ಸೌದಿ ಅರೇಬಿಯಾ: ಗಂಭೀರ ಕಾಯಿಲೆಯ ಚಿಕಿತ್ಸೆಗಾಗಿ ತವರಿಗೆ ಮರಳಲು ಕಾಯುತ್ತಿರುವ ಅನಿವಾಸಿ ಕನ್ನಡಿಗರ ಗೋಳು ಕೇಳುವವರಾರು ?

Update: 2020-05-28 14:21 GMT

ರಿಯಾದ್: ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಾದ್ಯಂತ  ಅನಿವಾಸಿ ಕನ್ನಡಿಗರು ಸಂಕಷ್ಟ ದಲ್ಲಿ ಸಿಲುಕಿದ್ದು ಸರಕಾರ ಅವರ ವಾಪಾಸಾತಿಗಾಗಿ ಕ್ರಮಕೈಗೊಳ್ಳದಿರುವುದು ಅನಿವಾಸಿಗಳಲ್ಲಿ ನಿರಾಶೆಯುಂಟುಮಾಡಿದೆ.

ಚಿಕಿತ್ಸೆಗಾಗಿ ತವರಿಗೆ ಮರಳಲು ಹೊರಟು ನಿಂತ ಕ್ಯಾನ್ಸರ್, ಹೃದ್ರೋಗದಂತಹ ಗಂಭೀರ ಕಾಯಿಲೆ ಪೀಡಿತರು, ನೂರಕ್ಕೂ ಅಧಿಕ ಗರ್ಭಿಣಿ ಮಹಿಳೆಯರು ಮತ್ತು ಉದ್ಯೋಗ ಕಳೆದುಕೊಂಡ ಕಾರ್ಮಿಕರು ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದಾರೆ. ಇಂತಹ ಗಂಭೀರ ಕಾಯಿಲೆ ಪೀಡಿತರಲ್ಲಿ‌ ಕೆಲವರ ಅಳಲನ್ನು ಇಲ್ಲಿ ನೀಡಲಾಗಿದೆ.

ಶಬೀರ್ ಅಹ್ಮದ್ ( ಹೆಸರು ಬದಲಾಯಿಸಲಾಗಿದೆ)

ಮಂಗಳೂರಿನ ಸುರತ್ಕಲ್‌  ನಿವಾಸಿ ಶಬೀರ್ ಅಹ್ಮದ್ ಒಂದೂವರೆ ವರ್ಷಗಳಿಂದ ರಿಯಾದ್‌ ನ ಖರ್ಜ್ ನಲ್ಲಿ ಹೌಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಇದೀಗ ಕಳೆದ ಒಂದು ತಿಂಗಳಿಂದ ತೀವ್ರ ಅಸ್ವಸ್ಥಗೊಂಡಿದ್ದು  ಕ್ಯಾನ್ಸರ್ ಪೀಡಿತರಾಗಿರುವುದು ವೈದ್ಯಕೀಯ ವರದಿ ಬಂದಿತ್ತು. ಈಗಾಗಲೇ ಒಂದು ಶಸ್ತ್ರ ಚಿಕಿತ್ಸೆ ನಡೆದಿದ್ದು  ತುರ್ತಾಗಿ‌ ಇನ್ನೊಂದು‌ ಶಸ್ತ್ರ ಚಿಕಿತ್ಸೆ ಮಾಡಬೇಕಿದ್ದು‌‌ ಸೌದಿ ಅರೇಬಿಯಾದಲ್ಲಿ ಅದು ಅತ್ಯಂತ ದುಬಾರಿಯಾಗಿದ್ದು ಸುಮಾರು ಎಂಟು ಲಕ್ಷ ರೂಪಾಯಿ ಖರ್ಚು ಮಾಡಬೇಕಾಗಿದೆ. ಈಗಾಗಲೇ ಜಬ್ಬಾರ್ ರವರ ಪ್ರಾಯೋಜಕನು ಒಂದು ತಿಂಗಳ ಹಿಂದೆ ವಿಸಾ ಎಕ್ಸಿಟ್ ಮಾಡಿದ್ದು ಇವರ ಚಿಕಿತ್ಸಾ ಖರ್ಚು ವೆಚ್ಚದ ಗೊಡವೆಗೆ ಹೋಗುತ್ತಿಲ್ಲ. ಶಬೀರ್ ತನ್ನ ಸಂಬಂಧಿಗಳ ನೆರವಿನಿಂದ ಇದುವರೆಗೆ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದು ಮುಂದಿನ ಚಿಕಿತ್ಸೆಗೆ ಭಾರತಕ್ಕೆ ಮರಳಲು ಬಯಸಿದ್ದರೂ ವಿಮಾನ ಯಾನ ವ್ಯವಸ್ಥೆ ನಿಲುಗಡೆಯಾಗಿರುವುದರಿಂದ ಸಾಧ್ಯವಾಗುತ್ತಿಲ್ಲ. ಸೌದಿ ಅರೇಬಿಯಾದಲ್ಲಿ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಯ ಚಿಕಿತ್ಸೆ ಮತ್ತು ಔಷಧಗಳು ದುಬಾರಿ ಮಾತ್ರವಲ್ಲದೆ ಪರಣಾಮಕಾರಿಯಲ್ಲ ಎಂಬುದು ಎಲ್ಲರೂ ತಿಳಿದ ವಿಚಾರವಾಗಿದೆ. ಸ್ವತಃ ಕಾಯಿಲೆ ಪೀಡಿತ ಶಬೀರ್ ಅವರ ವೈದ್ಯರು ಉತ್ತಮ ಚಿಕಿತ್ಸೆಗಾಗಿತ್ ಭಾರತಕ್ಕೆ ಹಿಂದಿರುಗುವುದು ಉತ್ತಮವೆಂದು ಹೇಳಿದ್ದು ಶಬೀರ್ ವಾಪಾಸಾತಿಗಾಗಿ ಕಾಯುತ್ತಿದ್ದಾರೆ. ತವರಿನಲ್ಲಿ ಶಬೀರ್ ಕುಟುಂಬಸ್ಥರೂ ಆತಂಕದಲ್ಲಿ ಅವರ ವಾಪಾಸಾತಿಗಾಗಿ ಕಾಯುತ್ತಿದ್ದಾರೆ.

