ಕೊರೋನ ಮತ್ತು ಶಿಕ್ಷಣ ಸಂಸ್ಥೆಗಳು

Update: 2020-05-29 17:47 GMT

ಮಾನ್ಯರೇ,

ವಿಶ್ವವ್ಯಾಪಕವಾಗಿ ಹಬ್ಬಿಕೊಂಡಿರುವ ಮಹಾಮಾರಿ ಕೊರೋನ ಇಂದಿನವರೆಗೂ ಒಂದು ನಿರ್ಣಾಯಕ ಸ್ಥಿತಿಗೆ ತಲುಪಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಸ್ಥಳೀಯಾಡಳಿತಗಳು ಸಾಧ್ಯವಾಗುವ ಎಲ್ಲಾ ಕ್ರಮಗಳನ್ನೂ ಕೈಗೊಂಡಿವೆ. ಕರ್ಫ್ಯೂ, ಲಾಕ್‌ಡೌನ್, ಸೀಲ್‌ಡೌನ್, ಕಾರಂಟೈನ್ ಇತ್ಯಾದಿ ವಿಭಿನ್ನ ರೀತಿಯಲ್ಲಿ ಈ ಮಹಾಮಾರಿಯನ್ನು ತಡೆಯುವ ಕ್ರಮಗಳನ್ನು ಕೈಗೊಂಡಿವೆ. ಒಂದೆಡೆ ಮಾಹಾಮಾರಿಯ ಅಪಾಯವಾದರೆ, ಇನ್ನೊಂದೆಡೆ ಆರ್ಥಿಕತೆ ಕುಸಿತದಿಂದಾಗಿ ದೇಶಕ್ಕೆ ಅಪಾಯ ಎದುರಾಗಿದೆ. ಹಾಗಾಗಿ ಸರಕಾರ ಹಂತ ಹಂತವಾಗಿ ಲಾಕ್‌ಡೌನ್‌ನ್ನು ಸಡಿಲಗೊಳಿಸುತ್ತಿದೆ. ಪರಿಣಾಮದಿಂದಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಮಹಾಮಾರಿಯು ಎಂದು ಅಂತ್ಯವಾಗುತ್ತದೆ. ಹೇಗೆ ನಿವಾರಣೆಯಾಗುತ್ತದೆ ಎಂಬ ಖಚಿತ ಮಾಹಿತಿಯೇ ಇಲ್ಲ.

ಇದೊಂದು ತುಂಬಾ ವೇಗವಾಗಿ ಒಬ್ಬರಿಂದೊಬ್ಬರಿಗೆ ಹರಡುವ ಕಾಯಿಲೆ. ಆದುದರಿಂದ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಹಾಕುವುದು ಮಾತ್ರ ಸದ್ಯಕ್ಕೆ ಇರುವ ನಿವಾರಣೋಪಾಯ. ಸರಕಾರ ಸೆಪ್ಟಂಬರ್‌ನಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಬಹುದು ಎಂಬ ಸೂಚನೆ ನೀಡಿದೆ. ಅದಕ್ಕಾಗಿ ಶಿಕ್ಷಣ ಸಂಸ್ಥೆಗಳು ಕಾದು ನಿಂತಿವೆ. ಶಿಕ್ಷಣ ಮಾರಾಟ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳು ಈಗಾಗಲೇ ಪುಸ್ತಕ, ಯೂನಿಫಾರ್ಮ್ ಮಾತ್ರವಲ್ಲ ಶುಲ್ಕ ಪಡೆಯಲು ಆರಂಭಿಸಿವೆ ಎಂಬ ವದಂತಿ ಇದೆ. ಇವೆಲ್ಲಾ ಶಿಕ್ಷಣ ಸಂಸ್ಥೆಗಳು ಸದ್ಯದಲ್ಲೇ ಆರಂಭವಾಗುವ ಸೂಚನೆ ಆಗಿದೆ. ಇಂತಹ ಮಾಹಾಮಾರಿಯ ಅಪಾಯ ಉಳಿದಿರುವಾಗ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವುದು ಸರಿಯೇ?

ವಿದ್ಯಾರ್ಥಿಗಳ ಪೋಷಕರು ಈ ಸಂದರ್ಭದಲ್ಲಿ ಬಹಳಷ್ಟು ಆಳವಾಗಿ ಯೋಚಿಸಬೇಕಾಗಿದೆ. ಈ ಕೆಲವು ವಿಚಾರಗಳತ್ತ ವಿಶೇಷ ಗಮನ ಹರಿಸಬೇಕಾಗಿದೆ.

1. ಸರಕಾರ ಸದ್ಯ ಸೂಚಿಸಿರುವ ಕಡ್ಡಾಯ ಕ್ರಮಗಳಂತೆ (ಮುಖಗವಸು) ಅಂದರೆ ಮಾಸ್ಕ್ ಧರಿಸಬೇಕು. ವಿದ್ಯಾರ್ಥಿಗಳು ತರಗತಿಯೊಳಗೂ, ಹೊರಗೂ ಅಂತರ ಕಾಯ್ದುಕೊಳ್ಳಬೇಕು. ಅಂಗನವಾಡಿ(k.g.school) ಒಂದರಿಂದ ಐದನೇ ತರಗತಿಯ ಅಂದರೆ ಹತ್ತು ವರ್ಷದ ಕೆಳಗಿನ ಮಕ್ಕಳಿಗೆ ಪ್ರಾಯೋಗಿಕವಾಗಿ ಇದು ಸಾಧ್ಯವೇ?

