ಉಳಿದಿರುವ ಕಬ್ಬಿಣದ ಅದಿರಿನ ಮಾರಾಟಕ್ಕಿರುವ ತೊಂದರೆ ನಿವಾರಿಸಿ: ಅಧಿಕಾರಿಗಳಿಗೆ ಯಡಿಯೂರಪ್ಪ ಸೂಚನೆ

Update: 2020-05-29 16:39 GMT

ಬೆಂಗಳೂರು, ಮೇ 29: ರಾಜ್ಯದ ಅರಣ್ಯ ಪ್ರದೇಶದಲ್ಲಿನ ಕಬ್ಬಿಣದ ಅದಿರಿನ ಖನಿಜಾನ್ವೇಷಣೆಗೆ ಶೀಘ್ರವಾಗಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಖನಿಜ ನಿಕ್ಷೇಪಗಳ ಪತ್ತೆ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ, ಇಂದಿಲ್ಲಿ ಅಧಿಕಾರಿಗಳಿಗೆ ಸಲಹೆ ಮಾಡಿದ್ದಾರೆ.

ಶುಕ್ರವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ರದ್ದುಪಡಿಸಿದ `ಸಿ' ವರ್ಗದ ಗಣಿ ಗುತ್ತಿಗೆ/ಸ್ಟಾಕ್ ಯಾರ್ಡ್ ಮತ್ತು ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ 2016ರ ಮುಂಚೆ ಮುಟ್ಟುಗೋಲು ಹಾಕಿಕೊಂಡ ಅಂದಾಜು 8 ಮಿಲಿಯನ್ ಟನ್ ಕಬ್ಬಿಣದ ಅದಿರು ಮಾರಾಟವಾಗದೇ ಉಳಿದಿದೆ. ಅದನ್ನು ಮಾರಾಟ ಮಾಡಲು ಇರುವ ತಾಂತ್ರಿಕ ತೊಂದರೆಯನ್ನು ಎಜಿಯೊಂದಿಗೆ ಚರ್ಚಿಸಿ ಶೀಘ್ರ ವಿಲೇ ಮಾಡಲು ಸೂಚಿಸಿದರು.

ರಾಜ್ಯದಲ್ಲಿನ ಖನಿಜ ಪರವಾನಿಗೆ ಇಲ್ಲದೆ, ಅಕ್ರಮ ಕಲ್ಲು ಗಣಿಗಾರಿಕೆ ಮಾಡುತ್ತಿರುವುದನ್ನು ತಡೆಗಟ್ಟಲು ಡ್ರೋಣ್ ಸರ್ವೆ ಕೈಗೊಳ್ಳಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು ಎಂದ ಯಡಿಯೂರಪ್ಪ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತೆರಿಗೆ ಸೋರಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಮಾತನಾಡಿ, ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ಮತ್ತು ಜನರ ಜೀವನ ಮಟ್ಟ ಉತ್ತಮಪಡಿಸಲು ಗುತ್ತಿಗೆದಾರರಿಂದ ರಾಜಧನ ಶೇ.10ರಷ್ಟು ಮತ್ತು ಶೇ.30ರಷ್ಟು ಅನ್ವಯವಾಗುವಂತೆ ಜಿಲ್ಲಾ ಪ್ರತಿಷ್ಠಾನ ನಿಧಿಗೆ ಈವರೆಗೆ ವಂತಿಗೆ 28 ಕೋಟಿ ರೂ.ಸಂಗ್ರಹವಾಗಿದ್ದು, ಕೇಂದ್ರ ಸರಕಾರದ ನಿರ್ದೇಶನದಂತೆ ಕೊರೋನ ಸೋಂಕು ತಡೆಗಟ್ಟಲು ಈ ಮೊತ್ತವನ್ನು ವಿನಿಯೋಗಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಅಂದಾಜು 45 ದಶಲಕ್ಷ ಮೆಟ್ರಿಕ್ ಟನ್ ಮರಳಿನ ಬೇಡಿಕೆ ಇದ್ದು, 38 ದಶಲಕ್ಷ ಮೆಟ್ರಿಕ್ ಟನ್ ಮರಳು ಪೂರೈಕೆ ಮಾಡಲಾಗುತ್ತಿದೆ. ಹೊಸ ಮರಳು ನೀತಿಯ ಅನುಷ್ಟಾನದಿಂದ ಸರಕಾರಕ್ಕೆ ಹೆಚ್ಚಿನ ರಾಜಧನ ಸಂಗ್ರಹವಾಗಲಿದೆ ಎಂದ ಅವರು, ಕೆಎಂಎಂಸಿಆರ್ ನಿಯಮಾವಳಿಗಳ ತಿದ್ದುಪಡಿ ನಂತರ ಬಾಕಿ ಇರುವ ಅರ್ಹ ಅರ್ಜಿಗಳಿಗೆ ಗಣಿಗುತ್ತಿಗೆಗಳ ಮಂಜೂರಾತಿ ಮತ್ತು ಹರಾಜು ಮೂಲಕ ಕಟ್ಟಡ ಕಲ್ಲು ಗಣಿ ಗುತ್ತಿಗೆಗಳ ಮಂಜೂರಾತಿ ನೀಡಲಾಗುವುದು ಎಂದರು.

ಕರ್ನಾಟಕ ಉಪ ಖನಿಜ ರಿಯಾಯಿತಿ(ತಿದ್ದುಪಡಿ) ನಿಯಮ 2020ರ ಜಾರಿಗೊಳಿಸಲು ಕ್ರಮ ವಹಿಸಲಾಗುತ್ತಿದ್ದು, ಕಲ್ಲು ಗಣಿ ಗುತ್ತಿಗೆ ಮಂಜೂರಾತಿ ಮತ್ತು ಪರವಾನಗಿ ವಿತರಣಾ ನಿಯಮಗಳ ಸರಳೀಕರಣ ಹಾಗೂ ಉಪ ಖನಿಜಗಳ ಮೇಲಿನ ರಾಜಧನ ಪರಿಷ್ಕರಣೆ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎನ್‍ಎಸ್ ಪ್ರಸಾದ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ವರ ರಾವ್, ನಿರ್ದೇಶಕ ಶಿವಶಂಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News