ಪಿಐಟಿ ಎನ್‍ಡಿಪಿಎಸ್ ಕಾಯ್ದೆಯಡಿ ನೈಜೀರಿಯಾ ಪ್ರಜೆಯ ಬಂಧನ: ಪೊಲೀಸ್ ಆದೇಶ ಎತ್ತಿ ಹಿಡಿದ ಹೈಕೋರ್ಟ್

Update: 2020-05-29 16:48 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 29: ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿದ್ದ ನೈಜೀರಿಯಾ ದೇಶದ ಪ್ರಜೆಯ ಮೇಲೆ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನಗರ ಪೊಲೀಸ್ ಆಯುಕ್ತರು ಪಿಐಟಿ ಎನ್‍ಡಿಪಿಎಸ್ ಕಾಯ್ದೆಯಡಿ ಹೊರಡಿಸಿದ್ದ ಬಂಧನದ ಆಜ್ಞೆಯನ್ನು ಹೈಕೋರ್ಟ್ ಸಲಹಾ ಮಂಡಳಿ ಎತ್ತಿ ಹಿಡಿದಿದೆ.

ನೈಜೀರಿಯಾ ಪ್ರಜೆ ಮಕುಕೊ ಚುಕುಕಾ ಮುಲೊಕ್ವು ಎಂಬಾತನ ಬಂಧನಕ್ಕೆ ಈ ಕಾಯ್ದೆ ಅನ್ವಯ ರಾಜ್ಯದಲ್ಲಿ ಮೊದಲ ಬಾರಿಗೆ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದರು. ಈತನ ಮೇಲೆ ಮಾದಕ ವಸ್ತುಗಳ ಮಾರಾಟ ಆರೋಪದಲ್ಲಿ ನಗರದ ಐದು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.

ಆರೋಪಿ 2012ರಲ್ಲಿ ಭಾರತಕ್ಕೆ ಬಂದು ನಗರದಲ್ಲಿ ನಿರಂತರವಾಗಿ ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿದ್ದ. ಹಾಗೆಯೇ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪದೇ ಪದೆ ಮನೆ ಬದಲಾವಣೆ ಮಾಡುತ್ತಿದ್ದ. ಈತನ ಈ ಕೃತ್ಯಕ್ಕೆ ಪತ್ನಿ ಸಹಾಯ ಮಾಡಿದ್ದಳು ಎನ್ನುವ ಮಾಹಿತಿ ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಈ ಕಾಯ್ದೆಯಡಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಅಪರಾಧ ವಿಭಾಗದ ಡಿಸಿಪಿ ಕುಲ್‍ದೀಪ್ ಕುಮಾರ್ ಜೈನ್, ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಅವರ ಶಿಫಾರಸ್ಸು ಮೇರೆಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕಳೆದ ಮಾ.16ರಂದು ಆತನ ಬಂಧನಕ್ಕೆ ಆದೇಶಿಸಿದ್ದರು. ಮಾ.17ರಂದು ವಿದ್ಯಾರಣ್ಯಪುರದ ವಡೇರಹಳ್ಳಿಯ ತನ್ನ ವಾಸದ ಬಾಡಿಗೆ ಮನೆಯಲ್ಲಿ ಇದ್ದಾಗ ಆತನನ್ನು ಬಂಧಿಲಾಗಿತ್ತು.

ಮಕುಕೊ ಚುಕುಕಾ ಬಂಧನದ ವಿಷಯ ನ್ಯಾಯಾಲಯದ ಮೆಟ್ಟಿಲೇರಿತ್ತು. ರಾಜ್ಯ ಹೈಕೋರ್ಟ್‍ನ ಮೂವರು ನ್ಯಾಯಾಧೀಶರನ್ನು ಒಳಗೊಂಡ ಸಲಹಾ ಮಂಡಳಿಯು ಪೊಲೀಸ್ ಆಯುಕ್ತರು ಹೊರಡಿಸಿದ್ದ ಬಂಧನದ ಕ್ರಮವನ್ನು ಎತ್ತಿಹಿಡಿದಿದೆ. ರಾಜ್ಯ ಗೃಹ ಇಲಾಖೆಯು ಮಕುಕೊ ಚುಕುಕಾ ಬಂಧನದ ಆದೇಶವನ್ನು ಸ್ಥಿರೀಕರಿಸಿ ಒಂದು ವರ್ಷ ಕಾರಾಗೃಹ ವಾಸವನ್ನು ಖಾಯಂಗೊಳಿಸಿ ಆದೇಶಿಸಿದೆ.

ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಧರ ಪೂಜಾರ ಅವರು ಈ ಕಾಯ್ದೆಯಡಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಈತನ ವಿರುದ್ಧ ಕ್ರಮಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸಮಗ್ರ ವರದಿ ಸಲ್ಲಿಸಿದ್ದರು. ಡ್ರಗ್ಸ್ ಮಾರಾಟ ಜಾಲವನ್ನು ನಿಯಂತ್ರಿಸಿ ಸಮಾಜದ ಸ್ವಾಸ್ಥ್ಯ ಕಾಪಾಡುವ ಸಲುವಾಗಿ ಇದು ಕರ್ನಾಟಕ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸಿಸಿಬಿ ಪೊಲೀಸರಿಂದ ಅನುಷ್ಠಾನಗೊಂಡ ಕಾಯ್ದೆಯಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News