‘ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಸಾವಿರಾರು ಕೋಟಿ ರೂ.ಹಗರಣ’

Update: 2020-05-28 13:43 GMT

ಬೆಂಗಳೂರು, ಮೇ 28: ಕೊರೋನ ಸೃಷ್ಟಿಸಿದ ಸಂಕಷ್ಟದಿಂದ ಜನರು ದಿನ ದೂಡುವುದಕ್ಕೆ ಒದ್ದಾಡುತ್ತಿದ್ದರೆ, ಇಂತಹ ಸಮಯವನ್ನೂ ಸಾರ್ವಜನಿಕರ ಹಣ ನುಂಗಲು ಬಕಪಕ್ಷಿಗಳಂತೆ ಹೊಂಚು ಹಾಕುವ ಅಧಿಕಾರಿಗಳನ್ನು ಕೂಡಲೆ ಹುದ್ದೆಯಿಂದ ವಜಾ ಮಾಡಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.

ಕೊಳ್ಳೆ ಹೊಡೆಯಲೆಂದೆ ಸರಕಾರದ ನಿಯಮಗಳಿಗೆ ರಿಯಾಯಿತಿಗಳನ್ನು ಬೇಕೆಂದೆ ನೀಡಲಾಗಿದೆ ಎನ್ನುವ ಅನುಮಾನ ಮೂಡುತ್ತಿದೆ. ಆರೋಗ್ಯ ಇಲಾಖೆಯು ಖರೀದಿಗೆ ಮುನ್ನ ಪ್ರಯೋಗಾಲಯಗಳಲ್ಲಿ ಗುಣಮಟ್ಟದ ಪರೀಕ್ಷೆಗಳನ್ನು ನಡೆಸದೆ ಕೇವಲ ದರ ಪಟ್ಟಿಯ ಆಧಾರದಲ್ಲಿ ಕಮಿಷನ್ ಆಸೆಗಾಗಿ ನಿಯಮ ಬಾಹಿರವಾಗಿ, ತರಾತುರಿಯಲ್ಲಿ ಆದೇಶ ನೀಡುವ ಮೂಲಕ ವೈದ್ಯಕೀಯ ಸಿಬ್ಬಂದಿಗಳ, ಸಾರ್ವಜನಿಕರ ಜೀವನದಲ್ಲಿ ಚೆಲ್ಲಾಟವಾಡಲಾಗಿದೆ. ಈ ಕೃತ್ಯವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಕಳಪೆ ಗುಣಮಟ್ಟದ ಪರೀಕ್ಷಾ ಕಿಟ್‍ಗಳನ್ನು ಖರೀದಿ ಮಾಡಿದ ಪರಿಣಾಮವಾಗಿ ಕರ್ನಾಟಕದಲ್ಲಿ ಸರಿಯಾದ ರೀತಿಯಲ್ಲಿ ಪರೀಕ್ಷೆಗಳು ನಡೆದಿಲ್ಲ. ಹಾಗೂ ತಪ್ಪು ಗ್ರಹಿಕೆಯ ವರದಿಗಳು ಬಂದಿರುವ ಕಾರಣದಿಂದ ಕೊರೋನ ಸೋಂಕು ಸಮುದಾಯಕ್ಕೆ ಹರಡಿರುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಕಳಪೆ ಕಿಟ್‍ಗಳ ಖರೀದಿಯೆ ಕಾರಣ. ಶ್ರೇಷ್ಠತೆಯ ವ್ಯಸನಕ್ಕೆ ಬಿದ್ದು ಕೊರೋನ ನಿಯಂತ್ರಣದಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ ಎಂದು ಸುಳ್ಳೇ ಸುಳ್ಳು ಮಾಹಿತಿ ಕೊಟ್ಟು ನಿಜವಾದ ಸೋಂಕಿತರ ಸಂಖ್ಯೆಯನ್ನು ರಾಜ್ಯ ಸರಕಾರ ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಬಚ್ಚಿಡುತ್ತಿದ್ದಾರೆ ಎಂದು ಪಕ್ಷ ದೂರಿದೆ.

13 ವರ್ಷಗಳ ಹಳೆಯದಾದ ವೆಂಟಿಲೇಟರ್ ಖರೀದಿ, ದುಪ್ಪಟ್ಟು ಹಣ ನೀಡಿ ಸ್ಯಾನಿಟೈಜರ್ ಖರೀದಿ, ಕಪ್ಪು ಪಟ್ಟಿಗೆ ಸೇರಿರುವ ಕಂಪೆನಿಯಿಂದ ಗ್ಲೂಕೋಸ್ ಖರೀದಿ, ಸಿರೆಂಜ್‍ಗಳು ಸೇರಿದಂತೆ ಇತರೆ ವೈದ್ಯಕೀಯ ಸಲಕರಣೆಗಳ ಖರೀದಿ ಹೀಗೆ ಸಾಲು ಸಾಲು ಅವ್ಯವಹಾರಗಳು ಆಗುತ್ತಿ ದ್ದರೂ ಆರೋಗ್ಯ ಸಚಿವ ಶ್ರೀರಾಮುಲು ಅಥವಾ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಅಧಿಕಾರಿಗಳ ಮೇಲೆಯೆ ಸಂಪೂರ್ಣ ಅವಲಂಬಿತರಾಗಿ  ಕಣ್ಮುಚ್ಚಿ ಕುಳಿತಿರುವುದು ಬೇಜವಾಬ್ದಾರಿಯ ವರ್ತನೆ ಎಂದು ಆಮ್ ಆದ್ಮಿ ಪಕ್ಷ ಟೀಕಿಸಿದೆ.
ಮುಖ್ಯಮಂತ್ರಿಗಳೆ ಇರುವ ಸಮಿತಿಯ ಗೋಳು ಈ ಮಟ್ಟದ್ದಾದರೆ ಕೇವಲ ಅಧಿಕಾರಿಗಳೆ ಸರಕಾರ ನಡೆಸುವುದಾದರೆ ಚುನಾವಣೆಗಳು ನಡೆಸುವ ಅಗತ್ಯವಿದೆಯೇ. ಸರಕಾರಕ್ಕೆ ಸಚಿವ ಸಂಪುಟ ಏತಕ್ಕೆ? ಆಡಳಿತಕ್ಕೆ ಅಧಿಕಾರಿಗಳು ಸಾಕೇ? ಕಳಪೆ ಗುಣಮಟ್ಟದ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ನನ್ನ ಪಾತ್ರ ಏನಿಲ್ಲ ಎಂದು ಹೇಳಿರುವ ಸಚಿವ ಶ್ರೀರಾಮುಲು, ಇದೆಲ್ಲ ಮುಖ್ಯಮಂತ್ರಿಗಳ, ಮುಖ್ಯ ಕಾರ್ಯದರ್ಶಿಗಳ ಉನ್ನತ ಮಟ್ಟದ ಅಧಿಕಾರಿಗಳ ಕೆಲಸ ಎಂದು ಹೇಳಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.

