‘ಹಿಂದುತ್ವದ ಬಗ್ಗೆ ಮಾತನಾಡಿದರೆ ಪರಿಣಾಮ ನೆಟ್ಟಗಿರಲ್ಲ': ಮಾಜಿ ಸಂಸದ ಉಗ್ರಪ್ಪರಿಗೆ ಜೀವ ಬೆದರಿಕೆ ಪತ್ರ

Update: 2020-05-29 16:02 GMT

ಬೆಂಗಳೂರು, ಮೇ 29: ಹಿಂದುತ್ವದ ಬಗ್ಗೆ ಮಾತನಾಡಿದರೆ ಪರಿಣಾಮ ನೆಟ್ಟಗೆ ಇರಲ್ಲ ಎಂದು ಜೀವ ಬೆದರಿಕೆ ಹಾಕಿರುವ ಪತ್ರವೊಂದನ್ನು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರ ನಿವಾಸಕ್ಕೆ ಕಿಡಿಗೇಡಿಗಳು ರವಾನಿಸಿದ್ದು, ಈ ಸಂಬಂಧ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.

ಶುಕ್ರವಾರ ಈ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ದೂರು ಸಲ್ಲಿಸಿರುವ ವಿ.ಎಸ್.ಉಗ್ರಪ್ಪ ಅವರು, ದುಷ್ಕರ್ಮಿಗಳನ್ನು ಪತ್ತೆ ಮಾಡುವ ಜೊತೆಗೆ, ನನಗೂ ಹಾಗೂ ಕುಟುಂಬಸ್ಥರಿಗೂ ಪೊಲೀಸ್ ಭದ್ರತೆ ನೀಡುವಂತೆ ಕೋರಿದ್ದಾರೆ.

ಇಲ್ಲಿನ ಮಹಾಲಕ್ಷ್ಮೀಪುರಂ ಅಂಚೆ ಕಚೇರಿಯ ಮುದ್ರೆ ಹೊಂದಿರುವ ಪತ್ರವೊಂದನ್ನು ಶುಕ್ರವಾರ ವಿ.ಎಸ್.ಉಗ್ರಪ್ಪ ಅವರ ನಿವಾಸಕ್ಕೆ ತಲುಪಿಸಿದ್ದು, ಇದರಲ್ಲಿ ಪತ್ರಿಕಾಗೋಷ್ಠಿಗಳಲ್ಲಿ ಹಿಂದುತ್ವ, ಹಿಂದೂ ಸಂಸ್ಕೃತಿ, ಹಿಂದೂ ದೇವತೆಗಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತೀಯಾ. ನೀನು ನಿನ್ನ ಕುಟುಂಬದವರು ಹಿಂದೂಗಳೇ ಅಲ್ಲ ಎಂಬಿತ್ಯಾದಿಯಾಗಿ ನಿಂದಿಸಲಾಗಿದೆ ಎಂದು ತಿಳಿದುಬಂದಿದೆ.

ಹಿಂದೂಗಳ ವಿರುದ್ಧದ ಹೇಳಿಕೆಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ. ಯಾವುದೇ ಹಂತಕ್ಕೂ ನಾವು ಸಿದ್ಧರಿದ್ದೇವೆಂದು ಪ್ರಾಣ ಬೆದರಿಕೆಯನ್ನು ಹಾಕಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ವಿ.ಎಸ್.ಉಗ್ರಪ್ಪ ದೂರಿನಲ್ಲಿ ಒತ್ತಾಯ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News