ಕಾರ್ಮಿಕರ ಕೆಲಸದ ಅವಧಿ ವಿಸ್ತರಣೆ ಪ್ರಶ್ನಿಸಿ ಅರ್ಜಿ ಸಲ್ಲಿಕೆ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2020-05-29 17:12 GMT

ಬೆಂಗಳೂರು, ಮೇ 29: ರಾಜ್ಯದ ಕಾರ್ಮಿಕರ ಕೆಲಸದ ಅವಧಿಯನ್ನು 48 ಗಂಟೆಯಿಂದ 60 ಗಂಟೆಯವರೆಗೆ ವಿಸ್ತರಿಸಿ ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ದೀಪಾಂಜಲಿ ನಗರದ ಎಚ್.ಮಾರುತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ವಿಭಾಗೀಯ ನ್ಯಾಯಪೀಠ, ಕಾರ್ಮಿಕ ಇಲಾಖೆಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿತು.

ಕಾರ್ಖಾನೆ ಕಾಯ್ದೆಯ ಸೆಕ್ಷನ್ 51ರ ಅಡಿಯಲ್ಲಿ ಒಂದು ವಾರದಲ್ಲಿ ಗರಿಷ್ಠ ಕಾರ್ಮಿಕರ ಕೆಲಸದ ಅವಧಿ 48 ಗಂಟೆ ಆಗಿರುತ್ತದೆ. ಆದರೆ, ಸೆಕ್ಷನ್ 5ರ ಅಡಿಯಲ್ಲಿ ತುರ್ತು ಸಂದರ್ಭ ಎಂದು ತೀರ್ಮಾನಿಸಿ 60 ಗಂಟೆಯವರೆಗೆ ಕಾರ್ಮಿಕರ ಕೆಲಸದ ಅವಧಿಯನ್ನು ವಿಸ್ತರಿಸಿ ಅಧಿಸೂಚನೆ ಹೊರಡಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಮುಂದಿನ ವಿಚಾರಣೆ ವೇಳೆ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಗಳು ಆಕ್ಷೇಪಣೆ ಸಲ್ಲಿಸಬೇಕು ಹಾಗೂ ಅಧಿಸೂಚನೆ ಹೊರಡಿಸಿರುವ ಸಂಬಂಧ ವಿವರಣೆ ನೀಡಬೇಕೆಂದು ಸೂಚನೆ ನೀಡಿತು.

ಕಾರ್ಖಾನೆ ಕಾಯ್ದೆಯ ಸೆಕ್ಷನ್ 5ರ ಅಡಿಯಲ್ಲಿ ತುರ್ತು ಸಂದರ್ಭ ಎಂದು ಪರಿಗಣಿಸಿ ಕಾರ್ಮಿಕರ ಕೆಲಸದ ಅವಧಿಯನ್ನು 60 ಗಂಟೆಗೆ ವಿಸ್ತರಿಸಿದೆ. ಆದರೆ, ಕಾರ್ಖಾನೆಯ ಕಾರ್ಮಿಕರಿಗೆ ಕೋವಿಡ್-19 ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ, ಮಾಸ್ಕ್ ಧರಿಸುವುದು ಇತ್ಯಾದಿಗಳನ್ನು ಕಡ್ಡಾಯಗೊಳಿಸಲಾಗಿದೆ ಎಂದು ನ್ಯಾಯಪೀಠವು ಸರಕಾರವನ್ನು ಪ್ರಶ್ನಿಸಿತು.

ಗುಜರಾತ್ ಸರಕಾರ 6 ಗಂಟೆಗಳ ನಿರಂತರ ಕೆಲಸಕ್ಕೆ ಯಾವುದೇ ಕಾರ್ಮಿಕರನ್ನು ಒತ್ತಾಯಿಸುವುದಿಲ್ಲ ಎಂದು ಹೇಳಿದೆ. ಅಗತ್ಯ ಬಿದ್ದರೆ ಕೆಲಸದ ಮಧ್ಯದಲ್ಲಿಯೇ ಅರ್ಧ ಗಂಟೆ ವಿರಾಮವನ್ನು ಒದಗಿಸಲಾಗುವುದು ಎಂದು ಹೇಳಿದೆ ಎಂದು ನ್ಯಾಯಪೀಠವು ಸರಕಾರಿ ಪರ ವಕೀಲರ ಗಮನಕ್ಕೆ ತಂದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News