ಜೀವನ್  ಡಿಸೋಝ

ಮಂಗಳೂರಿನ ಫಳ್ನೀರ್  ನಿವಾಸಿ ಜೀವನ್  ಡಿಸೋಝ (31) ಸೌದಿ ಅರೇಬಿಯಾದ ದಮಾಮ್ ನಲ್ಲಿ ಕಳೆದ ಒಂದು ವರ್ಷದಿಂದ ಕಂಪೆನಿಯೊಂದರಲ್ಲಿ ದುಡಿಯುತ್ತಿದ್ದು ಕಳೆದ ಒಂದೂವರೆ ತಿಂಗಳಿಂದ ತೀವ್ರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದೀಗ ಅವರ ವೈದ್ಯಕೀಯ ವರದಿ ಬಂದಿದ್ದು ಗಂಭೀರ ಕಾಯಿಲೆಯೊಂದನ್ನು ಎದುರಿಸುತ್ತಿರುವುದು  ತಿಳಿದುಬಂದಿದೆ. ತನ್ನ ವಾಪಾಸಾತಿಗಾಗಿ ರಾಯಭಾರಿ ಕಚೇರಿಗೆ ಮನವಿ ಸಲ್ಲಿಸಿದ್ದು ಕರ್ನಾಟಕಕ್ಕೆ ವಿಮಾನ ಏರ್ಪಾಡು ಆರಂಭವಾಗದೆ ಅದು ಸಾಧ್ಯವಾಗುತ್ತಿಲ್ಲ. ಸೌದಿ ಅರೇಬಿಯಾದಲ್ಲಿ ಇವರ ಕಾಯಿಲೆಗೆ ಚಿಕಿತ್ಸಾ ವೆಚ್ಚ ದುಬಾರಿಯಾಗಿರುವುದರಿಂದ ಕಂಗಾಲಾಗಿದ್ದಾರೆ.

ಶಬೀರ್  ಮತ್ತು  ಜೀವನ್  ರಂತಹ ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವ ನೂರಾರು ಮಂದಿ ಸೌದಿ ಅರೆಬಿಯಾದಲ್ಲಿ ಸಿಲುಕಿಕೊಂಡಿದ್ದು, ಹೆಚ್ಚಿನವರು ಸೌದಿ ಕಠಿಣ ಕಾನೂನುಗಳಿಂದಾಗಿ ಮಾಧ್ಯಮಗಳ ಮುಂದೆ ಅವರ ಅಳಲನ್ನು ನೇರವಾಗಿ ತೋಡಿಕೊಳ್ಳಲು ಹಿಂಜರಿಯುತ್ತಾರೆ.