ಮಕ್ಕಳಿಗೊಂದು ಶಿಕ್ಷೆಯಂತಾಗಬಹುದು. ಇದೊಂದು ವಿಫಲ ಪ್ರಯೋಗವಾಗಬಹುದು. ಈ ಮಹಾಮಾರಿಯಿಂದ ಸಂಪೂರ್ಣ ರಕ್ಷಣೆಯ ಖಾತರಿ ಇದೆಯೇ?

2. ಶಿಕ್ಷಣ ಸಂಸ್ಥೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿ ರಬಹುದು. ಪ್ರಾರ್ಥಮಿಕ, ಹೈಸ್ಕೂಲ್, ಕಾಲೇಜಿನವರೆಗೂ ವಿದ್ಯಾರ್ಥಿಗಳು ಒಂದೇ ಸಂಸ್ಥೆಯೊಳಗಿರಬಹುದು. ಅಕಸ್ಮಾತ್ ಯಾವುದಾದರೊಂದು ಮಗುವಿಗೆ ಸೋಂಕು ತಗಲಿದರೆ ಇಡೀ ಸಂಸ್ಥೆಯನ್ನೇ ಸೀಲ್‌ಡೌನ್ ಮಾಡುವಿರಾ? ಸಾವಿರಾರು ವಿದ್ಯಾರ್ಥಿಗಳ ಪೋಷಕರನ್ನೂ ಕ್ವಾರಂಟೈನ್‌ಗೆ ಒಳಪಡಿಸಬೇಕಾಗಬಹುದಲ್ಲವೇ? ಅಂತಹ ಸಂಸ್ಥೆಗಳನ್ನೇ ಮುಚ್ಚುವಂತಾಗಬಹುದಲ್ಲವೇ?

3. ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ಯಾವುದೇ ಒಬ್ಬ ವಿದ್ಯಾರ್ಥಿ ಸೋಂಕಿತನಾಗಿ ಸಾವಿಗೀಡಾದರೆ ಯಾರು ಹೊಣೆ? ಆ ಸಂಸ್ಥೆಯೇ? ಅಥವಾ ಸರಕಾರವೇ?ಸಂಸ್ಥೆ ಹೊಣೆಗಾರಿಕೆಯಿಂದ ಜಾರಿಕೊಳ್ಳಬಹುದು. ಸರಕಾರ ಎರಡು ಅಥವಾ ಮೂರು ಲಕ್ಷ ಪರಿಹಾರ ಘೋಷಿಸಬಹುದು. ಪೋಷಕರು ಯೋಚಿಸಬೇಕು. ನಿಮ್ಮ ಕರುಳ ಕುಡಿಯಾದ ಮಗುವನ್ನು ಇಂತಹ ಆಪತ್ತಿಗೊಡ್ಡಬೇಕೆ? ಶಿಕ್ಷಣ ಬೇಕು. ಜೀವ ಉಳಿದರೆ ಶಿಕ್ಷಣ. ಸುರಕ್ಷೆಯ ಖಾತರಿ ಇದೆಯೇ?

4. ಶಾಲಾ ವಾಹನಗಳಲ್ಲಿ ರಿಕ್ಷಾ, ಕಾರುಗಳಲ್ಲಿ ಅಂತರ ಕಾಯುವ ನಿಯಮ ಪಾಲನೆ ಸಾಧ್ಯವೇ? ಈಗಾಗಲೇ ಕೆಲಸದ ಒತ್ತಡದಲ್ಲಿರುವ ಪೊಲೀಸರು ಶಾಲಾವಾಹನಗಳನ್ನು ನಿಯಂತ್ರಿಸುವುದು ಅಸಾಧ್ಯ.

ಪೋಷಕರು ಶಾಲಾ-ಕಾಲೇಜುಗಳಿಗೆ ಶುಲ್ಕ ಕೊಡುವ ಮೊದಲು ಮಕ್ಕಳ ಸುರಕ್ಷೆಯ ಕುರಿತು ಖಾತರಿಪಡಿಸಿಕೊಳ್ಳಬೇಕು. ಶಿಕ್ಷಣಕ್ಕಿಂತ ಜೀವ ಮುಖ್ಯ. ಒಂದು ವರ್ಷದ ಶಿಕ್ಷಣ ಮುಂದೂಡಬಹುದು. ಇಂತಹ ಅಪಾಯದ ಕಾಲದಲ್ಲಿ ಪರ್ಯಾಯ ಶಿಕ್ಷಣ ವಿಧಾನಗಳನ್ನು ಸರಕಾರ ಜಾರಿಗೊಳಿಸಬಹುದು. ಆದುದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸುವ ಮೊದಲು ಯೋಚಿಸಿರಿ. ಸುರಕ್ಷೆ ಖಾತರಿಪಡಿಸಿಕೊಳ್ಳಿ. ಕೊರೋನ ಮಹಾಮಾರಿ ಮಿತಿಮೀರಿ ಹಬ್ಬುತ್ತಿದೆ ಎಚ್ಚರವಿರಲಿ. 

Writer - *ಪ್ರೊ. ಬಿ.ಎಂ.ಇಚ್ಲಂಗೋಡು

contributor

Editor - *ಪ್ರೊ. ಬಿ.ಎಂ.ಇಚ್ಲಂಗೋಡು

contributor

Similar News