ಜೀತದ ದುಡಿಮೆ, ಸರಣಿ ಅತ್ಯಾಚಾರ...

Update: 2020-05-29 07:48 GMT

► ಅಗರಬತ್ತಿ ಕಾರ್ಖಾನೆಯ ಇಬ್ಬರು ಉದ್ಯೋಗಿಗಳಿಂದ ಯುವತಿಯ ಮೇಲೆ ಸರಣಿ ಅತ್ಯಾಚಾರ ಆರೋಪ

► ಹಲವು ತಿಂಗಳು ವೇತನ ನೀಡದೆ ಜೀತಕ್ಕೆ ದುಡಿಸಿಕೊಳ್ಳುತ್ತಿದ್ದ ಮಾಲಕ

► ಪೊಲೀಸರಿಂದ ಪ್ರಕರಣ ದಾಖಲು

► ತಿಂಗಳುಗಟ್ಟಲೆ ಮಕ್ಕಳೊಂದಿಗೆ ಕಾಡಿನಲ್ಲೇ ವಾಸವಾಗಿದ್ದ ಅಮಾಯಕ ಮಹಿಳೆಯರು

► ಅಪತ್ಬಾಂಧವನಾಗಿ ಬಂದ ವಲಸೆ ಕಾರ್ಮಿಕ

ಬೆಂಗಳೂರು, ಮೇ 28: ರಾಜ್ಯದ ರಾಜಧಾನಿ ಬೆಂಗಳೂರು ಸಮೀಪದಲ್ಲೇ ಜಾರ್ಖಂಡ್‌ನ ಇಬ್ಬರು ಬುಡಕಟ್ಟು ಮಹಿಳೆಯರನ್ನು ಜೀತದಾಳುಗಳಾಗಿ ದುಡಿಸಿದ ಹಾಗೂ ಅವರಲ್ಲೊಬ್ಬಾಕೆಯ ಮೇಲೆ ಎರಡು ಬಾರಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತೆಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿರುವುದಾಗಿ ‘ನ್ಯೂಸ್18’ ಸುದ್ದಿ ಜಾಲತಾಣ ವರದಿ ಮಾಡಿದೆ. ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿರುವುದಾಗಿ ತಿಳಿದುಬಂದಿದೆ.

ಕಳೆದ ಫೆಬ್ರವರಿಯಲ್ಲಿ ಈ ಮಹಿಳೆಯರು ಫ್ಯಾಕ್ಟರಿಯಿಂದ ತಪ್ಪಿಸಿಕೊಳ್ಳುವಲ್ಲಿ ಸಫಲರಾಗಿದ್ದರು. ಈ ಅಮಾಯಕ ಮಹಿಳೆಯರಿಗೆ ಸಂತಾಲಿ ಭಾಷೆ ಬಿಟ್ಟರೆ ಬೇರೆ ಭಾಷೆ ಬರುತ್ತಿರಲಿಲ್ಲ. ಆದರೆ ಪರಿಸರದಲ್ಲಿ ಸಂತಾಲಿ ಭಾಷೆ ಬಲ್ಲವರು ಯಾರೂ ಇಲ್ಲದೆ ಇದ್ದುದರಿಂದ ಅವರಿಗೆ ಸ್ಥಳೀಯರಿಂದ ಸಹಾಯಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಸುಮಾರು ಒಂದು ತಿಂಗಳು ಪೂರ್ತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಕಾಡಿನಲ್ಲೇ ವಾಸವಾಗಿದ್ದರು.ಆನಂತರ ಮಾರ್ಚ್‌ನಲ್ಲಿ ಲಾಕ್‌ಡೌನ್ ಸಂದರ್ಭ ಸ್ಥಳೀಯನೊಬ್ಬ ಅವರಿಗೆ ಆಶ್ರಯ ಒದಗಿಸುವ ಆಮಿಷವೊಡ್ಡಿ ಅವರ ಲೈಂಗಿಕ ಶೋಷಣೆಗೆ ಯತ್ನಿಸಿದ್ದನು. ಮೇ 5ರಂದು ಈ ಮಹಿಳೆಯರು ಊರಿಗೆ ಮರಳಲು ರೈಲು ಟಿಕೆಟ್ ಪಡೆಯಲು ಅರ್ಜಿ ಸಲ್ಲಿಸಲು ಪೊಲೀಸ್ ಠಾಣೆಗೆ ಮರಳಿದಾಗ ಅವರ ದಾರುಣ ಕಥೆ ಬೆಳಕಿಗೆ ಬಂದಿತ್ತು. ತಮ್ಮ ಊರುಗಳಿಗೆ ನಿರ್ಗಮಿಸುತ್ತಿರುವ ವಲಸೆ ಕಾರ್ಮಿಕರ ಅರ್ಜಿಗಳನ್ನು ನೋಂದಾಯಿಸಲು ನೆರವಾಗುತ್ತಿದ್ದ ಜಾರ್ಖಂಡ್ ಮೂಲದ ನಿಕೋಲಾಸ್ ಮುರ್ಮು ಎಂಬವರ ಜೊತೆ ಅವರು ತಮ್ಮ ಗೋಳಿನ ಕಥೆಯನ್ನು ಹೇಳಿಕೊಂಡಿದ್ದರು.

ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳ ವಿರುದ್ದ ಭಾರತೀಯ ದಂಡಸಂಹಿತೆ ಸೆಕ್ಷನ್ 376 ಡಿ ಹಾಗೂ ಪರಿಶಿಷ್ಟಪಂಗಡ/ಜಾತಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇಬ್ಬರನ್ನೂ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಆದಾಗ್ಯೂ ಕಾರ್ಖಾನೆಯ ಮಾಲಕ ಅಥವಾ ಮೇಲ್ವಿಚಾರಕನ ವಿರುದ್ಧ ಲೈಂಗಿಕ ದೌರ್ಜನ್ಯ ಅಥವಾ ಜೀತದ ದುಡಿಮೆ ಆರೋಪಗಳಿಗೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿಲ್ಲ. ಇತ್ತ ಕಾರ್ಖಾನೆ ಕೂಡಾ ಈ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ತಿಳಿದುಬಂದಿದೆ. ಫೆಬ್ರವರಿ ಮಧ್ಯದ ವೇಳೆ ಅವರು ಕಾರ್ಖಾನೆಯಿಂದ ತಪ್ಪಿಸಿಕೊಂಡಿದ್ದು, ರಾಮನಗರ ಹಾಗೂ ಬೆಂಗಳೂರು ನಡುವೆ ಇರುವ ಅರಣ್ಯದಲ್ಲಿ ಅವರು ಮಕ್ಕಳೊಂದಿಗೆ ವಾಸಿಸಲು ಆರಂಭಿಸಿದ್ದರು. ಹಗಲು ಹೊತ್ತು ಕಾಡಿನಿಂದ ಹೊರಬಂದು ಸಮೀಪದ ಹಳ್ಳಿಗಳಲ್ಲಿ ಭಿಕ್ಷೆ ಬೇಡಿ ಅವರು ಬದುಕುತ್ತಿದ್ದರು. ಸುಮಾರು ಒಂದು ತಿಂಗಳು ಅವರು ಹೀಗೆಯೇ ಜೀವಿಸಿದ್ದರು ಎನ್ನಲಾಗಿದೆ. ಈ ಇಬ್ಬರು ಮಹಿಳೆಯರು ಹಾಗೂ ಅವರ ಮಕ್ಕಳು ಜಾರ್ಖಂಡ್‌ನ ಧುಮ್ಕಾ ಜಿಲ್ಲೆಯಲ್ಲಿರುವ ತಮ್ಮ ಊರಿಗೆ ವಾಪಸಾಗುವ ನಿರೀಕ್ಷೆಯಲ್ಲಿದ್ದಾರೆ. ಈ ಘೋರ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸಂಕಷ್ಟಕ್ಕೀಡಾದ ಕಾರ್ಮಿಕರ ಕ್ರಿಯಾಜಾಲ (ಸ್ವಾನ್) ಹಾಗೂ ಕರ್ನಾಟಕದ ವಲಸೆ ಕಾರ್ಮಿಕರ ಹೆಲ್ಪ್ ಲೈನ್ ಸಂತ್ರಸ್ತ ಮಹಿಳೆಯರ ನೆರವಿಗೆ ಬಂದಿದೆ. ಸಾಮಾಜ ಕಲ್ಯಾಣ ಇಲಾಖೆ ಕೂಡಾ ಅವರಿಗೆ ತುಸು ಪರಿಹಾರಧನ ನೀಡಿರುವುದಾಗಿ ತಿಳಿಸಿದೆ.

ಅನಾಗರಿಕತೆಗೆ ಬಲಿಪಶುಗಳಾದ ಬುಡಕಟ್ಟು ಮಹಿಳೆಯರು...