ಫಝಲುರ್ರಹ್ಮಾನ್

ಬೆಂಗಳೂರು ಮೂಲದ ಫಝಲುರ್ರಹ್ಮಾನ್ ಕಳೆದ ಹಲವು ವರ್ಷಗಳಿಂದ ಸೌದಿ ಅರೇಬಿಯಾದ  ರಿಯಾದ್ ನಲ್ಲಿ  ದುಡಿಯುತ್ತಿದ್ದರು. ಇತ್ತೀಚೆಗೆ ಮನೆ ಕೆಲಸದ ವೇಳೆ ಕುಸಿದು‌ ಬಿದ್ದು ಎರಡೂ ಕಾಲುಗಳು ತೀವ್ರವಾಗಿ  ಗಾಯಗೊಂಡಿದ್ದು ಓಡಾಡಲು ಇತರರ ನೆರವಿನ ಅಗತ್ಯವಿದೆ.   ಈ ಕಷ್ಟಕರ ಸ್ಥಿತಿಯಲ್ಲಿ  ಉಪಚಾರವನ್ನು ನೋಡಿಕೊಳ್ಳಲು ಕುಟುಂಬ ಸದಸ್ಯರು ಬಳಿ ಇರಬೇಕಾದ  ಅಗತ್ಯವಿದ್ದು ಅವರು   ತವರು ಸೇರುವ ತವಕದಲ್ಲಿದ್ದಾರೆ.

ಗರ್ಭಿಣಿ ಮಹಿಳೆಯರು

ಭಾರತಕ್ಕೆ ಹೋಲಿಸುವಾಗ ಸೌದಿ ಅರೇಬಿಯಾದ ಆಸ್ಪತ್ರೆಗಳಲ್ಲಿ ಹೆರಿಗೆ ವೆಚ್ಚ ದುಬಾರಿಯಾಗಿದ್ದು ಇಲ್ಲಿನ ದುಪ್ಪಟ್ಟು  ಹಣವನ್ನು ವ್ಯಯಿಸಬೇಕಾಗುತ್ತದೆ. ಆರೋಗ್ಯ ವಿಮೆ  ಇಲ್ಲದಿದ್ದರೆ ಅದು ಇನ್ನೂ ದುಬಾರಿಯಾಗುತ್ತದೆ. ಕಂಪೆನಿಗಳಲ್ಲಿ ಉದ್ಯೋಗದಲ್ಲಿರುವವರು ವಿಸಿಟಿಂಗ್ ವಿಸಾಗಳಲ್ಲಿ ಒಂದೆರಡು ತಿಂಗಳು ಗಳಿಗಾಗಿ ತಮ್ಮ ಕುಟುಂಬವನ್ನು ಕರೆಸಿಕೊಂಡಿದ್ದು ಅವರಲ್ಲಿ ಹೆರಿಗೆಗಾಗಿ ಹೊರಟು‌ ನಿಂತವರು ಈಗ  ವಿಮಾನಯಾನ‌‌ ರದ್ದಾಗಿರುವುದರಿಂದ‌ ಇಲ್ಲಿ ಸಿಲುಕಿಕೊಂಡಿದ್ದಾರೆ. 

ಸಂಕಷ್ಟದಲ್ಲಿ ಕಾರ್ಮಿಕರು

ಸೌದಿ ಅರೇಬಿಯಾದಲ್ಲಿ ಅತ್ಯಧಿಕವಾಗಿ ಕೋವಿಡ್ 19 ವೈರಸ್ ತಗುಲಿಕೊಂಡವರು  ಕಾರ್ಮಿಕ ಶಿಬಿರಗಳಲ್ಲಿ ನೆಲೆಸುವ ವಿದೇಶಿಗಳಾಗಿದ್ದಾರೆ. ಪ್ರತೀ ಕ್ಯಾಂಪ್ ಗಳಲ್ಲಿ ನೂರರಿಂದ 6000 ದಷ್ಟು ಮಂದಿ ಕಾರ್ಮಿಕರು ಒಟ್ಟಾಗಿ ವಾಸಿಸುತ್ತಿದ್ದು ಒಂದು ಕೊಠಡಿಯನ್ನು 6 ರಿಂದ ಎಂಟು ಮಂದಿ ಹಂಚಿಕೊಳ್ಳುತ್ತಾರೆ. ಈ ಪರಿಸ್ಥಿತಿಯಲ್ಲಿ ಓರ್ವನಿಗೆ ವೈರಸ್ ತಗುಲಿದರೂ ಶಿಬಿರದಲ್ಲಿ ಉಳಿದ ಕಾರ್ಮಿಕರಿಗೆ ವೇಗವಾಗಿ ಹರಡುತ್ತಿದೆ. ಇದರಿಂದಾಗಿ ಕಾರ್ಮಿಕರು  ಮಾನಸಿಕ ಒತ್ತಡ, ಭಯ ಮತ್ತು ಆತಂಕದಿಂದ ಜೀವಿಸುವಂತಾಗಿದೆ.

