ಜವಾಹರಲಾಲ್ ನೆಹರು ‘ನವ ಭಾರತದ ನಿರ್ಮಾರ್ತೃ’: ಡಿ.ಕೆ.ಶಿವಕುಮಾರ್

Update: 2020-05-27 18:51 GMT

ಬೆಂಗಳೂರು, ಮೇ 27: ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯ ನಾಯಕ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ‘ನವ ಭಾರತದ ನಿರ್ಮಾರ್ತೃ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪಂಡಿತ್ ಜವಾಹರಲಾಲ್ ನೆಹರು ಅವರ ಪುಣ್ಯಸ್ಮರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ರಾಜ್ಯ ಸರಕಾರವು ಲಾಕ್‍ಡೌನ್ ಸಂದರ್ಭದಲ್ಲಿ ಬಡವರ ಪರವಾಗಿ ನಿಲ್ಲುವಲ್ಲಿ ವಿಫಲವಾಗಿದೆ. ವೃತ್ತಿಪರರಿಗೆ 10 ಸಾವಿರ ರೂ.ಗಳ ನೆರವು ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದೆವು. ಆದರೆ, ಯಾವುದೆ ಪ್ರಯೋಜನವಾಗಿಲ್ಲ. ಆಟೊ, ಕ್ಯಾಬ್ ಚಾಲಕರಿಗೆ 5 ಸಾವಿರ ರೂ.ನೀಡುವುದಾಗಿ ಸರಕಾರ ಘೋಷಿಸಿದೆ. ಆದರೆ, ಈವರೆಗೆ ಒಬ್ಬರಿಗೂ ಒಂದು ರೂ.ಗಳು ಸಿಗಲಿಲ್ಲ ಎಂದು ಅವರು ದೂರಿದರು.

ಹಳ್ಳಿಗಳಲ್ಲಿ ಗ್ರಾಮ ಲೆಕ್ಕಿಗ, ಕಂದಾಯ ನಿರೀಕ್ಷಕ, ಪಂಚಾಯತ್ ಕಾರ್ಯದರ್ಶಿಯೊಬ್ಬರಿಗೆ ಜವಾಬ್ದಾರಿ ವಹಿಸಿ ಸ್ಥಳಕ್ಕೆ ಹೋಗಿ ಕುಂಬಾರರು, ಸವಿತಾ ಸಮಾಜದವರು, ಹಮಾಲರು, ಬೀದಿ ವ್ಯಾಪಾರ ಮಾಡುವವರು ಯಾರಿದ್ದಾರೆ ಅನ್ನೋ ಮಾಹಿತಿ ಕಲೆ ಹಾಕಬಹುದು. ಒಂದು ಪಂಚಾಯತ್ ವ್ಯಾಪ್ತಿಯಲ್ಲಿ 100 ಜನ ಸಿಗಬಹುದು ಅಷ್ಟೇ. ಒಂದು ಪಂಚಾಯತ್ ಗೆ 5 ಲಕ್ಷ ರೂ.ಕೊಡಲು ಸಾಧ್ಯವಾಗದಿದ್ದರೆ ಈ ಸರಕಾರ ಯಾಕಿರಬೇಕು ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ವೃತ್ತಿಪರರನ್ನು ಅಗೌರವದಿಂದ ಕಾಣುವ ಈ ಸರಕಾರ ಒಂದು ನಿಮಿಷವೂ ಅಧಿಕಾರದಲ್ಲಿ ಮುಂದುವರೆಯಲು ಅರ್ಹತೆಯನ್ನು ಹೊಂದಿಲ್ಲ. ವಲಸೆ ಕಾರ್ಮಿಕರು ಈ ದೇಶವನ್ನು ಕಟ್ಟಿದ್ದವರು. ಅವರ ರೈಲು ಪ್ರಯಾಣದ ವೆಚ್ಚ ನಾವು ಭರಿಸುತ್ತೇವೆ ಎಂದು ಹೇಳಿದೆವು. ಈಗ ನ್ಯಾಯಾಲಯದ ಮೂಲಕ ಹೇಳಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಲ್ಲಿನ ಕಾರ್ಮಿಕರು ಬೇರೆ ರಾಜ್ಯಗಳಿಗೆ ಹೋಗಿ ಕೆಲಸ ಮಾಡಲು ಅನುಮತಿ ಪಡೆದುಕೊಳ್ಳಬೇಕು ಎನ್ನುತ್ತಿದ್ದಾರೆ. ಅವರಿಗೆ ಕಾನೂನು, ಸಂವಿಧಾನದ ಅರವಿದೆಯೆ? ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ ಎಂಬ ಪರಿಜ್ಞಾನವು ಅವರಿಗಿಲ್ಲ. ಪ್ರಧಾನಿ ಈ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಅರ್ಥವಾಗುತ್ತಿಲ್ಲ ಎಂದು ಶಿವಕುಮಾರ್ ತಿಳಿಸಿದರು.

