

ಬೆಂಗಳೂರು, ಮೇ 27: ಕೋವಿಡ್ ಸೋಂಕು ಪತ್ತೆ ಪರೀಕ್ಷೆ ವೇಳೆ ನೇರ ಸಂಪರ್ಕ ಇಲ್ಲದೆ ಮಾದರಿ ಸಂಗ್ರಹಿಸುವ ಸ್ಮಾರ್ಟ್ ಕಿಯೋಸ್ಕ್ ವ್ಯವಸ್ಥೆ ರೋಗಿ ಹಾಗೂ ವೈದ್ಯ ಸಿಬ್ಬಂದಿಯ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದ್ದಾರೆ.

ಬುಧವಾರ ವಿಧಾನಸೌಧದ ಎದುರು ವಿಪ್ರೊ ಜಿಇ ಹೆಲ್ತ್ ಕೇರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಸ್ಮಾರ್ಟ್ ಕಿಯೋಸ್ಕ್ ಅನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೋವಿಡ್ ಸೋಂಕು ಪತ್ತೆಗಾಗಿ ಸುರಕ್ಷಿತವಾಗಿ ಮಾದರಿ ಸಂಗ್ರಹಿಸುವ ಕಿಯೋಸ್ಕ್ ಅನ್ನು ವಿಪ್ರೋ ಜಿಇ ಸಂಸ್ಥೆಯೆ ವಿನ್ಯಾಸಗೊಳಿಸಿ, 15 ಕಿಯೋಸ್ಕ್ ಗಳನ್ನು ಉಚಿತವಾಗಿ ನೀಡಿದೆ. ಈ ಸಂದರ್ಭದಲ್ಲಿ ಡಿಜಿಟಲ್ ಹೆಲ್ತ್ ಕೇರ್ ದೊಡ್ಡ ಪಾತ್ರವಹಿಸುತ್ತದೆ. ಸುರಕ್ಷತೆ, ಸ್ವಚ್ಛತೆಯ ಕಾಯ್ದುಕೊಳ್ಳುವ ಜತೆಗೆ ಸುಲಭವಾಗಿ ಮಾದರಿ ಸಂಗ್ರಹಿಸುವ ಕಿಯೋಸ್ಕ್ ಅನ್ನು ಎಲ್ಲಿಗೆ ಬೇಕಾದರೂ ಒಯ್ಯಬಹುದು. ಜಿಲ್ಲಾ ಆಸ್ಪತ್ರೆಗಳಿಗೂ ಈ ಕಿಯೋಸ್ಕ್ ಗಳನ್ನು ತಲುಪಿಸಬಹುದು ಎಂದು ಅವರು ಹೇಳಿದರು.

ವಿಪ್ರೋ ಜಿಇ ಸಂಸ್ಥೆಯವರು ರೋಗಿ, ವೈದ್ಯರು ಹಾಗೂ ವೈದ್ಯ ಸಿಬ್ಬಂದಿ ರಕ್ಷಣೆಗೆ ಬರುವ  ನಿಟ್ಟಿನಲ್ಲಿ ವಿಶಿಷ್ಟ ಕಿಯೋಸ್ಕ್ ವಿನ್ಯಾಸಗೊಳಿಸಿದ್ದಾರೆ. ವೈದ್ಯರು ಹಾಗೂ ರೋಗಿ ಪ್ರತ್ಯೇಕ ಕೊಠಡಿಯಲ್ಲಿ ಇದ್ದು, ಕಿಯೋಸ್ಕ್ ಮೂಲಕ ಮಾದರಿ ಸಂಗ್ರಹಿಸಲಾಗುವುದು. ಪರಸ್ಪರ ಸಂಪರ್ಕಕ್ಕೆ ಬರದೆ ಪರೀಕ್ಷೆ ನಡೆಸಲು ಸಾದ್ಯವಾಗುವುದರಿಂದ ರೋಗಿ ಹಾಗೂ ವೈದ್ಯ ಸಿಬ್ಬಂದಿಯ ಆತಂಕ ಕಡಿಮೆ ಆಗುವುದು. ಜತೆಗೆ ಪಿಪಿಇ ಕಿಟ್‍ಗಳ ಬಳಕೆಯೂ ಕಡಿಮೆ ಆಗುವುದು ಎಂದು ಅಶ್ವಥ್ ನಾರಾಯಣ ವಿವರಿಸಿದರು.

ರಾಮನಗರ ಜಿಲ್ಲೆಯಲ್ಲಿ ರಿಮೋಟ್ ಐಸಿಯು ಘಟಕ ಸ್ಥಾಪನೆಗೆ ವಿಪ್ರೋ ಜಿಇ ಸಂಸ್ಥೆ ಮುಂದೆ ಬಂದು ಎಲ್ಲ ರೀತಿಯ ಸಹಕಾರ ಒದಗಿಸಿತ್ತು. ಕಾರ್ಪೋರೆಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ(ಸಿಎಸ್‍ಆರ್)ಯನ್ನು ಹಲವಾರು ಸಂಸ್ಥೆಗಳು ಸಮರ್ಥವಾಗಿ ನಿಭಾಯಿಸಿದ್ದು, ಕೋವಿಡ್ ವಿರುದ್ಧದ ಸಮರದಲ್ಲಿ ಸರಕಾರದ ಜತೆ ಕೈಜೋಡಿಸಿವೆ. ವಿಪ್ರೋ ಜಿಇ ಸಂಸ್ಥೆ ಸಹಕಾರಕ್ಕೆ ಸರಕಾರದ ಪರವಾಗಿ ಧನ್ಯವಾದ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ವಿಪ್ರೋ ಜಿಇ ವ್ಯವಸ್ಥಾಪಕ ನಿರ್ದೇಶಕ ನಳಿನಿ ಕಾಂತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News