ಎಚ್ಚರಿಕೆ… ವಾಟ್ಸ್ಯಾಪ್ ಬಳಕೆದಾರರನ್ನು ಗುರಿ ಮಾಡುವ ಹೊಸ ವಂಚನೆ ಜಾಲದ ಬಗ್ಗೆ ತಿಳಿದುಕೊಳ್ಳಿ

Update: 2020-05-28 17:52 GMT

ಹೊಸದಿಲ್ಲಿ: ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ‍ಗಳಲ್ಲಿ ವಾಟ್ಸ್ಯಾಪ್ ಒಂದು. ಕೋವಿಡ್-19 ಸಾಂಕ್ರಾಮಿಕದ ಅವಧಿ ಇದರ ಬಳಕೆಯನ್ನು ಹೆಚ್ಚಿಸಿದ್ದು, ಈ ಅವಧಿಯಲ್ಲಿ ಬಳಕೆ ಶೇಕಡ 40ರಷ್ಟು ಹೆಚ್ಚಿದೆ. ವಾಟ್ಸ್ಯಾಪ್ ಜನಪ್ರಿಯತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹ್ಯಾಕರ್ ಗಳು ಅಮಾಯಕ ವಾಟ್ಸ್ಯಾಪ್ ಬಳಕೆದಾರರನ್ನು ಗುರಿಮಾಡಿದ್ದಾರೆ ಎಂದು ವರದಿಯಾಗಿದೆ.

ಆ್ಯಪ್ ಕ್ಷೇತ್ರದ ಬೆಳವಣಿಗೆಗಳ ಮೇಲೆ ನಿಗಾ ಇಟ್ಟಿರುವ ಡಬ್ಲ್ಯುಎಬೇಟಾಇನ್ಫೋ ಈ ಸಂಬಂಧ ಟ್ವೀಟ್ ಮಾಡಿ, ಬಳಕೆದಾರರನ್ನು ಗುರಿಮಾಡಿರುವ ಹೊಸ ವಂಚನೆ ಜಾಲದ ಬಗ್ಗೆ ಎಚ್ಚರಿಸಿದೆ. “ವಾಟ್ಸ್ಯಾಪ್ ಎಂದೂ ನಿಮ್ಮ ಡಾಟಾ ಅಥವಾ ದೃಢೀಕರಣ (ವೆರಿಫಿಕೇಶನ್) ಕೋಡ್ ಕೇಳುವುದಿಲ್ಲ” ಎಂದು ಡಬ್ಲ್ಯುಎಬೇಟಾಇನ್ಫೋ ಎಚ್ಚರಿಸಿದೆ.

ನವಾರ್ರೊ ಎಂಬವರಿಗೆ ವಾಟ್ಸ್ಯಾಪ್ ತಾಂತ್ರಿಕ ತಂಡದವರೆಂದು ಹೇಳಿಕೊಂಡ ವ್ಯಕ್ತಿಗಳು ಮೆಸೇಜ್ ಕಳುಹಿಸಿದ್ದಾರೆ. ಆರು ಅಂಕಿಗಳ ದೃಢೀಕರಣ ಕೋಡ್ ನೀಡುವಂತೆ ಎಸ್‍ಎಂಎಸ್ ಮೂಲಕ ಕೇಳಲಾಗಿದೆ. ಆದರೆ ಈ ಹ್ಯಾಕರ್ ವಾಟ್ಸ್ಯಾಪ್ ಲೋಗೊವನ್ನು ತಮ್ಮ ಖಾತೆಯ ಪ್ರೊಫೈಲ್ ಚಿತ್ರವಾಗಿ ಬಳಸಿದ್ದಾರೆ. ಇದರಿಂದಾಗಿ ಅಮಾಯಕ ಬಳಕೆದಾರರಿಗೆ ವಾಟ್ಸ್ಯಾಪ್ ಸಂಸ್ಥೆಯೇ ಈ ಸಂದೇಶ ಕಳುಹಿಸಿದೆ ಎಂದು ನಂಬುವ ಪರಿಸ್ಥಿತಿ ಬಂದಿದೆ.

ಆದರೆ ವಾಸ್ತವವಾಗಿ ವಾಟ್ಸ್ಯಾಪ್ ಎಂದೂ ಇಂತಹ ಮಾಹಿತಿ ಕೇಳುವುದಿಲ್ಲ. ವಾಟ್ಸ್ಯಾಪ್ ಸಪೋರ್ಟ್ ಪೇಜ್‍ನಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖವಿದ್ದು, ದೃಢೀಕರಣ ಕೋಡ್ ಯಾರಿಗೂ ನೀಡದಂತೆ ಸೂಚಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News