ಅಲ್ಲದೆ ಲಾಕ್ ಡೌನ್ ನಿಂದ  ಉಂಟಾಗುವ ನಷ್ಟವನ್ನು ಕಡಿಮೆಗೊಳಿಸುವುದಕ್ಕಾಗಿ ಕಂಪೆನಿಗಳು ಸಿಬ್ಬಂದಿಗಳನ್ನು ವೇತನ ರಹಿತ ರಜೆ ಯಲ್ಲಿ ಕಳಿಸುತ್ತಿವೆ. ಗಂಟೆಯ ಆಧಾರದಲ್ಲಿ‌ ವೇತನ ಪಡೆಯುವವರ  ಕೆಲಸದ ಅವಧಿಯನ್ನು‌ ಕಡಿತಗೊಳಿಸುತ್ತಿವೆ. ಸಣ್ಣ ಕೈಗಾರಿಕೆಗಳು ತಾತ್ಕಾಲಿಕವಾಗಿ ಮುಚ್ಚಿದ್ದು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಇಂಥಹ ಕಾರ್ಮಿಕರು ದೈನಂದಿನ ಖರ್ಚುವೆಚ್ಚಕ್ಕಾಗಿ ಹಣವಿಲ್ಲದೆ ಸಮಸ್ಯೆಗೆ ಸಿಲುಕಿದ್ದು ವಾಪಾಸಾತಿಗಾಗಿ‌ ಸರಕಾರದ ವಿಮಾನ‌ ಏರ್ಪಾಡನ್ನು ಕಾಯುತ್ತಿದ್ದಾರೆ.

ಸಮಸ್ಯೆಯಲ್ಲಿ ಉದ್ಯಮಿಗಳು

ಸೌದಿ ಸರಕಾರದ ತೈಲ ಸಂಸ್ಕರಣಾ ಯೋಜನೆಗಳನ್ನು ಆಧರಿಸಿ ಉದ್ಯಮ ನಡೆಸುವ ಅನಿವಾಸಿ ಕನ್ನಡಿಗ ಉದ್ಯಮಿಗಳಿದ್ದು ತಾತ್ಕಾಲಿಕವಾಗಿ ಸಾವಿರಾರು ಮಂದಿ ಕಾರ್ಮಿಕರು ಮತ್ತು‌ ಸಿಬ್ಬಂದಿಯನ್ನು ಭಾರತದಿಂದ ಕರೆತಂದವರಿದ್ದಾರೆ. ಯೋಜನೆಗಳು ತಾತ್ಕಾಲಿಕವಾಗಿ ಅನಿರ್ದಿಷ್ಠಾವಧಿಗೆ ನಿಂತಿರುವುದರಿಂದ  ಈ ಕಾರ್ಮಿಕರಿಗೆ ಊಟ ವಸತಿ ಕಲ್ಪಿಸುವುದು ಅವರಿಗೆ ಕೋಟ್ಯಂತರ ರೂಪಾಯಿ ನಷ್ಟವುಂಟುಮಾಡುತ್ತಿದೆ.

