ಕನ್ನಡ ನಿರ್ಲಕ್ಷ್ಯ ಮಾಡುವ ಶಾಲೆಗಳ ವಿರುದ್ಧ ಕಠಿಣ ಕ್ರಮ: ಸಚಿವ ಸುರೇಶ್‍ ಕುಮಾರ್

Update: 2020-05-27 17:30 GMT

ಬೆಂಗಳೂರು, ಮೇ 27: ಕನ್ನಡ ನೆಲದಲ್ಲಿ ನಡೆಯುವಂತಹ ಯಾವುದೇ ಶಾಲೆಯಾಗಿರಲಿ ಅಲ್ಲಿ ಕನ್ನಡ ಭಾಷೆಯ ಬೋಧನೆ ಕಡ್ಡಾಯವಾಗಿ ಆಗಲೇಬೇಕು. ಈ ಸಂಬಂಧದ ಕಡ್ಡಾಯ ಕನ್ನಡ ಕಲಿಕಾ ವಿಧೇಯಕ-2015ರ ಅನುಷ್ಠಾನಕ್ಕೆ ಅನಾದರ ಇಲ್ಲವೇ ನಿರ್ಲಕ್ಷ್ಯ ತೋರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‍ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಬುಧವಾರ ಕಡ್ಡಾಯ ಕನ್ನಡ ಕಲಿಕಾ ವಿಧೇಯಕ-2015ರ ಅನುಷ್ಠಾನದ ಪರಾಮಾರ್ಶೆ ಕುರಿತು ರಾಜ್ಯದ ಎಲ್ಲ ಡಿಡಿಪಿಐಗಳೊಂದಿಗೆ ನಡೆದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಇದಕ್ಕಾಗಿ 2015ರಲ್ಲಿ ಜಾರಿಗೆ ತರಲಾದ ಕನ್ನಡ ಕಲಿಕಾ ಕಾಯ್ದೆಯ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಶಿಕ್ಷಣ ಇಲಾಖೆ ಕಟಿಬದ್ಧವಾಗಿದೆ ಎಂದು ಹೇಳಿದರು.

ಈ ನೆಲದ ಕಾನೂನಿನ ಅನುಷ್ಠಾನದ ವಿಷಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶಿಕ್ಷಣ ಇಲಾಖೆಯೊಂದಿಗೆ ನಿರ್ವಹಿಸುತ್ತಿರುವ ಸಮನ್ವಯ ಜವಾಬ್ದಾರಿ ನಿಜಕ್ಕೂ ಪ್ರೇರಣಾದಾಯಕ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಜೋಡೆತ್ತಿನಂತೆ ಕೆಲಸ ಮಾಡಲಿವೆ ಎಂದು ಸುರೇಶ್‍ ಕುಮಾರ್ ಹೇಳಿದರು.

ಕನ್ನಡ ನೆಲದಲ್ಲಿ ಓದುವ ಪ್ರತಿಯೊಂದು ಮಗುವೂ ಕನ್ನಡವನ್ನು ಕಲಿಯಬೇಕು. ಅರ್ಹ ಶಿಕ್ಷಕರು ಈ ಮಕ್ಕಳಿಗೆ ಕನ್ನಡ ಕಲಿಸಬೇಕು. ಇದನ್ನು ಕರ್ನಾಟಕದ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳು ಅರ್ಥೈಸಿಕೊಂಡು ಮಕ್ಕಳ ಹಿತದೃಷ್ಟಿಯಿಂದ ಸರಕಾರದ ಈ ಕ್ರಮವನ್ನು ಬೆಂಬಲಿಸಬೇಕು ಎಂದು ಸುರೇಶ್‍ ಕುಮಾರ್ ಹೇಳಿದರು.

ಸರಕಾರಿ ಶಾಲೆಗಳ ಸಬಲೀಕರಣ ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವರದಿಯಂತೆ ನಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಲ್ಲೇ ಉಳಿಸಿಕೊಳ್ಳಲು ತಮ್ಮದೇ ಆದ ಕ್ರಮಗಳನ್ನು ಸರಕಾರ ಕೈಗೊಳ್ಳಲಿದೆ. ಈಗ ಕೂಲಿ ಮಾಡಿ ಜೀವನ ಸಾಗಿಸುವವರೂ ಸಹ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಮುಂದಾಗಿದ್ದಾರೆ. ಅದಕ್ಕೆ ಅವರು ತಮ್ಮ ದುಡಿಮೆಯ ಶೇ. 40 ಭಾಗ ವೆಚ್ಚ ಮಾಡುತ್ತಿದ್ದಾರೆ.

