ರಾಜ್ಯದಲ್ಲಿ ಮತ್ತೆ 178 ಮಂದಿಗೆ ಕೊರೋನ ಸೋಂಕು: ಒಟ್ಟು ಸೋಂಕಿತರ ಸಂಖ್ಯೆ 2,711ಕ್ಕೆ ಏರಿಕೆ

Update: 2020-05-29 07:34 GMT

ಬೆಂಗಳೂರು, ಮೇ 29: ರಾಜ್ಯದಲ್ಲಿಂದು ಮತ್ತೆ 178 ಮಂದಿಗೆ ಕೊರೋನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 2,711ಕ್ಕೇ ಏರಿಕೆಯಾಗಿದೆ. ಕಳೆದ 19 ಗಂಟೆಗಳ ಅವಧಿಯಲ್ಲಿ ಸೋಂಕಿತರ ಪ್ರಮಾಣದಲ್ಲಿ ಇಷ್ಟೊಂದು ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

 ಗುರುವಾರ ಸಂಜೆ 5ರಿಂದ ಇಂದು ಮಧ್ಯಾಹ್ನ 12 ಗಂಟೆಯೊಳಗೆ 178 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಲೆಟಿನ್ ತಿಳಿಸಿದೆ. ಇಂದು ಅತ್ಯಧಿಕ ಸೋಂಕಿನ ಪ್ರಕರಣಗಳು ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಪತ್ತೆಯಾಗಿವೆ. ರಾಯಚೂರಿನಲ್ಲಿ 62 ಮತ್ತು ಯಾದಗಿರಿಯಲ್ಲಿ 60 ಮಂದಿಗೆ ಸೋಂಕು ತಗುಲಿದೆ. ಉಳಿದಂತೆ ಉಡುಪಿ ಮತ್ತು ಕಲಬುರಗಿ ಜಿಲ್ಲೆಯಲ್ಲಿ ತಲಾ 15, ಬೆಂಗಳೂರು 9, ಚಿಕ್ಕಬಳ್ಳಾಪುರ ಮತ್ತು ದಾವಣಗೆರೆಯಲ್ಲಿ ತಲಾ 4, ಮಂಡ್ಯ 2, ಚಿತ್ರದುರ್ಗ, ಶಿವಮೊಗ್ಗ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ತಲಾ ಓರ್ವ ವ್ಯಕ್ತಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ.

ಇಂದು ಸೋಂಕು ದೃಢಪಟ್ಟ 178 ಪ್ರಕರಣಗಳಲ್ಲಿ ಅತ್ಯಧಿಕ ಮಂದಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸಿದವರು ಎಂದು ತಿಳಿದುಬಂದಿದೆ.

ಈ ಮಧ್ಯೆ ಇಂದು 35 ಮಂದಿ ಸೋಂಕುಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ರಾಜ್ಯದ ಒಟ್ಟು ಸೋಂಕಿತರ ಪೈಕಿ 896 ಮಂದಿ ಗುಣಮುಖರಾಗಿದ್ದಾರೆ. 47 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News