ಈ ಇಬ್ಬರೂ ಮಹಿಳೆಯರು ಜಾರ್ಖಂಡ್‌ನ ಸಂತಾಲಿ ಬುಡಕಟ್ಟಿನವರಾಗಿದ್ದು, ವಿವಾಹಿತರು. ಇಬ್ಬರಿಗೂ ಮಕ್ಕಳಿದ್ದಾರೆ. ಕೆಲಸದ ಹುಡುಕಾಟದಲ್ಲಿದ್ದ ಇವರನ್ನು, ದುಮ್ರು ಮೊಹಾಲಿ ಎಂಬಾತ ದಿಲ್ಲಿಯಲ್ಲಿನ ಏಜೆಂಟರಿಗೆ ಮಾರಾಟ ಮಾಡಿದ್ದ. ಈ ಮಹಿಳೆಯರು ಹಾಗೂ ಅವರ ಇಬ್ಬರು ಮಕ್ಕಳನ್ನು ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿತ್ತು ಎಂದು ಬೆಂಗಳೂರಿನ ಭಾರತ್ ಕೆಮಿಕಲ್ ಪ್ರಾಡಕ್ಟ್ಸ್ ಕಂಪೆನಿಯ ಉದ್ಯೋಗಿಯಾದ ನಿಕೋಲಾಸ್ ಮುರ್ಮು ತಿಳಿಸಿದ್ದಾರೆ. ತಿಂಗಳಿಗೆ 9 ಸಾವಿರ ರೂ. ವೇತನದ ಭರವಸೆಯೊಂದಿಗೆ ಈ ಯುವತಿಯರನ್ನು ಕೆಂಗೇರಿ ಹೋಬಳಿಯಲ್ಲಿರುವ ಅಗರಬತ್ತಿ ಕಾರ್ಖಾನೆಯಲ್ಲಿ ಕೆಲಸಕ್ಕಿಡಲಾಗಿತ್ತು. ಆದರೆ ಅಲ್ಲಿ ಅವರಿಗೆ ವಾರಕ್ಕೆ ಕೇವಲ 200 ರೂ. ನೀಡಲಾಗುತ್ತಿತ್ತು. ಬೆೆಳಗ್ಗೆ 6ರಿಂದ ರಾತ್ರಿ 10 ಗಂಟೆಯತನಕ, ಕೆಲವೊಮ್ಮೆ ಮಧ್ಯರಾತ್ರಿಯ ತನಕವೂ ಅವರನ್ನು ದುಡಿಸಲಾಗುತ್ತಿತ್ತು. ನಂತರ ಜನವರಿ ತಿಂಗಳ ಎರಡನೇ ವಾರದಲ್ಲಿ ಈ ಮಹಿಳೆಯರ ಪೈಕಿ ಒಬ್ಬಾಕೆಯ ಮೇಲೆ ಆಕೆಯ ಮೇಲಧಿಕಾರಿಗಳು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು ಎಂದು ನಿಕೋಲಾಸ್ ಹೇಳಿದ್ದಾರೆ. ಈ ಘಟನೆಯ ಬಳಿಕ ಭಯಭೀತರಾದ ಅವರು ಪರಾರಿಯಾಗಲು ಯತ್ನಿಸಿದರು. ರೈಲ್ವೆ ನಿಲ್ದಾಣವನ್ನು ತಲುಪಲು ಅವರು ಯತ್ನಿಸಿದಾಗ, ಕಾರ್ಖಾನೆಯ ಮೇಲ್ವಿಚಾರಕ ಸಂಜೀವ್ ಎಂಬಾತ ಅವರನ್ನು ಒತ್ತಾಯವಾಗಿ ಹಿಂದಕ್ಕೆ ಕರೆತಂದು ಕೋಣೆಯಲ್ಲಿ ಕೂಡಿಹಾಕಿದ್ದ. ಕಾರ್ಖಾನೆಯ ಇನ್ನಿಬ್ಬರು ಉದ್ಯೋಗಿಗಳಾದ ಸಂಜಯ್ ಹಾಗೂ ಕಿರಣ್ ಎಂಬವರು ಈ ಮಹಿಳೆಯರಲ್ಲೊಬ್ಬರ ಮೇಲೆ ಹಲವು ದಿನಗಳ ಕಾಲ ಸರಣಿ ಅತ್ಯಾಚಾರ ನಡೆಸಿದರು. ಕಾರ್ಖಾನೆಯ ಮಾಲಕ ದೇವೇಂದ್ರನಿಗೆ ಇದು ತಿಳಿದಿದ್ದರೂ, ಆತ ಅವರನ್ನು ಮನಬಂದಂತೆ ವರ್ತಿಸಲು ಬಿಟ್ಟಿದ್ದನೆಂದು ನಿಕೋಲಾಸ್ ಮುರ್ಮು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News