ಸಂಕಷ್ಟದಲ್ಲಿರುವ ಕನ್ನಡಿಗ ಉಮ್ರಾ ಯಾತ್ರಿಕರು

ಕೋವಿಡ್ 19  ಲಾಕ್ ಡೌನ್ ನಿಮಿತ್ತ ಸೌದಿ ಅರೇಬಿಯಾದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಅನಿವಾಸಿ ಕನ್ನಡಿಗರು ಜಿದ್ದಾ, ಮಕ್ಕಾ ಮತ್ತು ಮದೀನಾ ಒಳಗೊಂಡಂತೆ ಪಶ್ಚಿಮ ಪ್ರಾಂತ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ಪವಿತ್ರ ಮಕ್ಕಾ ಮತ್ತು ಮದೀನಾಗಳಿಗೆ ಉಮ್ರಾ ವಿಸಾದಲ್ಲಿ ಒಂದು ತಿಂಗಳು ಅಥವಾ ಹದಿನೈದು ದಿನಗಳಿಗೆ  ಆಗಮಿಸಿದ ಕನ್ನಡಿಗರು ಅನಿರ್ದಿ ಷ್ಟಾವಧಿ  ಲಾಕ್ ಡೌನ್ ನಿಂದಾಗಿ‌ ಸಿಲುಕಿಕೊಂಡಿದ್ದಾರೆ. ಇವರಲ್ಲಿಯೂ ಹಿರಿಯರು, ಕಾಯಿಲೆ ಪೀಡಿತರು ಮತ್ತು ಗರ್ಭಿಣಿ ಸ್ತ್ರೀಯರು ಇದ್ದು ತವರಿಗೆ ಮರಳಲು ಕಾತರರಾಗಿದ್ದಾರೆ. ಅಲ್ಲದೆ ಹಲವರು ಕ್ಯಾನ್ಸರ್, ಹೃದ್ರೋಗದಂತಹ  ಗಂಭೀರ ಕಾಯಿಲೆಗೆ ಚಿಕಿತ್ಸೆ ಪಡೆಯುವವರಿದ್ದು ಒಂದು ತಿಂಗಳಿಗೆ ಬೇಕಾಗುವಷ್ಟು ಮಾತ್ರವೇ ಔಷಧಿ ತಂದವರಿದ್ದಾರೆ. ಇದೀಗ ವಿಮಾನ ಯಾನ ಸ್ಥಗಿತಗೊಂಡಿರುವುದರಿಂದ ತವರಿಗೆ ಮರಳಲು ಸಾಧ್ಯವಾಗದೆ ನಿಯಮಿತ ವೈದ್ಯಕೀಯ ಪರೀಕ್ಷೆ ಮಾಡಲಾಗದೆ ಸಿಲುಕಿಕೊಂಡಿದ್ದಾರೆ. ರಾಜ್ಯ ಸರಕಾರವು ಮಧ್ಯಪ್ರವೇಶಿಸಿ ಜಿದ್ದಾ ಹಾಗೂ ಮದೀನಾ ಮೂಲಕ‌ ಕರ್ನಾಟಕಕ್ಕೆ ತ್ವರಿತ ವಾಗಿ ವಿಶೇಷ ವಿಮಾನ ಏರ್ಪಡಿಸುವಂತೆ ಇಲ್ಲಿ ಸಿಲುಕಿಕೊಂಡಿರುವ ಅನಿವಾಸಿ ಕನ್ನಡಿಗರು ಒತ್ತಾಯಿಸುತ್ತಿದ್ದಾರೆ.

ಜಿದ್ದಾ ಸುತ್ತಮುತ್ತ ಸಣ್ಣಪುಟ್ಟ ಕೆಲಸ ಮಾಡುವವರು ತಮ್ಮ ಕುಟುಂಬಿಕರನ್ನು ಉಮ್ರಾಗಾಗಿ‌ ವಿಸಿಟ್ ವಿಸಾದಲ್ಲಿ ಕರೆತರುವುದು ಸಾಮಾನ್ಯ. ಇವರಲ್ಲಿ ಹಲವರು‌ ಇದೀಗ ಉದ್ಯೋಗ ಕಳೆದುಕೊಂಡಿದ್ದಾರೆ ಅಥವಾ ಅವರ ವೇತನ ಕಡಿತಗೊಂಡಿದೆ. ಈ ಪರಿಸ್ಥಿಯಲ್ಲಿ ರೂಮು ಬಾಡಿಗೆ ನೀಡಲಾಗದೆ, ದಿನನಿತ್ಯದ ಆಹಾರ ಮತ್ತು‌ ಇತರ ಖರ್ಚಿಗೆ ಹಣವಿಲ್ಲದೆ ಮುಂದಿನ ದಾರಿ ಕಾಣದೆ ಆತಂಕದಲ್ಲಿ ಜೀವಿಸುತ್ತಿದ್ದಾರೆ.

ಇಂಡಿಯನ್ ಸೋಶಿಯಲ್ ಫ಼ಾರಮ್, ಸೌದಿ ಅರೇಬಿಯಾ, ಕರ್ನಾಟಕ ಘಟಕವು  ತುರ್ತು ವಾಪಸಾತಿಯ ಅಗತ್ಯವುಳ್ಳ‌ ಅನಿವಾಸಿ ಕನ್ನಡಿಗರ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು  ಅವರನ್ನು ತವರಿಗೆ ಮರಳಿಸಲು ತೀವ್ರ ಪ್ರಯತ್ನ ನಡೆಸುತ್ತಿದೆ. ಆದರೆ ವಿಮಾನ ಯಾನ ಸೌಲಭ್ಯದ  ಕೊರತೆಯ ಹಿನ್ನೆಲೆಯಲ್ಲಿ ಅದು ಸಾಧ್ಯವಾಗುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News