ಜಾಮೀನಿನ ಮೇಲೆ ಬಿಡುಗಡೆಗೊಂಡ ಖೈದಿಗಳಿಗೆ ಕ್ವಾರಂಟೈನ್ ಕಡ್ಡಾಯ: ಹೈಕೋರ್ಟ್ ಆದೇಶ

Update: 2020-05-29 16:30 GMT

ಬೆಂಗಳೂರು, ಮೇ 29: ಕಾರಾಗೃಹದಿಂದ ಜಾಮೀನಿನ ಮೇಲೆ ಬಿಡುಗಡೆಯಾದ ವಿಚಾರಣಾಧೀನ ಖೈದಿಗಳು ಕಡ್ಡಾಯವಾಗಿ ಹೋಂ ಕ್ವಾರಂಟೈನ್ ನಲ್ಲಿ ಇರಬೇಕೆಂದು ಹೈಕೋರ್ಟ್ ಆದೇಶ ನೀಡಿದೆ.

ಕೊರೋನ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇತ್ತೀಚೆಗೆ ಜಾಮೀನು ಮಂಜೂರು ಮಾಡಿದ ಪ್ರಕರಣಗಳಲ್ಲಿ 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ನಲ್ಲಿ ಇರಬೇಕೆಂದು ಖೈದಿಗಳಿಗೆ ಹೈಕೋರ್ಟ್ ಷರತ್ತು ವಿಧಿಸಿದೆ.

ಖೈದಿಗಳು ಕಾರಾಗೃಹದಿಂದ ಮುಕ್ತಿ ಪಡೆದರೂ 14 ದಿನ ಗೃಹ ಬಂಧನ ಅನುಭವಿಸಬೇಕಾಗಿದೆ. ಸಾಮಾನ್ಯವಾಗಿ ಜಾಮೀನು ನೀಡಿದ ಸಂದರ್ಭದಲ್ಲಿ ಒಂದಷ್ಟು ಮೊತ್ತಕ್ಕೆ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ವ್ಯಕ್ತಿಗಳ ಭದ್ರತಾ ಖಾತರಿ ಒದಗಿಸಬೇಕು. ಸಾಕ್ಷ್ಯಾಧಾರ ತಿರುಚುವ ಅಥವಾ ನಾಶಪಡಿಸುವುದಕ್ಕೆ ಪಯತ್ನಿಸಬಾರದು. ತನಿಖೆಗೆ ಸಹಕರಿಸಬೇಕು. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂದು ಕೋರ್ಟ್ ಹಗಳು ಆರೋಪಿಗಳಿಗೆ ಷರತ್ತು ವಿಧಿಸುತ್ತವೆ.

ಸದ್ಯ ಕೊರೋನ ವೈರಸ್ ಅನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಪೀಠವು ಕಾರಾಗೃಹದಿಂದ ಜಾಮೀನಿನ ಮೇಲೆ ಬಿಡುಗಡೆಯಾದ ವಿಚಾರಣಾಧೀನ ಖೈದಿಗಳಿಗೆ ಕೊರೋನ ಸೋಂಕು ತಗುಲದಿರಲಿ ಎಂಬ ಉದ್ದೇಶದಿಂದ ಜಾಮೀನಿನ ಮೇಲೆ ಕಾರಾಗೃಹದಿಂದ ಬಿಡುಗಡೆಯಾದ ತಕ್ಷಣವೇ ವೈದ್ಯಾಧಿಕಾರಿ ಬಳಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಅಲ್ಲದೆ, ಸೋಂಕಿಲ್ಲದೆ ಇದ್ದರೆ ಕಾರಾಗೃಹದಿಂದ ಬಿಡುಗಡೆಯಾದ ದಿನದಿಂದ 14 ದಿನಗಳ ಕಾಲ ಸ್ವತಃ ಖೈದಿಯೇ ಹೋಂ ಕ್ವಾರಂಟೈನ್ ಗೆ ಒಳಗಾಗಬೇಕು ಎಂದು ಹೈಕೋರ್ಟ್ ಷರತ್ತು ವಿಧಿಸಿದೆ. ಇತ್ತೀಚೆಗೆ ಸುಮಾರು 11 ಪ್ರಕರಣಗಳಲ್ಲಿ 19 ಮಂದಿಗೆ ಖೈದಿಗಳಿಗೆ ಜಾಮೀನು ಮಂಜೂರು ಮಾಡಿದೆ.

ಖೈದಿಗಳಿಗೆ ಕೊರೋನ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಹೈಕೋರ್ಟ್ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆ ಮೇರೆಗೆ 600ಕ್ಕೂ ವಿಚಾರಣಾಧೀನ ಖೈದಿಗಳಿಗೆ ಮಧ್ಯಂತರ ಜಾಮೀನು ಹಾಗೂ ಸಜಾ ಬಂಧಿಗಳಿಗೆ ಪರೋಲ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News