ಸರಕಾರಿ ಶಾಲೆಗಳನ್ನೇ ಸಬಲೀಕರಣ ಮಾಡಿ ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಗುಣಮಟ್ಟವನ್ನು ಕಾಪಾಡಿಕೊಂಡರೆ ಅವರು ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದಕ್ಕೆ ಮುಂದಾದರೆ ಅವರೆಲ್ಲಾ ಖಾಸಗಿ ಶಾಲೆಗಳಿಗೆ ವೆಚ್ಚ ಮಾಡುವ ಶೇ. 40 ಭಾಗ ಹಣವನ್ನು ತಮ್ಮ ಕುಟುಂಬದ ಅಭಿವೃದ್ಧಿಗೆ ವಿನಿಯೋಗಿಸಬಹುದಾಗಿದೆ ಎಂದು ಸುರೇಶ್‍ ಕುಮಾರ್ ಹೇಳಿದರು.

1,000 ಉಭಯ ಮಾಧ್ಯಮ ಶಾಲೆಗಳ ಪ್ರಾರಂಭ: ಜಾಗತಿಕ ನಿರೀಕ್ಷೆಗೆ ತಕ್ಕಂತೆ ನಮ್ಮ ಸರಕಾರಿ ಶಾಲೆ ಮಕ್ಕಳನ್ನು ತಯಾರು ಮಾಡಬೇಕು ಮತ್ತು ನಮ್ಮ ಸರಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಿ ಉಳಿಸಿ ಬೆಳೆಸುವ ಮಹೋನ್ನತ ಉದ್ದೇಶದಿಂದ ಈ ವರ್ಷದಿಂದಲೇ ರಾಜ್ಯದಲ್ಲಿ 1,000 ‘ಉಭಯ ಮಾಧ್ಯಮ ಶಾಲೆ’ಗಳನ್ನು ಆರಂಭಿಸಲಾಗುವುದೆಂದು ಸಚಿವ ಎಸ್. ಸುರೇಶ್‍ ಕುಮಾರ್ ತಿಳಿಸಿದ್ದಾರೆ.

ನಮ್ಮ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕಿದೆ, ಹಾಗೆಯೇ ಅವುಗಳ ಗುಣಮಟ್ಟ ಹೆಚ್ಚಿಸಿ ಸರಕಾರಿ ಶಾಲೆ ಮಕ್ಕಳನ್ನು ಜಾಗತಿಕ ನಿರೀಕ್ಷೆಗೆ ತಕ್ಕಂತೆ ಬೆಳೆಸುವ ಉದ್ದೇಶದಿಂದ 1,000 ಸರಕಾರಿ ಶಾಲೆಗಳಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳೆರಡರಲ್ಲೂ ಬೋಧಿಸುವ ಉಭಯ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಈ ಶಾಲೆಗಳಲ್ಲಿ ಬಳಸಲಾಗುವ ಪಠ್ಯಪುಸ್ತಕಗಳಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳೆರಡರಲ್ಲೂ ಪಠ್ಯಗಳು ಇರುತ್ತವೆ. ಹಾಗೆಯೇ ಎರಡೂ ಮಾಧ್ಯಮಗಳಲ್ಲೂ ಬೋಧಿಸಲಾಗುತ್ತದೆ. ಆ ಮೂಲಕ ನಮ್ಮ ಮಕ್ಕಳು ಉಭಯ ಮಾಧ್ಯಮಗಳಲ್ಲಿ ಕಲಿತು ಜಾಗತಿಕ ನಿರೀಕ್ಷೆಗೆ ತಕ್ಕಂತೆ ಬೆಳವಣಿಗೆ ಹೊಂದಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ ಹಾಗೂ ಸರಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವಂತಹ ಇಂತಹ ಉಪಕ್ರಮಕ್ಕೆ ಸಾರ್ವಜನಿಕರ ಬೆಂಬಲ ಮತ್ತು ಸಹಕಾರದ ಅಗತ್ಯವಿದೆ ಎಂದು ಸಚಿವರು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ಕಾರ್ಯದರ್ಶಿ ಡಾ.ಕೆ. ಮುರಳಿಧರ, ರಾಜ್ಯದ ಎಲ್ಲ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News