ರೈತರು, ಕಾರ್ಮಿಕರು, ಬಡವರ ಶಾಪ ತಟ್ಟದೆ ಬಿಡಲ್ಲ. ಈ ಸರಕಾರ ತನ್ನ ಕಡೆಯ ದಿನಗಳನ್ನು ಕಾಣುತ್ತಿದೆ. ಒಬ್ಬ ರೈತನ ನೆರವಿಗೆ ಬರಲು ಈ ಸರಕಾರದಿಂದ ಸಾಧ್ಯವಾಗಿಲ್ಲ. ಜೂ.1ರಿಂದ ದೇಗುಲಗಳನ್ನು ತೆರೆಯುವ ವಿಚಾರವಾಗಿ ಸರಕಾರ ತೀರ್ಮಾನ ಮಾಡಿದೆ. ನಮ್ಮನ್ನು ಅವರು ಕೇಳಲಿಲ್ಲ. ಎಲ್ಲದಕ್ಕೂ ಅವರೆ ಜವಾಬ್ದಾರರಾಗುತ್ತಾರೆ ಎಂದು ಅವರು ಹೇಳಿದರು.

ವಿದ್ಯುತ್ ತಿದ್ದುಪಡಿ ಮಸೂದೆ ಜಾರಿ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಅವರು ಏನೇನು ಮಾಡುತ್ತಾರೋ ಮಾಡಲಿ. ನಾವು ಹಿರಿಯರೆಲ್ಲ ಒಟ್ಟಿಗೆ ಸಭೆ ಸೇರಿ ಅಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡಿ, ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಕೊರೋನ ಲಾಕ್‍ಡೌನ್ ಘೋಷಣೆ ಮಾಡಿ 60 ದಿನ ಆಗಿದೆ. ಯಾವುದೇ ಮುಂದಾಲೋಚನೆ ಇಲ್ಲದೆ ಈ ತೀರ್ಮಾನವನ್ನು ಅವರು ತೆಗೆದುಕೊಂಡರು ಎಂದರು.

ದೇಗುಲ, ಚರ್ಚ್‍ಗಳನ್ನು ತೆರೆದರೆ ತಪ್ಪಿಲ್ಲ. ಆದರೆ, ಕೇವಲ ಹಣಕ್ಕಾಗಿ ಅವುಗಳನ್ನು ತೆರೆಯುವುದಾಗಿದ್ದರೆ ಅದು ತಪ್ಪು. ಹೊಟೇಲ್, ರೆಸ್ಟೊರೆಂಟ್‍ಗಳನ್ನು ತೆರೆಯಲು ಸರಕಾರ ಅನುಮತಿ ನೀಡಲಿ ಎಂದು ಅವರು ಒತ್ತಾಯಿಸಿದರು.

ಕೊರೋನ ವಿರುದ್ಧದ ಹೋರಾಟದಲ್ಲಿ ಬೆಂಗಳೂರು ಮಾದರಿ ನಗರ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಒಳ್ಳೆಯ ಹೇಳಿಕೆ ನೀಡಿದ್ದಾರೆ. ಏಕೆಂದರೆ, ಮಾದರಿ ರಾಜ್ಯ ಗುಜರಾತ್ ಎಂದು ಹೇಳಿಲ್ಲ. ಅತಿ ಹೆಚ್ಚು ಸೋಂಕಿತರು ಇರುವುದು ಗುಜರಾತ್‍ನಲ್ಲಿ. ಬೆಂಗಳೂರಿನಲ್ಲಿ ಉತ್ತಮ ಸೌಲಭ್ಯ ಇರುವುದರಿಂದ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಹರಿಪ್ರಸಾದ್ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್, ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News