ಹಾಗಾದರೆ ಒಂದು ಉನ್ನತ ಹಾಗೂ ದೊಡ್ಡ ಇಲಾಖೆಗೆ ಸಚಿವರ ಅಗತ್ಯ ಏನಿದೆ. ಸರಕಾರದ ಎಲ್ಲ ಸಚಿವರನ್ನು ಮನೆಗೆ ಕಳುಹಿಸಿ, ಕೇವಲ ಅಧಿಕಾರಿಗಳನ್ನು ಇಟ್ಟುಕೊಂಡು ಆಡಳಿತ ನಡೆಸಬಹುದಲ್ಲವೇ. ಇನ್ನು ಮುಂದಾದರೂ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡದೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಿ. ಹಗರಣದಲ್ಲಿ ನಿಮ್ಮ ಪಾತ್ರ ಏನಿಲ್ಲ ಎನ್ನುವುದಾದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಡಿ. ಇಲ್ಲವಾದರೆ ನೀವೆ ಮುಂದೆ ನಿಂತು ಉನ್ನತ ಮಟ್ಟದ ತನಿಖೆ ನಡೆಸಿ ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿಯ ಈ ರೀತಿಯ ನಿರ್ಲಕ್ಷ್ಯದಿಂದ ಸೋಂಕು ಹರಡಿದ್ದವರ ಮಾಹಿತಿ ಕಲೆಹಾಕಿ ಅಂತಹ ಸೋಂಕಿತರಿಗೆ ಪರಿಹಾರ ನೀಡುವ ವ್ಯವಸ್ಥೆ ಆಗಬೇಕು. ಈ ಪರಿಹಾರವನ್ನು ಭ್ರಷ್ಟ್ರಾಚಾರದಲ್ಲಿ ತೊಡಗಿದ್ದ ಅಧಿಕಾರಿಗಳಿಂದಲೆ ವಸೂಲಿ ಮಾಡಬೇಕು. ಇದ್ಯಾವುದರ ಪರಿವೆಯೆ ಇಲ್ಲದಂತೆ ಜಾಣ ಮೌನವಹಿಸಿರುವ ಮುಖ್ಯಮಂತ್ರಿ ಈ ಅವ್ಯವಹಾರಗಗಳ ಬಗ್ಗೆ ತಿಳಿದಿದ್ದರು ಯಾರ ವಿರುದ್ಧವೂ ಉಗ್ರ ಕ್ರಮಗಳನ್ನು ಕೈಗೊಳ್ಳದೆ ಯಾರದೋ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆಪ್ ದೂರಿದೆ. ಬಿಬಿಎಂಪಿ ಆಯುಕ್ತರ ವಿರುದ್ದ 400 ಕೋಟಿ ರೂ. ಕೊರೋನ ನೆಪದಲ್ಲಿ ದುರುಪಯೋಗ ಪಡಿಸಿಕೊಂಡ ಆರೋಪ ಇದೆ. ಇದರ ವಿರುದ್ದ ಈಗಾಗಲೇ ಎಸಿಬಿಯಲ್ಲಿ ದೂರು ದಾಖಲಾಗಿದೆ. ಮೇಲು ನೋಟಕ್ಕೆ ಇದು ಭಾರಿ ಮೊತ್ತದ ಹಗರಣ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಎಲ್ಲ ಸಂಗತಿಗಳನ್ನು ನೋಡಿದರೆ ಜನ ಸಾಮಾನ್ಯ ಹೇಗಾದರೂ ಬಡಿದಾಡಿ ಸಾಯಲಿ, ನಾವು ಚೆನ್ನಾಗಿದ್ದರೆ ಸಾಕು ಎನ್ನುವ ಈ ಧೋರಣೆ ಒಳ್ಳೆಯದಲ್ಲ ಎಂದು ಆಪ್ ಟೀಕಿಸಿದೆ. ಈ ಭ್ರಷ್ಟ್ರಾಚಾರದ ಬಗ್ಗೆ ರಾಜ್ಯಪಾಲರಿಗೂ ಆಮ್ ಆದ್ಮಿ ಪಕ್ಷ ದೂರನ್ನು ಸಲ್ಲಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಿ

ಶಾಸಕ ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ನಡೆಸಿರುವ ತನಿಖೆಯ ಬದಲು ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಅದರ ಮೂಲಕ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News